ಕಾಶ್ಮೀರ ಜನತೆಯಿಂದ ಇರಾನ್ಗೆ ದೇಣಿಗೆ
- ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ದಾಳಿ
- ಯುದ್ಧದ ಹೊಡೆತಕ್ಕೆ ಸಿಲುಕಿ ಇರಾನ್ ಅಕ್ಷರಶಃ ತತ್ತರ
- ಸಂಕಷ್ಟದ ಸಮಯದಲ್ಲಿ ತಮ್ಮೊಂದಿಗೆ ನಿಂತ ಕಾಶ್ಮೀರಿಗಳಿಗೆ ಟೆಹ್ರಾನ್ ಧನ್ಯವಾದ
ಕಾಶ್ಮೀರ: ಫೆ.28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ನಡೆಸಿದ ಜಂಟಿ ಕ್ಷಿಪಣಿ ದಾಳಿ, ಇರಾನಿನ ಹಲವಾರು ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತು. ಇಷ್ಟಕ್ಕೆ ನಿಲ್ಲದ ಈ ದಾಳಿ, ಇರಾನ್‌ನ ಸರ್ವೋಚ್ಚ ನಾಯಕ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಕಾರಣವಾಯಿತು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದರ ಜೊತೆಗೆ ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಯುದ್ಧದಿಂದ ಭಾರೀ ನಷ್ಟವನ್ನು ಎದುರಿಸುತ್ತಿರುವ ಇರಾನ್ಗೆ ಆರ್ಥಿಕ ಬಿಕ್ಕಟ್ಟು ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಆದರೂ ವೈರಿಗಳ ವಿರುದ್ಧ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಈ ಕಠಿಣ ಸಮಯದಲ್ಲಿರುವ ಇರಾನ್ಗೆ ಕಾಶ್ಮೀರದ ಜನತೆಯಿಂದ ದೇಣಿಗೆಗಳು ಹರಿದುಬರುತ್ತಿವೆ. ಚಿನ್ನ-ಬೆಳ್ಳಿ, ಕಂಚು ಮತ್ತು ಪ್ರಾಚೀನ ವಸ್ತುಗಳನ್ನು ಕೊಡುವ ಮೂಲಕ ಇರಾನಿನ ಸುಧಾರಣೆಗೆ ಇಲ್ಲಿನ ಸ್ಥಳೀಯರು ಬೇಡಿಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಬುಡ್ಗಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳ ನಿವಾಸಿಗಳು, ಯುದ್ಧ ಪೀಡಿತ ಇರಾನ್‌ನ ಜನರನ್ನು ಬೆಂಬಲಿಸಲು ಮಾನವೀಯ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈದ್-ಉಲ್-ಫಿತರ್ ಆಚರಣೆಗಳ ಬೆನ್ನಲ್ಲೇ, ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ಸ್ವಯಂಸೇವಕರು ಒಗ್ಗೂಡಿ, ಮನೆ ಮನೆಗೆ ತೆರಳಿ ಹಾನಿಗೊಳಗಾದವರಿಗಾಗು ಪರಿಹಾರವನ್ನು ಸಂಗ್ರಹಿಸಿದ್ದಾರೆ. ಈ ವೇಳೆ, ಜನರು ಹಣವನ್ನು ಮಾತ್ರವಲ್ಲದೆ, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಸಾಂಪ್ರದಾಯಿಕ ತಾಮ್ರದ ವಸ್ತುಗಳು ಸೇರಿ ದುಬಾರಿ ವಸ್ತುಗಳನ್ನೇ ಕೊಡುಗೆಯಾಗಿ ನೀಡಿದ್ದಾರೆ.
ಈ ಭಾವುಕ ಕ್ಷಣಕ್ಕೆ ಧನ್ಯವಾದ ಅರ್ಪಿಸಿರುವ ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ, ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದೆ. ಇರಾನ್ ಅನ್ನು ಮತ್ತೆ ಕಟ್ಟಲು ಹಣ ಮತ್ತು ತಮ್ಮ ಕೈಲಾದಷ್ಟು ದಾನ ಮಾಡಿದ ಭಾರತೀಯರ ದಯೆ, ಪ್ರೀತಿ ಮತ್ತು ಮಾನವೀಯತೆಗೆ ನಮ್ಮ ಧನ್ಯವಾದ. ಇದನ್ನು ನಾವು ಎಂದಿಗೂ ಮರೆಯೋದಿಲ್ಲ ಎಂದಿದೆ,(ಏಜೆನ್ಸೀಸ್).