ಮುಂಗಾರು ವಿದಾಯ: 11 ವರ್ಷಗಳಲ್ಲೇ ಒಣ ಹವೆ  
ದೇಶ

ಮುಂಗಾರು ವಿದಾಯ: 11 ವರ್ಷಗಳಲ್ಲೇ ಒಣ ಹವೆ

ಈ ಬಾರಿಯ (2026) ಮಾನ್ಸೂನ್​ ಋತು ಸಾಮಾನ್ಯಕ್ಕಿಂತ 12.6 ಪ್ರತಿಶತ ಕಡಿಮೆ ಮಳೆಯೊಂದಿಗೆ ಮುಕ್ತಾಯಗೊಂಡಿದೆ. ದೇಶದ ಶೇಕಡ 43 ಜಿಲ್ಲೆಗಳಲ್ಲಿ 20ರಿಂದ 72 ಪ್ರತಿಶತದಷ್ಟು ಮಳೆ ಕೊರತೆ ದಾಖಲಾಗಿದೆ.

ಈ ಬಾರಿಯ (2026) ಮಾನ್ಸೂನ್​ ಋತು ಸಾಮಾನ್ಯಕ್ಕಿಂತ 12.6 ಪ್ರತಿಶತ ಕಡಿಮೆ ಮಳೆಯೊಂದಿಗೆ ಮುಕ್ತಾಯಗೊಂಡಿದೆ. ದೇಶದ ಶೇಕಡ 43 ಜಿಲ್ಲೆಗಳಲ್ಲಿ 20ರಿಂದ 72 ಪ್ರತಿಶತದಷ್ಟು ಮಳೆ ಕೊರತೆ ದಾಖಲಾಗಿದೆ. ಪಂಜಾಬ್​, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಗುಜರಾತ್​ ಹಾಗೂ ದಕ್ಷಿಣ ಭಾರತದ ಐದೂ ರಾಜ್ಯಗಳು ಮಳೆಯ ತೀವ್ರ ಕೊರತೆಯಿಂದ ಬಾಧಿತವಾಗಿವೆ. ಪೂರ್ವ ಭಾರತದ ಒಡಿಶಾದಲ್ಲಿ ಸಾಮಾನ್ಯಕ್ಕಿಂತ 30 ಪ್ರತಿಶತ ಹೆಚ್ಚು ಮಳೆಯಾಗಿದೆ. ಮಳೆಗೆ ಹೆಸರುವಾಸಿಯಾದ ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ವರ್ಷ 1901ರ ನಂತರದ ಅತಿ ಕಡಿಮೆ ಮಳೆ ದಾಖಲಾಗಿದೆ. 2020ರ ನಂತರ ಈಶಾನ್ಯ ರಾಜ್ಯಗಳಲ್ಲಿ ಮಾನ್ಸೂನ್​ ಅವಧಿಯಲ್ಲಿ ನಿರಂತರವಾಗಿ ಮಳೆ ಕಡಿಮೆಯಾಗುತ್ತಲೇ ಇದೆ. ದೇಶಾದ್ಯಂತ ಈ ಬಾರಿಯ ಮಾನ್ಸೂನ್​ 13ನೇ ಅತ್ಯಂತ ಒಣ ಹವೆಯ (ಕಡಿಮೆ ಮಳೆಯ) ಮಾನ್ಸೂನ್​ ಆಗಿದೆ. ಕಳೆದ 11 ವರ್ಷಗಳಲ್ಲಿ ಇದು ಅತಿ ಹೆಚ್ಚು ಮಳೆ ಕೊರತೆಯುಳ್ಳ ಋತು ಆಗಿದೆ. ಇದರಿಂದ ದೇಶದ ಕೃಷಿ ವಲಯ ಸೇರಿದಂತೆ ಹಲವು ರಂಗಗಳ ಮೇಲೆ ಆಗುವ ಪರಿಣಾಮವೇನು? ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರವುದೇಕೆ? ಈ ಕುರಿತಾದ ವಿವರ ಇಲ್ಲಿದೆ.

ಭಾರತದ ನೈರುತ್ಯ ಮುಂಗಾರು ಋತುವು ದೇಶಾದ್ಯಂತ ಶೇಕಡ 12.6ರಷ್ಟು ಮಳೆ ಕೊರತೆಯೊಂದಿಗೆ ಸೆಪ್ಟೆಂಬರ್​ 30ರಂದು (ಬುಧವಾರ) ಅಂತ್ಯಗೊಂಡಿದೆ. ಇದು ಕಳೆದ 11 ವರ್ಷಗಳಲ್ಲೇ ಅತ್ಯಂತ ಒಣ ಹವೆಯ ಮುಂಗಾರು ಋತುವಾಗಿದ್ದು, ದಕ್ಷಿಣ ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದ ಭಾಗಗಳಿಗೆ ಗರಿಷ್ಠ ಮಟ್ಟದ ಹೊಡೆತ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಶೇಕಡ 25ಕ್ಕಿಂತ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಪ್ರಮುಖವಾಗಿ ಎಲ್​ ನಿನೊ ಪರಿಣಾಮದಿಂದಾಗಿ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯು 759.4 ಮಿ.ಮೀ.ನಷ್ಟು ದಾಖಲಾಗಿದ್ದು, ಇದು 2001ರ ನಂತರದ ನಾಲ್ಕನೇ ಅತ್ಯಂತ ಕಡಿಮೆ ಹಾಗೂ 1901ರ ನಂತರದ 13ನೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ಹಿಂದೆ 2015ರಲ್ಲಿ ಮಳೆಯ ತೀವ್ರ ಕೊರತೆ (ಶೇ. 13) ದಾಖಲಾಗಿತ್ತು. ಈ ಮುಂಗಾರು ಋತುವಿನಲ್ಲಿ ದೇಶದ ಸರಾಸರಿ ವಾಡಿಕೆ ಮಳೆ 868.6 ಮಿ.ಮೀ. ಆಗಿರಬೇಕಿತ್ತು, ಆದರೆ ಈ ವರ್ಷ ಕೇವಲ 759.4 ಮಿ.ಮೀ. ಮಳೆಯಾಗಿದೆ. ಒಟ್ಟು 741 ಜಿಲ್ಲೆಗಳ ಪೈಕಿ 316 ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಜೂನ್​ ಅತ್ಯಂತ ಕ್ಲಿಷ್ಟ ತಿಂಗಳಾಗಿದ್ದು, ಸರಾಸರಿ ಮಳೆಯ ಕೇವಲ ಶೇ. 65ರಷ್ಟು ಮಾತ್ರ ಸುರಿದಿತ್ತು. ಜುಲೈನಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದರೂ, ಆಗಸ್ಟ್​ನಲ್ಲಿ ಸರಾಸರಿಯ ಶೇ. 84ರಷ್ಟು ಮಾತ್ರ ಮಳೆಯಾಯಿತು. ಸೆಪ್ಟೆಂಬರ್​ನಲ್ಲಿ ಅಲ್ಪ ಪ್ರಮಾಣದ ಸುಧಾರಣೆ ದಾಖಲಾಯಿತು.

ಕರ್ನಾಟಕಕ್ಕೆ ಭಾರಿ ಹಿನ್ನಡೆ

ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವೇ ಅತಿ ಹೆಚ್ಚು ಬಾಧಿತವಾಗಿದ್ದು, ಶೇಕಡ 30ರಷ್ಟು ಮಳೆ ಕೊರತೆ ಎದುರಿಸಿದೆ. ಉಳಿದಂತೆ ಕೇರಳದಲ್ಲಿ ಶೇ. 28, ಆಂಧ್ರಪ್ರದೇಶದಲ್ಲಿ ಶೇ. 25, ತಮಿಳುನಾಡಿನಲ್ಲಿ ಶೇ. 20 ಹಾಗೂ ತೆಲಂಗಾಣದಲ್ಲಿ ಶೇ. 18ರಷ್ಟು ಕೊರತೆ ದಾಖಲಾಗಿದೆ. ಇತರ ರಾಜ್ಯಗಳಲ್ಲಿ ಮಣಿಪುರ ಶೇ. 46ರಷ್ಟು ಕೊರತೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ (ಶೇ. 44), ಪಂಜಾಬ್​ (ಶೇ. 41), ಬಿಹಾರ (ಶೇ. 32), ಅಸ್ಸಾಂ (ಶೇ. 28) ಮತ್ತು ಹರಿಯಾಣ (ಶೇ. 23) ಇವೆ. ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ದೀರ್ಘಕಾಲೀನ ಮಳೆ ಇಳಿಕೆಯ ಪ್ರವೃತ್ತಿ ಕಂಡುಬರುತ್ತಿದೆ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ. ಈಶಾನ್ಯ ಹಿಂಗಾರು ಅಕ್ಟೋಬರ್​ ಮೂರನೇ ವಾರದ ವೇಳೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ಅಕ್ಟೋಬರ್​ನಿಂದ ಡಿಸೆಂಬರ್​ ನಡುವೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದ್ದರೂ, ಅಕ್ಟೋಬರ್​ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.

ಮುಂದಿನ ದಿನಗಳು ಹೇಗಿರಲಿವೆ?

  • ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿರತೆಗೆ ಹಿಂಗಾರು (ರಬಿ) ಫಸಲು ಅತ್ಯಂತ ನಿರ್ಣಾಯಕವಾಗಲಿದೆ. ಆದರೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದ್ದು, ಮುಂದಿನ ದಿನಗಳ ಬಗ್ಗೆ ಕಳವಳ ಹುಟ್ಟುಹಾಕಿದೆ.

  • ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ರಫ್ತು ನಿರ್ಬಂಧಗಳು (ಅಕ್ಕಿ, ಸಕ್ಕರೆ ಇತ್ಯಾದಿ), ಆಮದು ಸುಂಕ ಕಡಿತ (ಬೇಳೆಕಾಳುಗಳು) ಮತ್ತು ಬಫರ್​ ಸ್ಟಾಕ್​ನಿಂದ ಧಾನ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮಗಳನ್ನು ಮುಂದುವರಿಸಬಹುದು.

  • ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಘೋಷಣೆಯಾಗುತ್ತಿದ್ದು, ಸರ್ಕಾರದ ಮೇಲೆ ಬರ ಪರಿಹಾರ, ಬೆಳೆ ವಿಮೆ ಪಾವತಿ ಮತ್ತು ವಿಬಿಜಿರಾಮ್​ಜಿ ಯೋಜನೆ ಅಡಿಯಲ್ಲಿ ಉದ್ಯೋಗಾವಕಾಶ ಒದಗಿಸುವ ಆರ್ಥಿಕ ಹೊರೆ ಹೆಚ್ಚಲಿದೆ.

  • ಜಲಾಶಯಗಳ ನೀರನ್ನು ವಿದ್ಯುತ್​ ಅಥವಾ ಕೈಗಾರಿಕೆಗಳಿಗೆ ಬಳಸುವ ಬದಲು, ಕುಡಿಯುವ ನೀರು ಮತ್ತು ನಿಗದಿತ ಕೃಷಿ ನೀರಾವರಿಗೆ ಮಾತ್ರ ಮೀಸಲಿಡುವ ನಿಯಮಗಳನ್ನು ಆಡಳಿತ ವ್ಯವಸ್ಥೆ ಜಾರಿಗೆ ತರಬೇಕಾಗುತ್ತದೆ.

ಎಲ್​ ನಿನೊ ಪ್ರಭಾವ

ಪೆಸಿಫಿಕ್​ ಸಾಗರದಲ್ಲಿ ಪ್ರಬಲ ಎಲ್​ ನಿನೊ ಪರಿಸ್ಥಿತಿ ಮುಂದುವರಿದಿದ್ದು, ಸೆಪ್ಟೆಂಬರ್​ನ ಬಹುತೇಕ ದಿನಗಳಲ್ಲಿ ಮಳೆಯ ಪ್ರಮಾಣದ ಮೇಲೆ ಇದು ಪರಿಣಾಮ ಬೀರಿತು. ಆದಾಗ್ಯೂ, ಮೂರು ವಾಯುಭಾರ ಕುಸಿತಗಳು, ಅದರಲ್ಲಿ ಎರಡು ತೀವ್ರ ವಾಯುಭಾರ ಕುಸಿತಗಳಾಗಿ ಮಾರ್ಪಟ್ಟು, ದಕ್ಷಿಣ, ಮಧ್ಯ ಭಾರತ ಹಾಗೂ ಸಿಂಧೂ & ಗಂಗಾ ಬಯಲು ಸೀಮೆಯಲ್ಲಿ ಮಳೆಯನ್ನು ತಂದವು. ಪಶ್ಚಿಮ ಮಾರುತಗಳ ಸಂವಹನವೂ ಗಂಗಾ ಬಯಲಿನಲ್ಲಿ ಉತ್ತಮ ಮಳೆಗೆ ಕಾರಣವಾಯಿತು. ಆದರೆ, ಒಟ್ಟಾರೆ ಮಳೆಯ ಕೊರತೆಯಿಂದಾಗಿ ಸೆಪ್ಟೆಂಬರ್​ ತಿಂಗಳು ಅಸಾಧಾರಣ ರೀತಿಯಲ್ಲಿ ಬಿಸಿಯಾಗಿತ್ತು. ದಕ್ಷಿಣ ಭಾರತಕ್ಕೆ ಇದು 1901ರ ನಂತರದ ಅತ್ಯಂತ ಗರಿಷ್ಠ ತಾಪಮಾನದ ಸೆಪ್ಟೆಂಬರ್​ ಆಗಿದ್ದರೆ, ದೇಶದ ಮಟ್ಟಿಗೆ ಐದನೇ ಅತ್ಯಂತ ಉಷ್ಣ ತಿಂಗಳಾಗಿದೆ. ಪ್ರಬಲ ಎಲ್​ ನಿನೊ 2027ರ ಮಾರ್ಚ್​ವರೆಗೆ ಮುಂದುವರಿಯಲಿದ್ದು, 2026ರ ಅಕ್ಟೋಬರ್​ ತಿಂಗಳ ಮಳೆಯೂ ವಾಡಿಕೆಗಿಂತ ಕಡಿಮೆಯಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎಲ್​ ನಿನೊ ಇನ್ನಷ್ಟು ಪ್ರಬಲವಾಗಲಿದ್ದು, 2027ರವರೆಗೂ ತೀವ್ರ ಹವಾಮಾನ ವೈಪರೀತ್ಯದ ಅಪಾಯಗಳನ್ನು ಹೆಚ್ಚಿಸಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಎಚ್ಚರಿಸಿತ್ತು.

ಮುಂಗಾರು ಋತುವಿನಲ್ಲಿ ದಾಖಲಾಗಿರುವ ಶೇಕಡ 12.6ರಷ್ಟು ಮಳೆಯ ಕೊರತೆ ದೇಶದ ಕೃಷಿ ಹಾಗೂ ಒಟ್ಟಾರೆ ಆರ್ಥಿಕತೆಯ ಮೇಲೆ ಬಹುಮುಖಿ ಪರಿಣಾಮಗಳನ್ನು ಬೀರಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದು ಮಾತ್ರವಲ್ಲದೆ, ಅಸಮಾನ ಹಂಚಿಕೆ ಮತ್ತು ದೀರ್ಘಾವಧಿಯ ಒಣ ಹವೆಯು ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಳೆಯ ಕೊರತೆಯಿಂದಾಗಿ ಮೇವಿನ ಕೊರತೆ ಎದುರಾಗಿದ್ದು, ಇದು ಹಾಲಿನ ಇಳುವರಿ ಹಾಗೂ ಒಟ್ಟಾರೆ ಪಶುಸಂಗೋಪನಾ ವೆಚ್ಚವನ್ನು ಹೆಚ್ಚಿಸಿದೆ.

ಇಳುವರಿ ಕುಸಿತ: ಬಿತ್ತನೆ ಪ್ರಕ್ರಿಯೆ ಬಹುತೇಕ ಸಾಮಾನ್ಯವಾಗಿದ್ದರೂ, ಬೆಳೆ ಬೆಳೆಯುವ ಹಂತದಲ್ಲಿ ಮಳೆಯ ಅಭಾವ ಉಂಟಾಗಿದ್ದರಿಂದ ಭತ್ತ, ದ್ವಿದಳ ಧಾನ್ಯಗಳು (ತೊಗರಿ, ಹೆಸರು), ಹತ್ತಿ ಮತ್ತು ಸೋಯಾಬೀನ್​ನಂತಹ ಪ್ರಮುಖ ಮುಂಗಾರು ಬೆಳೆಗಳ ಗುಣಮಟ್ಟ ಹಾಗೂ ಎಕರೆ ಇಳುವರಿ ಗಣನೀಯವಾಗಿ ಕುಸಿಯುವ ಭೀತಿ ಎದುರಾಗಿದೆ. ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರದ ಕಾರಣ ಹಿಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ವಿಶೇಷವಾಗಿ ಗೋಧಿ, ಕಡಲೆ ಮತ್ತು ಸಾಸಿವೆ ಬಿತ್ತನೆಗೆ ಅಗತ್ಯವಿರುವ ಪ್ರಾಥಮಿಕ ತೇವಾಂಶ ಇಲ್ಲದಿರುವುದರಿಂದ ಇಳುವರಿ ಕುಸಿತದ ಆತಂಕ ಎದುರಾಗಿದೆ.

ಜಲಾಶಯಗಳ ಸಂಗ್ರಹ ಮಟ್ಟ ಇಳಿಕೆ: ದೇಶದ ಪ್ರಮುಖ 150ಕ್ಕೂ ಹೆಚ್ಚು ಜಲಾಶಯಗಳಲ್ಲಿ ನೀರಿನ ಸಂಗ್ರಹ ಸರಾಸರಿಗಿಂತ ಕಡಿಮೆಯಾಗಿದೆ. ಇದು ನೀರಾವರಿ ಆಧಾರಿತ ಕೃಷಿಗೂ ಸೀಮಿತ ನೀರು ಹಂಚಿಕೆಗೆ ಕಾರಣವಾಗುತ್ತದೆ. ಪ್ರಮುಖ ಮಹಾನಗರಗಳು ಸೇರಿದಂತೆ ಒಳನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮುಂಬರುವ ಬೇಸಿಗೆಯ ವೇಳೆಗೆ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿನ ಬಿಕ್ಕಟ್ಟು ಉಲ್ಬಣಿಸುವ ಸಾಧ್ಯತೆಯಿದೆ.

ವಿದ್ಯುತ್​ ವಲಯದ ಮೇಲೆ ಒತ್ತಡ: ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಜಲವಿದ್ಯುತ್​ ಉತ್ಪಾದನೆ ಕುಸಿಯುತ್ತದೆ. ಮತ್ತೊಂದೆಡೆ, ಕೊಳವೆಬಾವಿಗಳಿಂದ ನೀರೆತ್ತಲು ಕೃಷಿ ಪಂಪ್​ಸೆಟ್​ಗಳಿಗೆ ಹಾಗೂ ಹವಾನಿಯಂತ್ರಣಗಳಿಗೆ ಬೇಡಿಕೆ ಹೆಚ್ಚುವುದರಿಂದ ಉಷ್ಣವಿದ್ಯುತ್​ ಕೇಂದ್ರಗಳ ಮೇಲಿನ ಹೊರೆ ಅಧಿಕವಾಗಿದೆ.

ಆಹಾರ ಹಣದುಬ್ಬರ

ಧಾನ್ಯಗಳು, ಬೇಳೆಕಾಳುಗಳು ಹಾಗೂ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಚಿಲ್ಲರೆ ಹಣದುಬ್ಬರ (ಸಿಪಿಐ) ಏರಿಕೆಯ ಹಾದಿಯಲ್ಲಿದೆ. ಇದು ಜನಸಾಮಾನ್ಯರ ಮಾಸಿಕ ವೆಚ್ಚವನ್ನು ಹೆಚ್ಚಿಸಲಿದೆ. ಅಲ್ಲದೆ, ರೈತರ ಆದಾಯ ಕಡಿಮೆಯಾಗಿರುವುದರಿಂದ ಗ್ರಾಮೀಣ ಮಾರುಕಟ್ಟೆಯಲ್ಲಿ ಎಫ್​ಎಂಸಿಜಿ ಉತ್ಪನ್ನಗಳು, ದ್ವಿಚಕ್ರ ವಾಹನಗಳು, ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳ ಮಾರಾಟದ ಪ್ರಮಾಣ ಕುಸಿದಿದೆ.