Ketan Agarwal Murder Case
- ಕೊಲೆಯಾಗುವ ಮುನ್ನ ಭಾವಿ ಪತ್ನಿ ಮತ್ತು ಮಾವನೊಂದಿಗೆ ನೃತ್ಯ ಮಾಡಿದ್ದ ಕೇತನ್.
- ಕೇತನ್ರ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕಿ ರೀತು ಶರ್ಮಾರಿಂದ ವಿಡಿಯೋ ಪೋಸ್ಟ್.
- ಲೋಹಗಢ್ ಕೋಟೆಯ ಪ್ರಪಾತಕ್ಕೆ ತಳ್ಳಿ ಕೇತನ್‌ನನ್ನು ಕೊಂದಿದ್ದ ಸಿಯಾ ಮತ್ತು ಚೇತನ್.
ಪುಣೆ: ಕೇತನ್ ಅಗರ್ವಾಲ್ ಕೊಲೆಯಾಗುವ ಒಂದು ತಿಂಗಳ ಹಿಂದೆ ತನ್ನ ಭಾವಿ ಅತ್ತೆ, ಮಾವ ಹಾಗೂ ಪತ್ನಿ ಸಿಯಾ ಜೊತೆಗೆ ಕುಣಿದು ಕುಪ್ಪಳಿಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡಿರುವವರು ಕೇತನ್ ಸಾವಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.
ಮೇ 7 ರಂದು ಕೇತನ್ ಅಗರ್ವಾಲ್ ಕುಟುಂಬದ ಕಾರ್ಯಕ್ರಮವಿತ್ತು. ಅದರಲ್ಲಿ ಗಾಯಕಿ ರೀತು ಶರ್ಮಾ ಭಾಗಿಯಾಗಿದ್ದರು. ಅಂದು ಅವರು ಚಿತ್ರೀಕರಿಸಿದ್ದ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ವಿಡಿಯೋಗಳು ಸದ್ಯ ವೈರಲ್ ಆಗುತ್ತಿವೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಗಾಯಕಿ ರೀತು ಶರ್ಮಾ ಹಂಚಿಕೊಂಡಿರುವ ಮೊದಲ ವಿಡಿಯೋದಲ್ಲಿ ಕೇತನ್ ತಂದೆ ವಿಶಾಲ್ ಅಗರ್ವಾಲ್ ಮತ್ತು ಸಿಯಾ ಪೋಷಕರಾದ ಪ್ರವೀಣ್ ಗೋಯಲ್ ಹಾಗೂ ಪೂಜಾ ಗೋಯಲ್ ತಮ್ಮ ಸಂಬಂಧಿಕರೊಂದಿಗೆ ಒಟ್ಟಿಗೆ ನಿಂತಿರುವುದು ಕಂಡುಬಂದಿದೆ. ಈ ವೇಳೆ ಕೇತನ್ ತಂದೆ ವಿಶಾಲ್ ಅವರು ಗಾಯಕಿಯೊಂದಿಗೆ ಸೇರಿ ಬಾಲಿವುಡ್‌ನ ಪ್ರಸಿದ್ಧ ಹಾಡು "ಯಮ್ಮಾ ಯಮ್ಮಾ... ಬಸ್ ಆಜ್ ಕಿ ರಾತ್ ಹೈ ಜಿಂದಗಿ, ಕಲ್ ಹಮ್ ಕಹಾ ತುಮ್ ಕಹಾ" (ಇಂದಿನ ರಾತ್ರಿಯಷ್ಟೇ ಜೀವನ, ನಾಳೆ ನಾವು ಎಲ್ಲಿದ್ದೇವೋ ನೀವೆಲ್ಲಿದ್ದೇವೋ ಯಾರಿಗೆ ಗೊತ್ತು) ಎಂಬ ಸಾಲುಗಳನ್ನು ಹಾಡುತ್ತಾ ಹೆಜ್ಜೆ ಹಾಕಿದ್ದಾರೆ.
ಅದರ ಬೆನ್ನಲ್ಲೇ ಮತ್ತೊಂದು ದೃಶ್ಯದಲ್ಲಿ, ಕೇತನ್ ತನ್ನ ಭಾವಿ ಮಾವ ಪ್ರವೀಣ್ ಅವರೊಂದಿಗೆ ಸೇರಿ 'ಗದರ್' ಚಿತ್ರದ "ಮೈ ನಿಕ್ಲಾ ಗಡ್ಡಿ ಲೇಕೆ" ಹಾಡಿಗೆ ಅತ್ಯಂತ ಸಡಗರದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಎರಡೂ ಕುಟುಂಬಗಳು ಅಷ್ಟೊಂದು ಸಂತೋಷದಿಂದ ಇದ್ದದ್ದನ್ನು ವಿಡಿಯೋದಲ್ಲಿ ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ ಕೇತನ್ ತಂದೆ ಗಾಯಕಿಯ ಪ್ರದರ್ಶನವನ್ನು ಶ್ಲಾಘಿಸುತ್ತಿರುವುದು ವಿಡಿಯೋದಲ್ಲಿ ಇದೆ.
ಗಾಯಕಿ ಹೇಳಿದ್ದಿಷ್ಟು
ಮೇ 7 ರಂದು ನಡೆದ ಕಾರ್ಯಕ್ರಮದಲ್ಲಿ ಸಿಯಾ ಮತ್ತು ಕೇತನ್ ಕುಟುಂಬ ಸಂತೋಷವಾಗಿ ಭಾಗಿಯಾಗಿದ್ದರು. ಎರಡೂ ಕುಟುಂಬಗಳು ಎಷ್ಟು ಸಂತೋಷವಾಗಿದ್ದವು ಎಂಬುದನ್ನು ನೀವೇ ನೋಡಬಹುದು. ನಾನೇ ಕಣ್ಣಾರೆ ಕಂಡಿದ್ದೇನೆ ಕೇತನ್ ಮುಗ್ಧ ಮಗ. ಅವನಂತ ವ್ಯಕ್ತಿಗೆ ಹೀಗಾಗುತ್ತದೆ ಎಂದು ಯಾರಿಗೆ ಗೊತ್ತಿತ್ತು?"
ಸಿಯಾ ವಿರುದ್ಧ ಕಿಡಿ
ಒಬ್ಬರನ್ನು ಇಷ್ಟಪಡದಿದ್ದರೆ ಅವರ ಜೀವ ತೆಗೆದುಕೊಳ್ಳುವ ಹಕ್ಕು ನಿಮಗಿಲ್ಲ. ತನ್ನ ಪ್ರಿಯಕರನೊಂದಿಗೆ ಓಡಿಹೋದರೆ ಪೋಷಕರಿಗೆ ಅವಮಾನವಾಗುತ್ತದೆ ಎಂದು ಸಿಯಾ ಓಡಿಹೋಗಲಿಲ್ಲ, ಆದರೆ ಕೇತನ್ ಪೋಷಕರ ಪರಿಸ್ಥಿತಿ ಏನಾಗಬೇಡ. 'ಬೇಡ' ಎಂದು ನಿರಾಕರಿಸುವುದು ಒಬ್ಬರ ಜೀವ ತೆಗೆದುಕೊಳ್ಳುವುದಕ್ಕಿಂತ ಕಷ್ಟವೇ? ಕೇತನ್‌ಗೆ ನ್ಯಾಯ ಸಿಗಬೇಕು. ಆಕೆ ಕೇತನ್‌ನನ್ನು ಯಾವ ಕೋಟೆಯಿಂದ ತಳ್ಳಿ ಕೊಂದಳೋ, ಅದೇ ಕೋಟೆಯಿಂದ ಆಕೆಯನ್ನೂ ಕೆಳಗೆ ತಳ್ಳಬೇಕು ಎಂದು ಅವರು ಸಿಯಾ ವಿರುದ್ಧ ಕಿಡಿಕಾರಿದ್ದಾರೆ.
ಕೊಲೆ, ಅನೇಕ ತಿರುವು
ಕೇತನ್ ಮತ್ತು ಸಿಯಾ ಅವರಿಗೆ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿದ್ದು, ಮುಂಬರುವ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಜೂನ್ 18 ರಂದು ಪುಣೆಯ ಲೋಹಗಢ್ ಕೋಟೆಗೆ ಹೋದಾಗ, ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಸೇರಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿದ್ದರು. ಸದ್ಯ ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.
ಚೇತನ್ ಜೊತೆಗಿನ ಸ್ನೇಹದ ಬಗ್ಗೆ ಸಿಯಾ ಕುಟುಂಬಕ್ಕೆ ಗೊತ್ತಿತ್ತೇ?
ನ್ಯೂಸ್‌ಡಾಟ್ಸ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಸಿಯಾ ಸಹೋದರ ಸಾಹಿಲ್, ತನಗೆ ಚೇತನ್ ಬಗ್ಗೆ ಗೊತ್ತಿತ್ತು ಎಂದು ಒಪ್ಪಿಕೊಂಡಿದ್ದಾನೆ. ಆದರೆ, "ನಾನು ಕೇತನ್ ಜೊತೆಗೇ ಜೀವನ ನಡೆಸಲು ಬಯಸುತ್ತೇನೆ, ಚೇತನ್ ಜೊತೆ ಯಾವುದೇ ಸಂಬಂಧ ಮುಂದುವರಿಸುವುದಿಲ್ಲ, ನಮ್ಮ ನಡುವೆ ಏನೂ ಇಲ್ಲ ಎಂದು ಸಿಯಾ ನನ್ನ ಮೇಲೆ ಆಣೆ ಮಾಡಿ ಹೇಳಿದ್ದಳು. ಅವರಿಬ್ಬರು ಕೇವಲ ಸ್ನೇಹಿತರು ಅಂದುಕೊಂಡು ನಾನು ಪೋಷಕರಿಗೆ ಈ ವಿಷಯ ತಿಳಿಸಿರಲಿಲ್ಲ," ಎಂದು ಸಾಹಿಲ್ ಹೇಳಿದ್ದಾನೆ.
ಆದರೆ ಪೊಲೀಸ್ ಮೂಲಗಳ ಪ್ರಕಾರ, ಸಿಯಾಗೆ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಮತ್ತು ಆಕೆ ಈ ವಿಷಯವನ್ನು ಸಾಹಿಲ್‌ಗೆ ತಿಳಿಸಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಈ ಕೊಲೆಯಲ್ಲಿ ಸಾಹಿಲ್ ಪಾತ್ರದ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ, (ಏಜೆನ್ಸೀಸ್).