ನವದೆಹಲಿ: ಇಂದಿನಿಂದ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗಿದ್ದು, ಕಲಾಪಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ(PM Modi), ಈ ಬಾರಿಯ ಅಧಿವೇಶನವೂ ಸುಗಮವಾಗಿ ನಡೆಯಬೇಕು ಮತ್ತು ಉತ್ಪಾದಕವಾಗಿರಬೇಕು ಎಂದು ಸುಗಮ ಕಲಾಪಕ್ಕೆ ವಿಪಕ್ಷಗಳ ನಾಯಕರ ಸಹಕಾರ ಕೋರಿದ್ದಾರೆ.
ಸಂಸತ್ ಭವನದ ಎದುರಿಗೆ ಮಾತನಾಡಿರುವ ಅವರು, ಮುಂಗಾರು ಆಗಿರಲಿ ಅಥವಾ ಮಳೆಗಾಲದ ಅಧಿವೇಶನವಾಗಲಿ, ಎರಡೂ ಪೂರ್ವಭಾವಿಯಾಗಿ ನಡೆದರೆ, ಅವು ಹೆಚ್ಚು ಉತ್ಪಾದಕವಾಗುತ್ತವೆ. ಮತ್ತು ಎರಡೂ ಉತ್ಪಾದಕವಾಗಿದ್ದರೆ, ಅದು ರಾಷ್ಟ್ರದ ಕಲ್ಯಾಣ ಮತ್ತು ಎಲ್ಲಾ ಜೀವಿಗಳ ಯೋಗಕ್ಷೇಮಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಮುಂಗಾರು ಪೂರ್ವಭಾವಿಯಾಗಿ ಮತ್ತು ಉತ್ಪಾದಕವಾಗಿ ಉಳಿಯಲಿ. ಮತ್ತು ಮುಂಗಾರು ಅಧಿವೇಶನವು ಸಹ ಉತ್ಪಾದಕವಾಗಿ ಉಳಿಯಲಿ ಎಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಕೇವಲ ಒಂದು ತಿಂಗಳಲ್ಲಿ ದೇಶವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ, ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಪಡುವ ಸಾಧನೆಗಳ ಸರಣಿ. ಅದು ರಾಷ್ಟ್ರೀಯ ವೇದಿಕೆಯಲ್ಲಿರಲಿ, ಅಂತರರಾಷ್ಟ್ರೀಯ ರಂಗದಲ್ಲಿರಲಿ ಅಥವಾ ಈಗ, ಬಾಹ್ಯಾಕಾಶದಲ್ಲಿರಲಿ, ಇವು ನಿಜವಾಗಿಯೂ ಭಾರತಕ್ಕೆ ಹೆಮ್ಮೆಯ ಕ್ಷಣಗಳಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಕ್ರಮ್ -1ರ ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿದ ಅಬರು, ಇದು ಭಾರತದ ಯುವಕರು ಏನು ಮಾಡಬಹುದು ಎಂಬುದನ್ನು ತೋರಿಸುತ್ತದೆ. ಜುಲೈ 18ರಂದು ದೇಶದ ಮೊದಲ ಖಾಸಗಿ ಕಕ್ಷೆಯ ದರ್ಜೆಯ ರಾಕೆಟ್ ಉಡಾವಣೆಯೊಂದಿಗೆ ಭಾರತವು ತನ್ನ ಬಾಹ್ಯಾಕಾಶ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿತು ಎಂದಿದ್ದಾರೆ.
ಇದೇ ವೇಳೆ ಹಸಿರು ಹೈಡ್ರೋಜನ್ ರೈಲು ಹೊಂದಿರುವ ಮೊದಲ ದೇಶಗಳಲ್ಲಿ ಭಾರತವೂ ಒಂದು ಎಂದು ಮೋದಿ ಎತ್ತಿ ತೋರಿಸಿದರು. ಜುಲೈ 17ರಂದು ಜಿಂದ್ ಮತ್ತು ಸೋನೆಪತ್ ಅನ್ನು ಸಂಪರ್ಕಿಸುವ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಮೋದಿ ಚಾಲನೆ ನೀಡಿದ್ದರು.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಬಿಕ್ಕಟ್ಟಿನ ಹೊರತಾಗಿಯೂ, ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಸಂಘರ್ಷವು ಇಂಧನ ಆಮದಿನ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ ಪ್ರಮುಖ ತೊಂದರೆಗಳನ್ನು ಸೃಷ್ಟಿಸಿದೆ ಎಂದು ಸಂಘರ್ಷದಿಂದ ಭಾರತದಲ್ಲಿ ತೈಲ ಆಮದಿಗೆ ಹೊಡೆತ ಬಿದ್ದಿರುವುದನ್ನು ಒಪ್ಪಿಕೊಂಡರು.
ರಾಹುಲ್ ಗಾಂಧಿಗೆ ಟಾಂಗ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು ಶ್ಲಾಘಿಸುತ್ತಾ ಪ್ರಧಾನಿ ಮೋದಿ, ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದ್ದಾರೆ. ಸ್ಕೈರೂಟ್ ಏರೋಸ್ಪೇಸ್‌ನ ಹಿಂದಿನ ತಂಡದ ಸಾಧನೆಯನ್ನು ಉಲ್ಲೇಖಿಸುತ್ತಾ, ಈ ಸ್ಕೈರೂಟ್ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿರುವ ಯುವಕರು ಮತ್ತು ಅವರ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಎಂದು ನನಗೆ ಹೇಳಲಾಗಿದೆ. ಅಂತಹ ಯುವಕರು ಈ ಕೆಲಸವನ್ನು ಸಾಧಿಸಿದ್ದಾರೆ. ನಾನು 56 ವರ್ಷ ವಯಸ್ಸಿನ ಯಾವುದೇ ಯುವಕನ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).