- 2025ರಲ್ಲಿ ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಗಿ ಮೊನಾಲಿಸಾ
- ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊನಾಲಿಸಾ
- ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಬೆಡಗಿ
- ಮೊನಾಲಿಸಾ ಮದುವೆ ಬೆನ್ನಲ್ಲೇ ಶಾಕಿಂಗ್ ಸಂಗತಿ ಬಿಚ್ಚಿಟ್ಟ ನಿರ್ದೇಶಕ
Monalisa Marriage: 2025ರ ಆರಂಭದಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಮಹಾಕುಂಭಮೇಳದಲ್ಲಿ ಜನರ ಗಮನವನ್ನು ತನ್ನತ್ತ ಸೆಳೆದ ಬೆಕ್ಕಿನ ಕಂಗಳ ಹುಡುಗಿಯೊಬ್ಬಳು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಆದರೆ, ಈ ಬಾರಿ ಫೋಟೋ ಅಥವಾ ಸಿನಿಮಾದ ವಿಷಯದಿಂದಲ್ಲ. ಬದಲಿಗೆ ಪ್ರೇಮ ವಿವಾಹದ ವಿಚಾರಕ್ಕೆ ಎಂಬುದು ಗಮನಾರ್ಹ.
ಕುಂಭಮೇಳದಲ್ಲಿ ಈಕೆ ಮಾಡಿದ ಮೋಡಿಯನ್ನು ಇಂದಿಗೂ ನೆಟ್ಟಿಗರು ಮರೆತಿಲ್ಲ. ಮಹಾಕುಂಭಮೇಳದಿಂದ ವೈರಲ್ ಆಗಿ ಸ್ಟಾರ್ ಆದ ಮೊನಾಲಿಸಾ ಇಂದು ಚಿತ್ರನಟಿಯಾಗಿ ಹೊರಹೊಮ್ಮಿದ್ದಾಳೆ. ಮೊದಲ ಸಿನಿಮಾ ಹಿಂದಿಯಲ್ಲಿ ಮಾಡಿರುವ ಈ ಯುವತಿ, ಈಗ ಮಲಯಾಳಂ ಚಿತ್ರರಂಗದಿಂದ ಬಂದ ಆಫರ್ಗೆ ಅಸ್ತು ಎಂದಿದ್ದಾಳೆ. ಪ್ರಸ್ತುತ, ಈ ಚಿತ್ರದ ಶೂಟಿಂಗ್ ತಿರುವನಂತಪುರಂ ಪೂವರ್ನಲ್ಲಿ ನಡೆಯುತ್ತಿದ್ದು, ನಟನೆಗೆಂದು ಬಂದವಳು ಇದೀಗ ದಿಢೀರ್ ಮದುವೆ ಕೂಡ ಮಾಡಿಕೊಂಡಿರುವುದು ಹಲವರ ಹುಬ್ಬೇರಿಸಿದೆ.
ನಿನ್ನೆಯಷ್ಟೇ (ಮಾ.12) ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮೊನಾಲಿಸಾ, ತನಗೆ ಬಲವಂತದ ಮದುವೆ ಮಾಡಿಸಲು ತಂದೆ ಮುಂದಾಗಿದ್ದಾರೆ ಎಂದು ಥಂಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಳು. ಆದರೆ, ಕೇಸ್ ದಾಖಲಿಸಿಕೊಳ್ಳದ ಅಧಿಕಾರಗಳು, ಆಕೆಗೆ ಸಮಾಧಾನ ಮಾಡಿ ಕಳುಹಿಸಿದರು. ತನ್ನ ಪ್ರಿಯಕರನೊಂದಿಗೆ ಠಾಣೆಗೆ ಬಂದ ಬೆಕ್ಕಿನ ಕಣ್ಣಿನ ಸುಂದರಿ, ತಂದೆ ವಿಜಯ್ ಸಿಂಗ್ ಭೋಸ್ಲೆ, ನನಗೆ ಇಷ್ಟವಿಲ್ಲದ ವಿವಾಹಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಳು. ಇದಾದ ಕೆಲವೇ ಗಂಟೆಗಳಲ್ಲಿ ಆಕೆ ತನ್ನ ಪ್ರೇಮಿ ಫರ್ಮಾನ್ ಖಾನ್ ಜೊತೆಗೆ ಮದುವೆ ಮಾಡಿಕೊಂಡ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೊನಾಲಿಸಾ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಲು ಎರಡು ಕಾರಣಗಳಿವೆ. ಒಂದು ಆಕೆ ಮನೆಯವರ ವಿರೋಧವಿದೆ ಹಾಗೂ ಒತ್ತಾಯದ ಮದುವೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದು. ಮತ್ತೊಂದು, ತಾನು ಪ್ರೀತಿಸಿ ಮದುವೆಯಾದ ಹುಡುಗ ಫರ್ಹಾನ್ ಖಾನ್. ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ದೊಡ್ಡದಾಗಿ ಬರೆದು ಪೋಸ್ಟ್ ಮಾಡಿದ್ದಾರೆ.
ಮೊನಾಲಿಸಾ ಪ್ರೀತಿಯಿಂದ ಮದುವೆಯಾಗಿಲ್ಲ. ಆಕೆ ಆಕರ್ಷಣೆಗೆ ಒಳಗಾಗಿ ಮದುವೆಯಾಗಿದ್ದಾಳೆ. ಇದು ಒಂದು ವಿವಾಹವಲ್ಲ. ಬದಲಿಗೆ ಲವ್ ಜಿಹಾದ್. ನಾನೇ ಮೊನಾಲಿಸಾಗೆ ಅವಳ ಜೀವನವನ್ನು ಬದಲಾಯಿಸಲು ತರಬೇತಿ ನೀಡಿ ಚಿತ್ರರಂಗಕ್ಕೆ ಕರೆತಂದೆ. ಆದರೆ, ಈಗ ನಡೆದಿರುವ ಬೆಳವಣಿಗೆಗಳು ನನಗೆ ಭಾರೀ ನೋವುಂಟು ಮಾಡಿವೆ. ಇದು ದಂಗೆಯಲ್ಲ, ಲವ್ ಜಿಹಾದ್. ನನ್ನ ಜೀವನದ ಅತ್ಯಂತ ಕೆಟ್ಟ ದಿನ. ಅತ್ತ ಮೊನಾಲಿಸಾ ಮತ್ತೆ ಸುದ್ದಿಯಲ್ಲಿದ್ದಾರೆ. ನಾನು ಹತಾಶೆಯಲ್ಲಿದ್ದೇನೆ. ಆಕೆ ಈಗಾಗಲೇ ಬಲಿಪಶುವಾಗಿದ್ದಾಳೆ ಎಂದಿದ್ದಾರೆ.
ಮೊನಲಿಸಾ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆಕೆಯ ತಂದೆ ಹೆಂಡತಿ ಬಿಟ್ಟು ಹೋಗಿ, ಇನ್ನೊಂದು ಮದುವೆಯಾದರು. ಈ ಪರಿಸ್ಥಿತಿಯ ಬಗ್ಗೆ ಆಕೆಯ ನನ್ನ ಬಳಿ ಹೇಳಿಕೊಂಡಿದ್ದಳು. ಇದಲ್ಲದೆ, ನನ್ನ ಜೊತೆಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೊನಾಲಿಸಾ ಅವರ ಮ್ಯಾನೇಜರ್ ಆಗಿ ಆಕೆಯ ದಾರಿಯನ್ನೇ ತಪ್ಪಿಸಿದ್ದಾನೆ ಎಂದು ಸ್ಫೋಟಕ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಮತ್ತೊಂದೆಡೆ, ಕೇರಳ ಕಮ್ಯುನಿಸ್ಟ್ ಮತ್ತು ಅಲ್ಲಿನ ಕೆಲವು ಸಂಘಟನೆಗಳು ಮೊನಾಲಿಸಾ ವಿವಾಹ ನಿಜವಾದ ಕೇರಳ ಸ್ಟೋರಿ ಎಂದು ಹೇಳುತ್ತಿವೆ,(ಏಜೆನ್ಸೀಸ್).