ಅಸಾದುದ್ದೀನ್ ಓವೈಸಿ, ನರೇಂದ್ರ ಮೋದಿ, ದೆಹಲಿ ಮಸೀದಿ ಆಸ್ತಿ ನೆಲಸಮ 
ದೇಶ

ದೆಹಲಿಯಲ್ಲಿ ಮಸೀದಿ ನೆಲಸಮ: ಮುಸ್ಲಿಮರ ಆಸ್ತಿ ಕಬಳಿಸಲು ವಕ್ಫ್​ ತಿದ್ದುಪಡಿ ಬಳಕೆ, ಮೋದಿ ವಿರುದ್ಧ ಗುಡುಗಿದ ಓವೈಸಿ| Asaduddin Owaisi

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ಮಸೀದಿ ಆಸ್ತಿ ನೆಲಸಮ
  • ಇದು ವಕ್ಫ್​ ತಿದ್ದುಪಡಿಯ ದುರ್ಬಳಿಕೆ ಎಂದ ಓವೈಸಿ
  • ಮುಸ್ಲಿಮರ ಆಸ್ತಿ ಕಬಳಿಕೆಗಾಗಿ ವಕ್ಫ್​ ತಿದ್ದುಪಡಿ ಮಸೂದೆ ಜಾರಿಗೆ
ಮುಂಬೈ: ದೆಹಲಿಯಲ್ಲಿ ಮಸೀದಿ ನೆಲಸಮಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi),ಇದು ವಕ್ಫ್ ತಿದ್ದುಪಡಿಯ ಮೂಲಕ ಮುಸ್ಲಿಮರ ಆಸ್ತಿಗಳನ್ನು ಕಬಳಿಸಲು ಮೋದಿ ಸರ್ಕಾರ ನಡೆಸುತ್ತಿರುವ ಹುನ್ನಾರ ಎಂದು ಆರೋಪಿಸಿದರು.
ಮಂಗಳವಾರ (ಜ.6) ಮತ್ತು ಬುಧವಾರ(ಜ.7)ದ ಮಧ್ಯರಾತ್ರಿ ದೆಹಲಿಯ ರಾಮಲೀಲಾ ಮೈದಾನ ಪ್ರದೇಶದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಈ ಘಟನೆ ಸಂಭವಿಸಿದೆ.
ತುರ್ಕಮನ್ ಗೇಟ್ ಎದುರಿನ ಮಸೀದಿಯನ್ನು ಕೆಡವಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹಂಚಿಕೊಂಡ ನಂತರ ಹಿಂಸಾಚಾರ ಭುಗಿಲೆದ್ದಿತು. ಹಲವಾರು ಜನರು ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ, ಐದು ಪೊಲೀಸರು ಗಾಯಗೊಂಡರು.ನಂತರ ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ರಪತಿ ಸಂಭಾಜಿನಗರ ನಾಗರಿಕ ಚುನಾವಣೆಗಾಗಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, 1970 ರಲ್ಲಿ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಕೆಡವಲಾದ ಆಸ್ತಿ ವಕ್ಫ್ ಭೂಮಿ ಎಂದು ಹೇಳಿದರು. ಸಂಸತ್ತಿನಲ್ಲಿ ವಕ್ಫ್ ಕಾಯ್ದೆ ಅಂಗೀಕಾರವಾದ ನಂತರ ಧ್ವಂಸ ಕಾರ್ಯಾಚರಣೆ ಪ್ರಾರಂಭವಾಗಿದೆ. ಇದಕ್ಕೆ ಜನರು ಸರಿಯಾದ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದರು.
ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಗೆಜೆಟ್ ಅಧಿಸೂಚನೆಯ ಹೊರತಾಗಿಯೂ ದೆಹಲಿ ಹೈಕೋರ್ಟ್ ತಪ್ಪು ಆದೇಶವನ್ನು ನೀಡಿದೆ ಎಂದು ಓವೈಸಿ ಆರೋಪಿಸಿದರು. ದೆಹಲಿ ವಕ್ಫ್ ಮಂಡಳಿಯು ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸದೆ ಮಸೀದಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಈ ವಿಷಯವನ್ನು ಈಗ ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ತಿದ್ದುಪಡಿ ಮಾಡಿದ ವಕ್ಫ್ ಕಾನೂನನ್ನು ವಿರೋಧಿಸಿದ ಓವೈಸಿ, ಈ ಕಾನೂನನ್ನು ಮಸೀದಿ, ಸ್ಮಶಾನ ಸೇರಿದಂತೆ ಮುಸ್ಲಿಂ ಧಾರ್ಮಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಕಾನೂನನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ದೂಷಿಸಿದರು.
ಜನವರಿ 15 ರಂದು ನಡೆಯಲಿರುವ ನಾಗರಿಕ ಸಂಸ್ಥೆಗಳ ಚುನಾವಣೆಗೆ ಮುನ್ನ ಮತದಾರರಿಗೆ ಮನವಿ ಮಾಡಿದ ಓವೈಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿಂಧೆ ಮತ್ತು ಪವಾರ್ ವಿರುದ್ಧ ಮತ ಚಲಾಯಿಸುವಂತೆ ಮತ್ತು ಧಾರ್ಮಿಕ ಸ್ಥಳಗಳನ್ನು ರಕ್ಷಿಸಲು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅನ್ನು ಬೆಂಬಲಿಸುವಂತೆ ಒತ್ತಾಯಿಸಿದರು. ಸಂವಿಧಾನವು ಮುಸ್ಲಿಮರಿಗೆ ಅಲ್ಲಾಹನನ್ನು ಪೂಜಿಸಲು ಅವಕಾಶ ನೀಡುತ್ತದೆ ಮತ್ತು ಸಂಸತ್ತಿನಲ್ಲಿ ಇದನ್ನು ಬಹಿರಂಗವಾಗಿ ಹೇಳಿದ ಏಕೈಕ ಮುಸ್ಲಿಂ ಸಂಸದ ತಾನೆಂದು (ಓವೈಸಿ) ಎಂದು ಅವರು ಹೇಳಿದರು,(ಏಜನ್ಸೀಸ್).