ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಮತ್ತು ಪುತ್ರಿ ವೀಣಾ 
ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ; ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾಗೆ ಹೊಸದಾಗಿ ಮತ್ತೆ ಇಡಿ ಸಮನ್ಸ್ | ED summons

ತಿರುವನಂತಪುರಂ: ಸಿಎಂಆರ್ಎಲ್-ಎಕ್ಸಲಾಜಿಕ್ ಹಣಕಾಸು ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರಿಗೆ ಜೂ. 17ರಂದು ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಜಾರಿ ನಿರ್ದೇಶನಾಲಯ(ED summons) ಹೊಸ ಸಮನ್ಸ್ ಜಾರಿ ಮಾಡಿದೆ.
ತಮ್ಮ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ಜೂನ್ 12ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡುವಂತೆ ವೀಣಾ ಈ ಹಿಂದೆ ಮನವಿ ಮಾಡಿದ್ದರಿಂದ ಇಡಿ ಅಧಿಕಾರಿಗಳು ಇಂದು ಹೊಸದಾಗಿ ದಿನಾಂಕ ನಿಗದಿ ಪಡಿಸಿ ಸಮನ್ಸ್ ನೀಡಿದ್ದಾರೆ ಎನ್ನಲಾಗಿದೆ.
ವೀಣಾ ವಿಜಯನ್ ಮತ್ತು ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್(CMRL)ಗೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ವೀಣಾ ವಿಜಯನ್ ಒಡೆತನದ ಐಟಿ ಸಲಹಾ ಸಂಸ್ಥೆಯಾದ ಎಕ್ಸಲಾಜಿಕ್ ಸೊಲ್ಯೂಷನ್ಸ್, ಖಾಸಗಿ ಗಣಿಗಾರಿಕೆ ಕಂಪನಿಯಾದ ಸಿಎಂಆರ್ಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು ಎನ್ನಲಾಗಿದೆ.
ಒಪ್ಪಂದದ ಪ್ರಕಾರ ಸಿಎಂಆರ್ಎಲ್ ವೀಣಾ ವಿಜಯನ್ ಅವರ ಕಂಪನಿಗೆ 1.72 ಕೋಟಿ ರೂ.ಗಳಿಂದ 2.78 ಕೋಟಿ ರೂ.ಗಳವರೆಗೆ ಪಾವತಿಸಿತ್ತು. ಆದಾಗ್ಯೂ ತನಿಖೆಯಿಂದ ಎಕ್ಸಲಾಜಿಕ್ ಸೊಲ್ಯೂಷನ್ಸ್ ಯಾವುದೇ ಐಟಿ ಸೇವೆಗಳನ್ನು ಒದಗಿಸದೆ ಸಿಎಂಆರ್ಎಲ್ ಗೆ ಈ ಮೊತ್ತವನ್ನು ಪಾವತಿಸಿದೆ ಎಂದು ತಿಳಿದುಬಂದಿದೆ. ಸಿಎಂ ಕುಟುಂಬದ ಸಂಬಂಧದಿಂದಾಗಿ ಈ ಹಣ ನೀಡಲಾಗಿದೆ ಎಂದು ಐಟಿ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ವೀಣಾ ವಿಜಯನ್ ವಿರುದ್ಧ ಕಂಪನಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಅಕ್ರಮ ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ. ಪ್ರಕರಣದಲ್ಲಿ ಇಡಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್ಎಲ್ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು, ಮೇ 26ರಂದು ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ. ಬಳಿಕ ಮಾಜಿ ಸಿಎಂ ಪಿಣರಾಯಿ ಮನೆ ಸೇರಿ ಹಲವೆಡೆ ಇಡಿ ದಾಳಿ ಮಾಡಿ ಶೋಧ ನಡೆಸಿತ್ತು (ಏಜೆನ್ಸೀಸ್).