ವಿದ್ಯಾರ್ಥಿಗಳ ಆಸ್ಪತ್ರೆಯ ಚಿತ್ರ 
ದೇಶ

ಶಾಲೆಯ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು | mid-day meal

ಪಾಟ್ನಾ: ಬಿಹಾರದ ಮಾಧೇಪುರ ಜಿಲ್ಲೆಯ ಸಾಹುಗರ್ ಗ್ರಾಮದ ಕರು ಟೋಲಾದ ಅಪ್​ಗ್ರೇಡ್​ ಮಿಡಲ್ ಶಾಲೆಯಲ್ಲಿ ಶನಿವಾರ(ಫೆ. 07) ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಅಸ್ವಸ್ಥರಾದ ಮಕ್ಕಳನ್ನು ಹತ್ತಿರದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಕ್ಕಳ ಆರೋಗ್ಯ ಸ್ಥಿರವಾಗಿದ್ದರೂ, ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದೆ. ಆ ಬಾಲಕಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ಬಿಸಿಯೂಟ ಮಾಡಿದ ಸ್ವಲ್ಪ ಸಮಯದ ನಂತರ ಹಲವಾರು ವಿದ್ಯಾರ್ಥಿಗಳು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ಮತ್ತು ಹೊಟ್ಟೆ ನೋವು, ಅಸ್ವಸ್ಥೆತೆಯ ಬಗ್ಗೆ ಶಾಲೆಯ ಶಿಕ್ಷಕರಿಗೆ ದೂರು ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅದೇ ರೀತಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಎಲ್ಲಾ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದಂತೆ ತಕ್ಷಣ ಶಾಲಾ ಆಡಳಿತ ಮಂಡಳಿಯು ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ಮಾಹಿತಿ ನೀಡಿದೆ. ಶಾಲಾ ಶಿಕ್ಷಕರು ಆಂಬ್ಯುಲೆನ್ಸ್ ಮತ್ತು ಇತರ ಖಾಸಗಿ ವಾಹನಗಳನ್ನು ಕರೆಸಿ, ಅಸ್ವಸ್ಥ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಕುಮಾರ್ ಕೂಡ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ, ಮಕ್ಕಳನ್ನು ಪರಿಶೀಲಿಸಿದ್ದಾರೆ. ಬಿಸಿಯೂಟದಲ್ಲಿ ಹಲ್ಲಿಬಿದ್ದಿರಬಹುದು ಎಂದು ಸ್ಥಳೀಯ ನಿವಾಸಿಗಳು ಶಂಕಿಸಿದ್ದಾರೆ. ಸಯಂಸೇವಾ ಸಂಸ್ಥೆಯಾದ ಪ್ಯಾರಾಸ್ ಆಗ್ರೋ ಮೂಲಕ ಶಾಲೆಗೆ ಸರಬರಾಜು ಮಾಡಲಾಗುತ್ತದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ (ಏಜೆನ್ಸೀಸ್).