ಲಖನೌದಲ್ಲಿ ಮೊಹ್ಸಿನ್ ಖಾನ್ ಮ್ಯಾಜಿಕ್: ರಿಂಕು ಏಕಾಂಗಿ ಹೋರಾಟ! ಪಂತ್ ಪಡೆಗೆ 156 ರನ್‌ಗಳ ಗುರಿ
ಲಖನೌ: ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026ರ 38ನೇ ಪಂದ್ಯವು ಸಾಟಿಯಿಲ್ಲದ ರೋಚಕತೆಗೆ ಸಾಕ್ಷಿಯಾಯಿತು. ಲಖನೌ ಸೂಪರ್ ಜೈಂಟ್ಸ್ (LSGvsKKR ) ವೇಗಿ ಮೊಹ್ಸಿನ್ ಖಾನ್ ಅವರ ಮಾರಕ ಬೌಲಿಂಗ್ ದಾಳಿ ನಲುಗಿತು. ಅಲ್ಲದೆ, KKR ತಂಡದ 'ಸಿಕ್ಸರ್ ಕಿಂಗ್' ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ 83ರನ್‌ಗಳ ಅಮೋಘ ಪ್ರದರ್ಶನದಿಂದಾಗಿ ಕೆಕೆಆರ್ 155 ರನ್ ಗಳಿಸಿತು.
ಮೊಹ್ಸಿನ್ ಖಾನ್ ಮಿಂಚು: ಲಕ್ನೋ ಬಿಗಿಹಿಡಿತ
ಲಖನೌ ಸೂಪರ್ ಜೈಂಟ್ಸ್ (LSG) ತನ್ನ ತವರಿನಲ್ಲಿ ಮತ್ತೊಮ್ಮೆ ಬೌಲಿಂಗ್ ಪರಾಕ್ರಮ ಮೆರೆಯಿತು. ಎಡಗೈ ವೇಗಿ ಮೊಹ್ಸಿನ್ ಖಾನ್ ಕೇವಲ 23 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದು ಈ ಸೀಸನ್‌ನ ಮೊದಲ ಐದು ವಿಕೆಟ್‌ಗಳ ಸಾಧನೆಯಾಗಿದ್ದು, ಮೊಹ್ಸಿನ್ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರಿನ್ಸ್ ಯಾದವ್ ಅವರ ಕರಾರುವಾಕ್ ಬೌಲಿಂಗ್ ಕೂಡ ಕೆಕೆಆರ್ ಮೇಲೆ ಒತ್ತಡ ಹೇರಿತು. ಒಂದು ಹಂತದಲ್ಲಿ ಕೆಕೆಆರ್ ಅಲ್ಪ ಮೊತ್ತಕ್ಕೆ ಕುಸಿಯುವ ಲಕ್ಷಣಗಳು ದಟ್ಟವಾಗಿದ್ದವು.
ರಿಂಕು ಸಿಂಗ್ ಮ್ಯಾಜಿಕ್: ಕೊನೆಯ 2 ಓವರ್‌ಗಳಲ್ಲಿ ನಡೆದಿದ್ದೇನು?
ಪಂದ್ಯದ 18ನೇ ಓವರ್ ಮುಕ್ತಾಯದ ವೇಳೆಗೆ ಪಂದ್ಯವು ಸಂಪೂರ್ಣವಾಗಿ ಲಕ್ನೋ ಹಿಡಿತದಲ್ಲಿತ್ತು. ಆದರೆ, ರಿಂಕು ಸಿಂಗ್ ಅವರ ಮನಸ್ಸಿನಲ್ಲಿ ಬೇರೆಯದೇ ಲೆಕ್ಕಾಚಾರವಿತ್ತು.
ಡೆತ್ ಓವರ್‌ಗಳ ಅಬ್ಬರ: ಅಂತಿಮ ಎರಡು ಓವರ್‌ಗಳಲ್ಲಿ ಕೆಕೆಆರ್ ಬರೋಬ್ಬರಿ 43 ರನ್ ಚಚ್ಚಿತು.
ರಿಂಕು ಸ್ಫೋಟಕ 83: 51 ಎಸೆತಗಳಲ್ಲಿ ಅಜೇಯ 83 ರನ್ ಬಾರಿಸಿದ ರಿಂಕು, ಏಕಾಂಗಿಯಾಗಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ದೃಶ್ಯ ಬದಲಿಸಿದ ಕೊನೆಯ ಓವರ್: ದಿಗವೇಶ್ ಸಿಂಗ್ ರಾಠಿ ಎಸೆದ ಅಂತಿಮ ಓವರ್‌ನಲ್ಲಿ ರಿಂಕು ಸಿಂಗ್ 26 ರನ್ ಲೂಟಿ ಮಾಡಿದರು. ಸತತ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಲಕ್ನೋ ಬೆಂಬಲಿಗರನ್ನು ಮತ್ತು ನಾಯಕ ರಿಷಬ್ ಪಂತ್ ಅವರನ್ನು ಮೂಕವಿಸ್ಮಿತರನ್ನಾಗಿಸಿದರು.
'ಆಬ್ಸ್ಟ್ರಕ್ಟಿಂಗ್ ದಿ ಫೀಲ್ಡ್': ರಘುವಂಶಿ ಆಕ್ರೋಶ, ಮೈದಾನದಲ್ಲಿ ಹೈಡ್ರಾಮಾ!
ಪಂದ್ಯದ ಮಧ್ಯೆ ಕೆಕೆಆರ್ ಯುವ ಆಟಗಾರ ಅಂಗ್ಕ್ರಿಶ್ ರಘುವಂಶಿ ಔಟ್ ಆದ ರೀತಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಅಂಪೈರ್ ಅವರನ್ನು ಔಟ್ ಎಂದು ಘೋಷಿಸಿದರು. ಈ ತೀರ್ಪಿನಿಂದ ಕೆಂಡಾಮಂಡಲರಾದ ರಘುವಂಶಿ, ಮೈದಾನದಿಂದ ಹೊರಹೋಗುವಾಗ ತಮ್ಮ ಹೆಲ್ಮೆಟ್ ಅನ್ನು ಎಸೆದು ಆಕ್ರೋಶ ಹೊರಹಾಕಿದರು. ಅಷ್ಟಕ್ಕೇ ನಿಲ್ಲದೆ, ಬೌಂಡರಿ ಲೈನ್ ಬಳಿ ಬ್ಯಾಟ್ ಅನ್ನು ಕುಶನ್‌ಗೆ ಜೋರಾಗಿ ಹೊಡೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಕೊನೆಯ ಎಸೆತದ ಹೈಡ್ರಾಮಾ ಮತ್ತು ಡಿಆರ್‌ಎಸ್ ಕುತೂಹಲ
ಪಂದ್ಯದ ಅಂತಿಮ ಎಸೆತದಲ್ಲಿ (19.6) ದೊಡ್ಡ ಹೈಡ್ರಾಮಾ ನಡೆಯಿತು. ದಿಗವೇಶ್ ಎಸೆದ ಚೆಂಡು ರಿಂಕು ಅವರ ಪ್ಯಾಡ್ ಸಮೀಪ ಹಾದುಹೋಯಿತು. ರಿಂಕು 'ವೈಡ್'ಗಾಗಿ ಮನವಿ ಮಾಡಿದರು, ಆದರೆ ಅಂಪೈರ್ ನಿರಾಕರಿಸಿದರು. ತಕ್ಷಣ ರಿಂಕು ಡಿಆರ್‌ಎಸ್ (DRS) ಮೊರೆ ಹೋದರು. ಅಲ್ಟ್ರಾ-ಎಡ್ಜ್‌ನಲ್ಲಿ ಚೆಂಡು ಗ್ಲೌಸ್‌ಗೆ ತಾಗಿರುವುದು ಸ್ಪಷ್ಟವಾಯಿತು. ವೈಡ್ ಸಿಗದಿದ್ದರೂ, ರಿಂಕು ಅವರ ಆ ಬ್ಯಾಟಿಂಗ್ ಅಬ್ಬರ ಕೆಕೆಆರ್ ತಂಡವನ್ನು ಸವಾಲಿನ 155/7 ಮೊತ್ತಕ್ಕೆ ತಲುಪಿಸಿತು.
ಶಮಿ-ದಿಗವೇಶ್ ದುಬಾರಿ
ಮೊಹ್ಸಿನ್ ಖಾನ್ ಮಾಡಿದ ಎಲ್ಲಾ ಅದ್ಭುತ ಕೆಲಸಗಳನ್ನು ಕೊನೆಯ ಓವರ್‌ಗಳಲ್ಲಿ ಮೊಹಮ್ಮದ್ ಶಮಿ ಮತ್ತು ದಿಗವೇಶ್ ಸಿಂಗ್ ರಾಠಿ ನೀರುಪಾಲು ಮಾಡಿದರು. ಅತಿಯಾದ ರನ್ ನೀಡಿದ ಇವರು ಲಖನೌ ಪಾಲಿಗೆ ಮುಳುವಾದರು. 155 ರನ್‌ಗಳ ಈ ಮೊತ್ತವು ಈ ಪಿಚ್‌ನಲ್ಲಿ ಗೆಲ್ಲಲು ಕಷ್ಟಸಾಧ್ಯವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ಹೈಲೈಟ್ಸ್:
ಮೊಹ್ಸಿನ್ ಖಾನ್ ಸಾಧನೆ: 5/23 (ಐಪಿಎಲ್‌ನಲ್ಲಿ ಮೊದಲ 5 ವಿಕೆಟ್ ಗೊಂಚಲು).
ರಿಂಕು ಸಿಂಗ್ ಪರಾಕ್ರಮ: 83* (51 ಎಸೆತ), ಕೊನೆಯ ಓವರ್‌ನಲ್ಲಿ 4 ಭರ್ಜರಿ ಸಿಕ್ಸರ್‌ಗಳು.
ವಿವಾದಾತ್ಮಕ ಔಟ್: ಅಂಗ್ಕ್ರಿಶ್ ರಘುವಂಶಿ 'ಆಬ್ಸ್ಟ್ರಕ್ಟಿಂಗ್ ದಿ ಫೀಲ್ಡ್' ಔಟ್ ಮತ್ತು ಅವರ ಆಕ್ರೋಶ.
ನಾಯಕತ್ವ: ರಿಷಬ್ ಪಂತ್ ಅವರ ಚತುರ ಫೀಲ್ಡ್ ಸೆಟ್ಟಿಂಗ್ ಮತ್ತು ಬೌಲಿಂಗ್ ಬದಲಾವಣೆ.
ಈ 155 ರನ್‌ಗಳ ಮೊತ್ತವನ್ನು ಲಕ್ನೋ ಸೂಪರ್ ಜೈಂಟ್ಸ್ ಬೆನ್ನಟ್ಟುತ್ತದೆಯೇ ಅಥವಾ ಕೆಕೆಆರ್ ಬೌಲರ್‌ಗಳು ಮಿಂಚುತ್ತಾರೆಯೇ ಎಂಬುದು ಈಗಿನ ಕುತೂಹಲ,(ಏಜೆನ್ಸೀಸ್).