ಸಾಂದರ್ಭಿಕ ಚಿತ್ರ 
ದೇಶ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಮುನ್ಸೂಚನೆ: ಹಬ್ಬದ ಸಂಭ್ರಮಕ್ಕೆ ವರುಣ ಅಡ್ಡಿಯಾಗುತ್ತಾನಾ? IMD ಹೇಳಿದ್ದೇನು?

ಅಕ್ಟೋಬರ್ 19, 2026ರಂದು ಬೆಳಗ್ಗೆ 5:30ರ ಸುಮಾರಿಗೆ ನೈಋತ್ಯ ಅರಬ್ಬಿ ಸಮುದ್ರದ ಮೇಲೆ ನೆಲೆಸಿದ್ದ ಸುಳಿಗಾಳಿಯು ನಿಧಾನವಾಗಿ ಪೂರ್ವದ ಕಡೆಗೆ ಚಲಿಸಿ, ಮುಂದಿನ ಎರಡರಿಂದ ಮೂರು ದಿನಗಳಲ್ಲಿ ವಾಯವ್ಯದ ಕಡೆಗೆ ತಿರುಗಿ ಸೊಮಾಲಿಯಾ ಕರಾವಳಿಯತ್ತ ಸಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ: ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಯು ತೀವ್ರಗೊಳ್ಳುವ ಲಕ್ಷಣಗಳನ್ನು ತೋರುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಆಳವಾದ ವಾಯುಭಾರ ಕುಸಿತವಾಗಿ (Depression) ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹಾಗಾದರೆ, ಭಾರತಕ್ಕೆ ಮಳೆಯಾಗುತ್ತಾ? ಹಬ್ಬದ ಸಂಭ್ರಮಕ್ಕೆ ವರುಣ ಅಡ್ಡಿಯಾಗುತ್ತಾನಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅಕ್ಟೋಬರ್ 19, 2026ರಂದು ಬೆಳಗ್ಗೆ 5:30ರ ಸುಮಾರಿಗೆ ನೈಋತ್ಯ ಅರಬ್ಬಿ ಸಮುದ್ರದ ಮೇಲೆ ನೆಲೆಸಿದ್ದ ಸುಳಿಗಾಳಿಯು ನಿಧಾನವಾಗಿ ಪೂರ್ವದ ಕಡೆಗೆ ಚಲಿಸಿ, ಮುಂದಿನ ಎರಡರಿಂದ ಮೂರು ದಿನಗಳಲ್ಲಿ ವಾಯವ್ಯದ ಕಡೆಗೆ ತಿರುಗಿ ಸೊಮಾಲಿಯಾ ಕರಾವಳಿಯತ್ತ ಸಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

INSAT-3DS ಉಪಗ್ರಹದಿಂದ ಲಭ್ಯವಾಗಿರುವ ದೃಶ್ಯಾವಳಿಗಳ ಪ್ರಕಾರ, ಅರಬ್ಬಿ ಸಮುದ್ರದ ಕೆಲವು ಭಾಗಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಸಮಭಾಜಕ ವೃತ್ತದ ಪ್ರದೇಶಗಳಲ್ಲಿ ದಟ್ಟವಾದ ಮೋಡಗಳು ಆವರಿಸಿವೆ. ಅಲ್ಲದೆ, ನೈಋತ್ಯ ಅರಬ್ಬಿ ಸಮುದ್ರದ ಮೇಲೆ ಮೋಡಗಳು ಸುರುಳಿಯಾಕಾರದಲ್ಲಿ ತಿರುಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಈ ಅತ್ಯಾಧುನಿಕ ಉಪಗ್ರಹ ಚಿತ್ರಗಳ ಸಹಾಯದಿಂದ ಹವಾಮಾನ ತಜ್ಞರು ಸಾಗರದಲ್ಲಿ ರೂಪುಗೊಳ್ಳುತ್ತಿರುವ ಈ ಹವಾಮಾನ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈ ವಾಯುಭಾರ ಕುಸಿತದ ಪ್ರಭಾವದಿಂದ ನೈಋತ್ಯ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗವು ತೀವ್ರಗೊಳ್ಳಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ಗಂಟೆಗೆ 35 ರಿಂದ 45 ಕಿ.ಮೀ. ವೇಗದಲ್ಲಿ (ಗಂಟೆಗೆ 55 ಕಿ.ಮೀ. ವರೆಗೆ ಬಿರುಗಾಳಿ ಬೀಸುವ ಸಂಭವವಿದೆ) ಗಾಳಿ ಬೀಸುವ ನಿರೀಕ್ಷೆಯಿದೆ. ಅಕ್ಟೋಬರ್ 19ರ ಸಂಜೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಅಕ್ಟೋಬರ್ 23ರ ವರೆಗೆ ನೈಋತ್ಯ ಅರಬ್ಬಿ ಸಮುದ್ರ ಹಾಗೂ ಸೊಮಾಲಿಯಾ ಕರಾವಳಿ ಮತ್ತು ಸೊಕೊಟ್ರಾ ದ್ವೀಪಗಳ ಸುತ್ತಮುತ್ತ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ (ಗಂಟೆಗೆ 60 ಕಿ.ಮೀ. ವರೆಗೆ ಬಿರುಗಾಳಿ) ಗಾಳಿ ಬೀಸಲಿದೆ.

ಸಮುದ್ರದ ಪರಿಸ್ಥಿತಿಯು ಅಕ್ಟೋಬರ್ 23ರವರೆಗೆ ಅತ್ಯಂತ ಪ್ರಕ್ಷುಬ್ಧವಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಇದು ಮೀನುಗಾರಿಕಾ ನೌಕೆಗಳು ಹಾಗೂ ಸಮುದ್ರಯಾನ ಮಾಡುವವರಿಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕಿದೆ. ಸಾಗರದಲ್ಲಿ ಏರ್ಪಡುವ ಇಂತಹ ಅಲೆಗಳು ಮತ್ತು ಬಿರುಗಾಳಿಯು ಕಡಲಂಚಿನ ಚಟುವಟಿಕೆಗಳಿಗೆ ಅಡ್ಡಿಯಾಗುವ ಆತಂಕವಿದೆ.

ಅಪಾಯಕಾರಿ ರೀತಿಯಲ್ಲಿ ಈ ವ್ಯವಸ್ಥೆ ತೀವ್ರಗೊಳ್ಳುತ್ತಿದ್ದರೂ, ಭಾರತದ ಮೇಲೆ ಇದರ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಈ ಹವಾಮಾನ ವ್ಯವಸ್ಥೆ ಸೊಮಾಲಿಯಾ ಕರಾವಳಿಯತ್ತ ಚಲಿಸಲಿರುವುದರಿಂದ, ಭಾರತೀಯ ಭೂಭಾಗಕ್ಕೆ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಹೀಗಾಗಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗಿದೆ, (ಏಜೆನ್ಸೀಸ್​).