ದೆಹಲಿ ಗಲಭೆ ಅರೋಪಿ ಉಮರ್ ಖಾಲಿದ್ಗೆ ಜಾಮೀನು
- ದೆಹಲಿ ಗಲಭೆ ಅರೋಪಿ ಉಮರ್ ಖಾಲಿದ್ಗೆ ಜಾಮೀನು
- ಖಾಲಿದ್ ತಾಯಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನಲೆ ಜಾಮೀನು
- ಮೂರು ದಿನಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್
ನವದೆಹಲಿ: 2020 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಪ್ರಮುಖ ಆರೋಪಿ ಉಮರ್ ಖಾಲಿದ್ (Umar Khalid) ನ ತಾಯಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ (ಮೇ.22) ದೆಹಲಿ ಹೈಕೋರ್ಟ್ ಮೂರು ದಿನಗಳ ಮಧ್ಯಂತರ ಜಾಮೀನನ್ನು ನೀಡಲು ಸಮ್ಮತಿಸಿದೆ.
ನ್ಯಾಯಮೂರ್ತಿ ಪ್ರತಿಭಾ. ಎಂ. ಸಿಂಗ್ ಮತ್ತು ನ್ಯಾಯಮೂರ್ತಿ ಮಧು ಜೈನ್ ಅವರಿದ್ದ ವಿಭಾಗೀಯ ಪೀಠವು ಉಮರ್ ಖಾಲಿದ್ನಿಗೆ ಜೂನ್ 1 ರಿಂದ ಜೂನ್ 3 ರ ವರೆಗೆ ಮೂರು ದಿನಗಳ ಜಾಮೀನನ್ನು ಮಂಜೂರು ಮಾಡಿದ್ದು, 1 ಲಕ್ಷ ರೂಪಾಯಿ ಶ್ಯೂರಿಟಿ ನೀಡುವಂತೆ ನ್ಯಾಯಪೀಠ ತಿಳಿಸಿದೆ.
ತಂಗಿ ಮದುವೆಗೆ ಜಾಮೀನು ಪಡೆದಿದ್ದ ಖಾಲಿದ್
ಈ ಹಿಂದೆ 2025 ರ ಡಿಸೆಂಬರ್ ತಿಂಗಳ 16 ನೇ ತಾರೀಖಿನಿಂದ 29 ರ ವರೆಗೆ ಸಹೋದರಿಯ ಮದುವೆ ಹಿನ್ನಲೆ ಉಮರ್ ಖಾಲಿದ್ನಿಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯ ನೀಡಿತ್ತು. ಈ ಸಂದರ್ಭದಲ್ಲಿ ಸಹ ಇಬ್ಬರು ಶ್ಯೂರಿಟಿಗಳು ಹಾಗೂ 20,000 ರೂಪಾಯಿಗಳನ್ನು ಠೇವಣಿ ಇಡುವಂತೆ ಆದೇಶಿಸಲಾಗಿತ್ತು.
2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ಭೀಕರ ಕೋಮು ಗಲಭೆ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ 53 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.
ಈ ಗಲಭೆಯ ಹಿಂದೆ ದೇಶ ವಿರೋಧಿ ಸಂಚುಕೋರರ ಪಾತ್ರವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಉಮರ್ ಖಾಲಿದ್ ಈ ಸಂಚಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಇತನ ವಿರುದ್ಧ ಕಠಿಣವಾದ ಯುಎಪಿಎ (ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ - UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಪ್ಟೆಂಬರ್ 2020ರಲ್ಲಿ ದೆಹಲಿ ಪೊಲೀಸರ ವಿಶೇಷ ದಳವು ಖಾಲಿದ್‌ನನ್ನು ಬಂಧಿಸಿತ್ತು,(ಏಜನ್ಸೀಸ್).