ಖರ್ಗೋನ್: ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕನಿಷ್ಠ 200 ಗಿಳಿಗಳು ಆಹಾರ ವಿಷ ಸೇವಿಸಿ ಮೃತಪಟ್ಟಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬಡ್ವಾ ಪ್ರದೇಶದಲ್ಲಿ ಅಕ್ವಿಡಕ್ಟ್ ಸೇತುವೆ ಬಳಿ ಕಳೆದ ನಾಲ್ಕು ದಿನಗಳಲ್ಲಿ ಈ ಗಿಳಿಗಳ ಮೃತದೇಹಗಳು ಪತ್ತೆಯಾಗಿವೆ.
ಸ್ಥಳೀಯ ನಿವಾಸಿಗಳು ಈ ಬಗ್ಗೆ ಮಾಹಿತಿ ನೀಡಿದ ನಂತರ ಪಶುವೈದ್ಯಕೀಯ ಇಲಾಖೆ, ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ತಂಡಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿವೆ. ಮೃತ ಗಿಳಿಗಳ ಮೇಲೆ ಪೋಸ್ಟ್‌ಮಾರ್ಟಂ ನಡೆಸಿದ ಪಶುವೈದ್ಯೆ ಡಾ. ಮನೀಷಾ ಚೌಹಾನ್ ಅವರು, ಆಹಾರ ವಿಷಚಟುವಟಿಕೆಯ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ಅಲ್ಲದೆ, ಬರ್ಡ್ ಫ್ಲೂ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಗಿಳಿಗಳ ಹೊಟ್ಟೆಯಲ್ಲಿ ಅನ್ನ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಸೇತುವೆಗೆ ಭೇಟಿ ನೀಡುವವರು ಗಿಳಿಗಳಿಗೆ ಬೇಯಿಸಿದ ಅಥವಾ ಉಳಿಕೆ ಆಹಾರವನ್ನು ಎಸೆಯುವುದರಿಂದ ಇಂತಹ ಘಟನೆಗಳು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಕೀಟನಾಶಕಗಳಿಂದ ಕಲುಷಿತಗೊಂಡ ಧಾನ್ಯಗಳು ಅಥವಾ ಅನುಚಿತ ಆಹಾರ ಸೇವನೆಯೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ.
ಈ ಘಟನೆಯಿಂದ ಪ್ರದೇಶದಲ್ಲಿ ಆತಂಕ ಮೂಡಿದ್ದು, ಗಿಳಿಗಳನ್ನು ಉಳಿಸಲು ಪ್ರಯತ್ನಿಸಿದರೂ ವಿಷದ ಪ್ರಮಾಣ ಹೆಚ್ಚಿರುವುದರಿಂದ ಹಲವು ಸಾಯುವುದನ್ನು ತಡೆಯಲಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ತಿಳಿಸಿದ್ದಾರೆ. ನದಿ ದಡದಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ,(ಏಜೆನ್ಸೀಸ್).