ಕೇವಲ 36 ನಿಮಿಷಗಳಲ್ಲಿ 7 ಮಸೂದೆಗಳು ಅಂಗೀಕಾರ 
ದೇಶ

36 ನಿಮಿಷಗಳಲ್ಲಿ 7 ಬಿಲ್ ಪಾಸ್​: ಮುಂಗಾರು ಅಧಿವೇಶನದ ಗದ್ದಲದಲ್ಲಿ ಸಂಸದರ ಪ್ರಶ್ನೆಗಳ ಸಮಯವೇ ಮಾಯ!

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಅಧಿವೇಶನದಲ್ಲಿ 19 ಮಸೂದೆಗಳು ಪಾಸ್
  • ಕೇವಲ 36 ನಿಮಿಷಗಳಲ್ಲಿ 7 ಮಸೂದೆಗಳು ಅಂಗೀಕಾರ
  • ಆಡಳಿತ-ಪ್ರತಿಪಕ್ಷಗಳ ಜಟಾಪಟಿಯಿಂದ ಸಂಸದರಿಗೆ ಪ್ರಶ್ನೆ ಕೇಳುವ ಸಮಯವೇ ಮಾಯ
ನವದೆಹಲಿ: ದೆಹಲಿಯ ಜಂತರ್​ ಮಂತರ್​ ಪ್ರತಿಭಟನೆ ಹಾಗೂ ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ತೀವ್ರ ಗದ್ದಲ, ಸಭಾತ್ಯಾಗ ಮತ್ತು ಪ್ರತಿಭಟನೆಗಳ ನಡುವೆಯೂ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸರ್ಕಾರ ತನ್ನ ಪ್ರಮುಖ ಶಾಸನಸಭಾ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಯಾವುದೇ ಸುದೀರ್ಘ ಚರ್ಚೆಗಳಿಲ್ಲದೆ, ಬರೋಬ್ಬರಿ 19 ಮಸೂದೆಗಳನ್ನು ಅಂಗೀಕರಿಸಿಕೊಳ್ಳುವಲ್ಲಿ ಕೇಂದ್ರವು ಮೇಲುಗೈ ಸಾಧಿಸಿದೆ. 15 ದಿನಗಳ ಅಧಿವೇಶನದಲ್ಲಿ ಕನಿಷ್ಠ 90 ಗಂಟೆಗಳ ಕಾಲ ಕಲಾಪ ನಡೆಯಬೇಕಿತ್ತು. ಆದರೆ, ಲೋಕಸಭೆ ನಡೆದದ್ದು ಕೇವಲ 15 ಗಂಟೆ 36 ನಿಮಿಷ ಹಾಗೂ ರಾಜ್ಯಸಭೆ ನಡೆದದ್ದು 24 ಗಂಟೆ 21 ನಿಮಿಷ ಮಾತ್ರ ಎಂಬುದು ಇಲ್ಲಿ ಗಮನಾರ್ಹ.

5 ನಿಮಿಷಕ್ಕೆ ಒಂದು ಬಿಲ್ ಪಾಸ್​

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಘೋಷಣೆಗಳ ಮಧ್ಯೆಯೂ ಕೇವಲ 36 ನಿಮಿಷಗಳಲ್ಲಿ ಏಳು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಅಂದರೆ, ಸರಾಸರಿ ಪ್ರತಿ 5 ನಿಮಿಷಕ್ಕೆ ಒಂದು ಮಸೂದೆಯನ್ನು ಪಾಸ್ ಮಾಡಲಾಗಿದೆ. ಮುಖ್ಯವಾಗಿ, ಈ ಅಧಿವೇಶನದಲ್ಲಿ ಅಂಗೀಕಾರಗೊಂಡ ಅತ್ಯಂತ ಪ್ರಮುಖ ಶಾಸನವೆಂದರೆ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ'. ಇದರ ಕುರಿತಾಗಿ ಲೋಕಸಭೆಯಲ್ಲಿ 11 ಗಂಟೆಗಳ ಕಾಲ ಹಾಗೂ ರಾಜ್ಯಸಭೆಯಲ್ಲಿ 7 ಗಂಟೆ 14 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಯಿತು.

ಪ್ರಶ್ನೋತ್ತರ ವೇಳೆಯೇ ಕಣ್ಮರೆ!

ಗದ್ದಲದ ಕಾರಣದಿಂದಾಗಿ ಈ ಬಾರಿಯ ಅಧಿವೇಶನದಲ್ಲಿ 'ಪ್ರಶ್ನೋತ್ತರ ವೇಳೆ' (Question Hour) ಸಂಪೂರ್ಣವಾಗಿ ರದ್ದಾಯಿತು. ಇದರಿಂದಾಗಿ ಸಂಸದರಿಗೆ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಕೇಳಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

18ನೇ ಲೋಕಸಭೆಯ ಅಂಕಿಅಂಶ (ಪ್ರಶ್ನೋತ್ತರ ಸಮಯ ನಷ್ಟ)

  • 2024ರ ಮುಂಗಾರು ಅಧಿವೇಶನ: ಶೇ.3
  • 2024ರ ಚಳಿಗಾಲದ ಅಧಿವೇಶನ: ಶೇ.56
  • 2025ರ ಬಜೆಟ್ ಅಧಿವೇಶನ: ಶೇ.22
  • 2025ರ ಮುಂಗಾರು ಅಧಿವೇಶನ: ಶೇ.77
  • 2025ರ ಚಳಿಗಾಲದ ಅಧಿವೇಶನ: ಶೇ.33
  • 2026ರ ಬಜೆಟ್ ಅಧಿವೇಶನ: 12 ದಿನಗಳಲ್ಲಿ 15 ನಿಮಿಷಕ್ಕಿಂತ ಕಡಿಮೆ ಸಮಯ ಮಾತ್ರ ಕಾರ್ಯ
  • 2026ರ ಮುಂಗಾರು ಅಧಿವೇಶನ: ಗೊಂದಲಗಳ ಕಾರಣ ಪ್ರಶ್ನೋತ್ತರ ಸಮಯ ಸಂಪೂರ್ಣ ರದ್ದು
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಪರಿಸ್ಥಿತಿಯ ಬಗ್ಗೆ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದರೂ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಯಿಂದಾಗಿ ಸಂಸತ್ತಿನ ಕಲಾಪಗಳ ಗೊಂದಲಕ್ಕೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ದುರಾದೃಷ್ಟಕರ ಎಂದೇ ಹೇಳಬಹುದು,(ಏಜೆನ್ಸೀಸ್).