Parliament Monsoon Session 
ದೇಶ

ಜುಲೈ 20 ರಿಂದ ಸಂಸತ್ ಮುಂಗಾರು ಅಧಿವೇಶನ..? ಕೇವಲ ಮೂರೇ ತಿಂಗಳಲ್ಲಿ ಇಡೀ ಸಂಸತ್ತಿನ ಚಿತ್ರಣವೇ ಉಲ್ಟಾಪಲ್ಟಾ ಆಗಿದ್ದು ಹೇಗೆ ಗೊತ್ತಾ..? | Monsoon Session

ನವದೆಹಲಿ: ಕಳೆದ ಏಪ್ರಿಲ್‌ನಲ್ಲಿ ಸಂಸತ್ ಅಧಿವೇಶನ ಮುಕ್ತಾಯಗೊಂಡ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಭಾರಿ ಏರುಪೇರುಗಳಾಗಿದ್ದು, ಇದೇ ಜುಲೈ 20 ರಿಂದ ಆರಂಭವಾಗಲಿದೆ ಎನ್ನಲಾದ ಮುಂಗಾರು ಅಧಿವೇಶನವು (Parliament Monsoon Session) ನಾಟಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಪಕ್ಷಾಂತರ, ಹೊಸ ಮೈತ್ರಿಗಳು ಮತ್ತು ಪಕ್ಷಗಳ ವಿಲೀನದಿಂದಾಗಿ ಸದನದ ಸಂಖ್ಯಾಬಲದ ಚಿತ್ರಣವೇ ಬದಲಾಗಿದೆ. ನಾಲ್ಕು ವಾರಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಒಟ್ಟು 19 ಕಲಾಪಗಳಿದ್ದು, ಆಗಸ್ಟ್ 13 ರವರೆಗೆ ಜಿದ್ದಾಜಿದ್ದಿನ ಚರ್ಚೆಗಳು ನಡೆಯಲಿವೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ತೃಣಮೂಲ ಕಾಂಗ್ರೆಸ್​ನಲ್ಲಿನ ಒಡಕು, ಉದ್ಧವ್ ಠಾಕ್ರೆ ಬಣದಲ್ಲಿನ ಪಕ್ಷಾಂತರ ಮತ್ತು ಡಿಎಂಕೆ-ಕಾಂಗ್ರೆಸ್ ನಡುವಿನ ಬಿರುಕು ಸದನದ ಒಟ್ಟಾರೆ ಸಂಖ್ಯಾಬಲವನ್ನೇ ಬದಲಾಯಿಸಿದೆ. ಇದರಿಂದಾಗಿ ಆಡಳಿತ ಪಕ್ಷದ ಬಲ ಹೆಚ್ಚಾಗಲಿದ್ದು, ಪ್ರತಿಪಕ್ಷಗಳ ಸಂಖ್ಯಾಬಲ ಕುಸಿಯಲಿದೆ.
ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಳ್ಳುವ ಮತ್ತು ಉದ್ಧವ್ ಬಣದ 6 ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳುವ ಪ್ರಸ್ತಾವನೆಗಳ ಕುರಿತು ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನ ಆರಂಭಕ್ಕೂ ಮುನ್ನವೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಸಿಎಂ ವಿಜಯ್​​ ನೇತೃತ್ವದ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಇಂಡಿಯಾ ಒಕ್ಕೂಟ ಮತ್ತು ಡಿಎಂಕೆ ನಡುವೆ ಬಿರುಕು ಮೂಡಿದೆ. ಹೀಗಾಗಿ ತಮ್ಮ ಸಂಸದರಿಗೆ ಕಾಂಗ್ರೆಸ್‌ನಿಂದ ದೂರವಿರುವ ಬೇರೆ ಆಸನಗಳನ್ನು ವ್ಯವಸ್ಥೆ ಮಾಡುವಂತೆ ಡಿಎಂಕೆ ಈಗಾಗಲೇ ಸ್ಪೀಕರ್‌ಗೆ ಪತ್ರ ಬರೆದಿದೆ. ಈ ಎಲ್ಲ ಬೆಳವಣಿಗೆಗಳು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಿದ್ದು, ಪ್ರತಿಪಕ್ಷಗಳ ಕ್ಯಾಂಪ್‌ನಿಂದ 20 ಟಿಎಂಸಿ ಸಂಸದರು, 6 ಉದ್ಧವ್ ಸೇನಾ ಸಂಸದರು ಹಾಗೂ 22 ಡಿಎಂಕೆ ಸಂಸದರು ದೂರವಾಗುವ ಮೂಲಕ ಪ್ರತಿಪಕ್ಷಗಳು ದುರ್ಬಲಗೊಂಡಿವೆ.

ಮೂರನೇ ಅವಧಿಯಲ್ಲಿ ಎನ್‌ಡಿಎ ಬಲಪ್ರದರ್ಶನ

ಮೂರನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಒಕ್ಕೂಟಕ್ಕೆ ಸಂಸತ್ತಿನಲ್ಲಿ ಈ ಮಟ್ಟದ ಬಹುಮತ ಸಿಗುತ್ತಿರುವುದು ಇದೇ ಮೊದಲು. ಬದಲಾದ ರಾಜಕೀಯ ಪರಿಸ್ಥಿತಿಯು ಎನ್‌ಡಿಎ ಮೈತ್ರಿಕೂಟವನ್ನು ಮೂರನೇ ಎರಡರಷ್ಟು ಬಹುಮತಕ್ಕೆ ಹತ್ತಿರ ತಂದು ನಿಲ್ಲಿಸಿದೆ. 543 ಸದಸ್ಯರ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ 362 ಸಂಸದರ ಬೆಂಬಲ ಬೇಕು. ಸದ್ಯಕ್ಕೆ ಬಸಿರ್‌ಹತ್, ಶಿಲ್ಲಾಂಗ್ ಮತ್ತು ನೌಗಾಂಗ್ ಕ್ಷೇತ್ರಗಳ ಸಂಸದರ ನಿಧನದಿಂದಾಗಿ ಮೂರು ಸ್ಥಾನಗಳು ಖಾಲಿ ಇವೆ. ಹೀಗಾಗಿ, ಪ್ರಸ್ತುತ ಬಹುಮತಕ್ಕೆ ಬೇಕಾದ ಸಂಖ್ಯಾಬಲ 360 ಕ್ಕೆ ಇಳಿದಿದೆ.
ಸದ್ಯ ಎನ್‌ಡಿಎ ಮೈತ್ರಿಕೂಟಕ್ಕೆ 293 ಸಂಸದರ ಬೆಂಬಲವಿದೆ. ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಹಾಗೂ ಶಿಂಧೆ ಬಣ ಸೇರಿದ ಉದ್ಧವ್ ಸೇನೆಯ 6 ಸಂಸದರನ್ನು ಸೇರಿಸಿದರೆ ಈ ಸಂಖ್ಯೆ 319 ಕ್ಕೆ ಏರುತ್ತದೆ. ಇದರೊಂದಿಗೆ 22 ಡಿಎಂಕೆ ಸಂಸದರು ಸಹ ವಿಷಯಾಧಾರಿತ ಬೆಂಬಲ ನೀಡಿದರೆ ಒಟ್ಟು ಸಂಖ್ಯಾಬಲ 341 ತಲುಪುತ್ತದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಸಂವಿಧಾನ ತಿದ್ದುಪಡಿ ಮಸೂದೆಯ ಮತದಾನದ ವೇಳೆ ಎನ್‌ಡಿಎಗೆ ತನ್ನ ಮೂಲ ಬಲಕ್ಕಿಂತ 5 ಹೆಚ್ಚುವರಿ ಮತಗಳು ಲಭಿಸಿದ್ದವು. ಈ 5 ಮತಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಎನ್‌ಡಿಎಯ ಸಂಭಾವ್ಯ ಸಂಖ್ಯಾಬಲ 348 ಕ್ಕೆ ತಲುಪಬಹುದು. ಇದು ಮೂರನೇ ಎರಡರಷ್ಟು ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ ಕೇವಲ 12 ಸ್ಥಾನಗಳಷ್ಟೇ ಕಡಿಮೆ.

ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಸಿದ್ಧತೆ

ಹೆಚ್ಚಿದ ಸಂಖ್ಯಾಬಲದಿಂದ ಉತ್ಸಾಹಗೊಂಡಿರುವ ಸರ್ಕಾರವು ಈ ಅಧಿವೇಶನದಲ್ಲಿ ಕೆಲವು ಪ್ರಮುಖ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ: ಕಳೆದ ಅಧಿವೇಶನದಲ್ಲಿ ಸೋತಿದ್ದ 131ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಲಿದೆ. ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸುವ ಪ್ರಮುಖ ತಿದ್ದುಪಡಿಯನ್ನು ಸರ್ಕಾರ ಇದರಲ್ಲಿ ಸೇರಿಸಬಹುದು ಎನ್ನಲಾಗಿದೆ.
130ನೇ ಸಂವಿಧಾನ ತಿದ್ದುಪಡಿ ಮಸೂದೆ
ಗಂಭೀರ ಅಪರಾಧ ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು ಅಥವಾ ಪ್ರಧಾನಮಂತ್ರಿಯವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಅವರು ಸ್ವಯಂಚಾಲಿತವಾಗಿ ತಮ್ಮ ಹುದ್ದೆಯಿಂದ ಮುಕ್ತರಾಗುವ ಪ್ರಸ್ತಾವನೆ ಇದರಲ್ಲಿದೆ. ಇದರ ದುರುಪಯೋಗ ತಡೆಯಲು ಜಂಟಿ ಸಂಸದೀಯ ಸಮಿತಿ ಕೆಲವು ಪ್ರಮುಖ ಬದಲಾವಣೆಗಳನ್ನು ಸೂಚಿಸುವ ಸಾಧ್ಯತೆಯಿದೆ.
ದೇಶ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ತೀವ್ರ ಪ್ರಯತ್ನ ನಡೆಸಬಹುದು.
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಮಸೂದೆ, ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ, ಆಂಟಿ-ಡೋಪಿಂಗ್ ಮಸೂದೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವ ಸುಗ್ರೀವಾಜ್ಞೆ ಮಸೂದೆ ಮತ್ತು ಕಾರ್ಪೊರೇಟ್ ಕಾನೂನುಗಳಿಗೆ ಸಂಬಂಧಿಸಿದ ಮಸೂದೆಗಳು ಮಂಡನೆಯಾಗುವ ಸಾಧ್ಯತೆಯಿದೆ.

ಪ್ರತಿಪಕ್ಷಗಳ ಅಸ್ತ್ರಗಳು

ಸಂಖ್ಯಾಬಲ ಕಡಿಮೆಯಾಗಿದ್ದರೂ, ಪ್ರತಿಪಕ್ಷಗಳು ಹಲವು ಪ್ರಮುಖ ವಿಷಯಗಳ ಮುಖಾಂತರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿವೆ.
  • ನೀಟ್ (NEET) ಪೇಪರ್ ಸೋರಿಕೆ ವಿಷಯವು ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಲಿದೆ.
  • ರಾಮಮಂದಿರ ದೇಣಿಗೆ ಕಳ್ಳತನದ ಆರೋಪ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ.
  • ಪ್ರಾದೇಶಿಕ ಪಕ್ಷಗಳನ್ನು ಒಡೆಯುವಲ್ಲಿ ಮತ್ತು ಪಕ್ಷಾಂತರಗಳನ್ನು ಪ್ರೋತ್ಸಾಹಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಹೋರಾಟ ನಡೆಸುವ ಸಾಧ್ಯತೆಯಿದೆ(ಏಜೆನ್ಸೀಸ್​​).