Mother tongue is sovereign.
ಶಿಕ್ಷಣವೆಂಬುದು ವ್ಯಕ್ತಿತ್ವದ ವಿಕಸನದ ಮಾರ್ಗ. ಇದಕ್ಕೆ ಅಡಿಪಾಯವಾಗುವುದು ಮಗುವು ಮನೆಯಲ್ಲಿ ಆಡುವ ಭಾಷೆ ಅಥವಾ ಮಾತೃಭಾಷೆ. ರಾಜಸ್ಥಾನದ ಪ್ರಾಥಮಿಕ ಶಾಲೆಗಳಲ್ಲಿ ರಾಜಸ್ಥಾನಿ ಭಾಷೆಯನ್ನು ಕಡ್ಡಾಯಗೊಳಿಸುವುದಕ್ಕೆ ಅಲ್ಲಿನ ಸರ್ಕಾರ ನಿರ್ಧರಿಸಿರುವುದನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕೋರ್ಟಿನ ಈ ಆದೇಶ ಆ ರಾಜ್ಯಕ್ಕೆ ಸೀಮಿತವಲ್ಲ, ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಸೂಚಿ. ಈ ತೀರ್ಪು ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.
ರಾಜಸ್ಥಾನದ ಪ್ರಾಥಮಿಕ ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನು ಕಲಿಸಬೇಕು ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಸ್ಥಳೀಯ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ಈ ಹಿಂದೆ ತಿರಸ್ಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಮೂಲಭೂತ ಹಕ್ಕು’ ಎಂದು ಸ್ಪಷ್ಟಪಡಿಸಿದೆ. ಸಂವಿಧಾನದ ಆಶಯ ಮತ್ತು ‘ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್ಇಪಿ) 2020’ ಅನ್ವಯ, ಮಕ್ಕಳು ತಮಗೆ ಅರ್ಥವಾಗುವ ಭಾಷೆಯಲ್ಲಿ ಕಲಿಯುವುದು ಅವರ ಸರ್ವತೋಮುಖ ಪ್ರಗತಿಗೆ ಪೂರಕ.
ಪ್ರಾಥಮಿಕ ಹಂತದಲ್ಲಿ ಮಗುವು ಸಂವಹನ ನಡೆಸುವ ಭಾಷೆ ಮತ್ತು ಶಾಲೆಯಲ್ಲಿ ಕಲಿಯುವ ಭಾಷೆ ಒಂದೇ ಆಗಿದ್ದರೆ, ಕಲಿಕೆಯ ಪ್ರಕ್ರಿಯೆ ಸುಲಭವಾಗುತ್ತದೆ. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಕ್ಕಳು ಕೇವಲ ಅಕ್ಷರಗಳನ್ನಷ್ಟೇ ಅಲ್ಲ, ಅದರ ಜತೆಗೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನೂ ಅರಿಯುತ್ತಾರೆ. ಮಗುವಿಗೆ ವಿಷಯ ಅರ್ಥವಾಗುವ ಭಾಷೆಯಲ್ಲಿ ಮನವರಿಕೆಯಾದಾಗ ಮಾತ್ರ ಕಲಿಕೆಯ ಗುಣಮಟ್ಟ ಹೆಚ್ಚಾಗುತ್ತದೆ. ಇದನ್ನು 2009ರ ಶಿಕ್ಷಣ ಹಕ್ಕು ಕಾಯ್ದೆಯೂ ಪುಷ್ಟೀಕರಿಸುತ್ತದೆ.
ಸುಪ್ರೀಂ ಕೋರ್ಟ್ ನೀಡಿರುವ ಈ ಆದೇಶ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಬಲ ನೀಡಿದಂತಾಗಿದೆ. ಕರ್ನಾಟಕದಲ್ಲಿ ದಶಕಗಳಿಂದ ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯಗೊಳಿಸುವ ಹೋರಾಟಗಳು ನಡೆಯುತ್ತಲೇ ಇವೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಭಾಷೆಗಳ ಬಗ್ಗೆ ಸರ್ಕಾರ ವಾದ ಮಂಡಿಸಿದರೂ, ಸುಪ್ರೀಂ ಕೋರ್ಟ್ ಅದನ್ನು ಮೀರಿ ಸ್ಥಳೀಯ ಅಸ್ಮಿತೆ ಮತ್ತು ಮಕ್ಕಳ ಕಲಿಕೆಯ ಹಕ್ಕನ್ನು ಗೌರವಿಸಿದೆ. ಇದು ಕನ್ನಡ ಮಾಧ್ಯಮ ಮತ್ತು ಪ್ರಾದೇಶಿಕ ಭಾಷಾ ಶಿಕ್ಷಣಕ್ಕೆ ಹೊಸ ಬಲ ನೀಡಿದೆ.
ಯಾವುದೇ ನೀತಿ ಜಾರಿಗೆ ಬರಬೇಕಾದರೆ ಸಮಗ್ರ ಯೋಜನೆ ಅಗತ್ಯ. ಸುಪ್ರೀಂ ಕೋರ್ಟ್ ಸೂಚಿಸಿರುವಂತೆ, ರಾಜಸ್ಥಾನ ಸರ್ಕಾರ ಹಂತ ಹಂತವಾಗಿ ಪ್ರಾಥಮಿಕ ಶಾಲೆಗಳಲ್ಲಿ ರಾಜಸ್ಥಾನಿ ಭಾಷೆಯನ್ನು ಒಂದು ಬೋಧನಾ ವಿಷಯವನ್ನಾಗಿ ಅಳವಡಿಸಲು ನೀತಿ ರೂಪಿಸಬೇಕಿದೆ. ಇದೇ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸಬಹುದು. ಭಾವನಾತ್ಮಕವಾಗಿ ಮಾತ್ರವಲ್ಲದೆ, ವೈಜ್ಞಾನಿಕವಾಗಿಯೂ ಪಠ್ಯಕ್ರಮವನ್ನು ಸಿದ್ಧಪಡಿಸುವುದು ಮುಖ್ಯ.
ಸುಪ್ರೀಂ ಕೋರ್ಟ್ನ ಈ ಐತಿಹಾಸಿಕ ತೀರ್ಪು ಶಿಕ್ಷಣದಲ್ಲಿ ಮಾತೃಭಾಷೆಯೇ ಸಾರ್ವಭೌಮ ಎಂಬುದನ್ನು ದೃಢಪಡಿಸಿದೆ. ಮಕ್ಕಳ ಭಾಷಾ ಹಕ್ಕನ್ನು ಕಸಿದುಕೊಂಡರೆ ಕೋರ್ಟ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಎಚ್ಚರಿಕೆಯೂ ಸರ್ಕಾರಗಳಿಗೆ ರವಾನೆಯಾಗಿದೆ. ಮಗುವು ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಅದು ತನ್ನ ತಾಯ್ನುಡಿಯ ಮೂಲಕ ಜಗತ್ತನ್ನು ಕಾಣುವುದು ಅತ್ಯವಶ್ಯಕ. ಇದು ಗುಣಮಟ್ಟದ ಶಿಕ್ಷಣಕ್ಕೆ ಅಡಿಪಾಯ.