Debroy Vs Sonia Gandhi: ದೇಶದ ಪ್ರಜಾಪ್ರಭುತ್ವ ಮತ್ತು ಅಸಹಿಷ್ಣುತೆಯ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇತಿಹಾಸದ ಪುಟವೊಂದನ್ನು ತೆರೆದಿಟ್ಟಿದ್ದಾರೆ. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರ್ಥಿಕ ಶ್ರೇಯಾಂಕದಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಾಗ ಅಂದಿನ ಕೇಂದ್ರ ಸರ್ಕಾರ ಕೆರಳಿತ್ತು ಮತ್ತು ಇದರಿಂದಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಬಿಬೇಕ್ ದೇಬ್ರಾಯ್ ಅವರು ಕಾಂಗ್ರೆಸ್-ಸಂಯೋಜಿತ ಸಂಸ್ಥೆಯಿಂದ ಹೊರನಡೆಯಬೇಕಾಯಿತು ಎಂಬ ಹಳೆಯ ವಿವಾದವನ್ನು ಮೋದಿ ನೆನಪಿಸಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಇಂಡಿಯಾ ಟುಡೇ ಗ್ರೂಪ್ನ ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಪ್ರಧಾನಿ ಮೋದಿ ಈ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ನ ಹಿರಿಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಈ ವಾರದ ಆರಂಭದಲ್ಲಷ್ಟೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಎಂಬ ಆತ್ಮಕಥೆ ಬಿಡುಗಡೆಯಾಗಿದೆ. ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ಕಾಂಟೆಂಪರರಿ ಸ್ಟಡೀಸ್ ಸಂಸ್ಥೆಗೆ ಸಂಬಂಧಿಸಿದ ಈ ವಿವಾದವು ಅವರ ಪುಸ್ತಕದಲ್ಲಿ ಉಲ್ಲೇಖವಾಗಿಲ್ಲ. ರಾಜೀವ್ ಗಾಂಧಿ ಫೌಂಡೇಶನ್ನ ಅಂಗಸಂಸ್ಥೆಯಾಗಿರುವ ಆರ್ಜಿಐಸಿಎಸ್ಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಆದರೆ, ಗುರುವಾರದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಈ ಘಟನೆಯನ್ನು ಉಲ್ಲೇಖಿಸಿದರು.
ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ ಮೋದಿ, ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಜೇಬಿನಿಂದ ಸಂವಿಧಾನವನ್ನು ಹೊರತೆಗೆಯುತ್ತಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ತಮ್ಮ ಜೇಬಿನಲ್ಲೇ ಇದೆ ಎಂದು ಅವರು ಭಾವಿಸಿದ್ದಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ ಅವರಿಗೆ ಅಧಿಕಾರದ ಮತ್ತೊಂದು ಬಗೆಯ ಅಮಲು ಇದೆ ಎಂದು ಕುಟುಕಿದರು. ಬಳಿಕ ತಾವು ಗುಜರಾತ್ ಸಿಎಂ ಆಗಿದ್ದಾಗಿನ ಘಟನೆಯನ್ನು ಯಾವುದೇ ಹೆಸರು ಹೇಳದೆ ವಿವರಿಸಿದ ನಮೋ, ಆರ್ಥಿಕತೆಗೆ ಸಂಬಂಧಿಸಿದ ಸಮೀಕ್ಷೆಯೊಂದರಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿತ್ತು. ನಂಬರ್ ಒನ್ ಸ್ಥಾನ ನೀಡಿದ ಸಂಸ್ಥೆಗೆ ಭಾರತದ ಮಾಜಿ ಪ್ರಧಾನಿಯೊಬ್ಬರ ಹೆಸರನ್ನು ಇಡಲಾಗಿತ್ತು. ಈ ಸುಳಿವು ಸಾಕು, ಆ ಹೆಸರನ್ನು ನೀವೇ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.
ಮುಂದುವರಿದು ಮಾತನಾಡಿದ ಪ್ರಧಾನಿ, ದೇಶದ ಅತ್ಯಂತ ಗೌರವಾನ್ವಿತ ಅರ್ಥಶಾಸ್ತ್ರಜ್ಞರು ನಡೆಸಿದ ಸಂಶೋಧನೆಯ ಆಧಾರದ ಮೇಲೆ ಈ ಶ್ರೇಯಾಂಕ ನೀಡಲಾಗಿತ್ತು. ಆದರೆ ದೆಹಲಿಯಲ್ಲಿ ಅಧಿಕಾರದಲ್ಲಿದ್ದವರಿಗೆ ಗುಜರಾತ್ಗೆ ಆ ಮನ್ನಣೆ ಸಿಕ್ಕಿದ್ದು ಇಷ್ಟವಾಗಲಿಲ್ಲ. ಸಂಶೋಧನೆ ನಡೆಸಿದವರಿಗೆ ಇನ್ನು ಮುಂದೆ ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ಔಪಚಾರಿಕವಾಗಿ ಸೂಚನೆ ನೀಡಲಾಯಿತು. ಅಂದಿನಿಂದ ತಮ್ಮ ಅನುಮೋದನೆಯಿಲ್ಲದೆ ಯಾವುದೇ ವರದಿಯನ್ನು ಪ್ರಕಟಿಸುವಂತಿಲ್ಲ ಎಂದು ತಾಕೀತು ಮಾಡಲಾಯಿತು ಎಂದು ಅಂದಿನ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ಕಿಡಿಕಾರಿದರು.
ಪ್ರಧಾನಿ ಮೋದಿ ಉಲ್ಲೇಖಿಸಿದ ಈ ಘಟನೆಯು 2005ರಲ್ಲಿ ನಡೆದಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ನವೆಂಬರ್ 2024ರಲ್ಲಿ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ ಬಿಬೇಕ್ ದೇಬ್ರಾಯ್ ಅವರು 2005ರಲ್ಲಿ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ಕಾಂಟೆಂಪರರಿ ಸ್ಟಡೀಸ್ (RGICS) ನಿರ್ದೇಶಕರಾಗಿದ್ದರು. 2015ರಲ್ಲಿ ದೇಶದಲ್ಲಿ ಅಸಹಿಷ್ಣುತೆ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದಾಗ ಇಂಡಿಯಾ ಟುಡೇ ಟಿವಿಯ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ದೇಬ್ರಾಯ್ ಈ ಘಟನೆಯನ್ನು ಬಹಿರಂಗಪಡಿಸಿದ್ದರು.
2004ರಲ್ಲಿ ತಾವು ಮತ್ತು ತಮ್ಮ ಸಹೋದ್ಯೋಗಿಯೊಬ್ಬರು ಸೇರಿ ಭಾರತದ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯದ ರೇಟಿಂಗ್ ಎಂಬ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದಾಗಿ ದೇಬ್ರಾಯ್ ತಿಳಿಸಿದ್ದರು. ಆ ವರದಿಯಲ್ಲಿ ಗುಜರಾತ್ಗೆ ಮೊದಲ ಸ್ಥಾನ ನೀಡಲಾಗಿತ್ತು. 2004ರಲ್ಲಿ ಯಾರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ 2005ರಲ್ಲಿ ಗುಜರಾತ್ನಲ್ಲಿ ಪುರಸಭೆ ಚುನಾವಣೆಗಳು ನಡೆಯುತ್ತಿದ್ದಾಗ ದೊಡ್ಡ ಕೋಲಾಹಲವೇ ಸೃಷ್ಟಿಯಾಯಿತು. ಇನ್ನು ಮುಂದೆ ಸಂಸ್ಥೆಯ ಯಾವುದೇ ಪ್ರಕಟಣೆಯನ್ನು ರಾಜಕೀಯವಾಗಿ ಪರಿಶೀಲಿಸಿದ ನಂತರವೇ ಬಿಡುಗಡೆ ಮಾಡಬೇಕು ಎಂದು ನನಗೆ ಸೂಚಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಸಹಿಯಿದ್ದ ಸಾಮಾನ್ಯ ಹಸಿರು ಹಾಳೆಯಲ್ಲಿ ಈ ಆದೇಶವನ್ನು ಕಳುಹಿಸಲಾಗಿತ್ತು. ಇದರಿಂದ ಬೇಸತ್ತು ನಾನು ರಾಜೀನಾಮೆ ನೀಡಿದೆ ಎಂದು ದೇಬ್ರಾಯ್ 2015ರ ಸಂದರ್ಶನದಲ್ಲಿ ವಿವರಿಸಿದ್ದರು. ಇದಕ್ಕೂ ಮೊದಲು 2002ರಲ್ಲಿ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಸಂಪಾದಕ ಶೇಷಾದ್ರಿ ಚಾರಿ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದಕ್ಕೂ ಸೋನಿಯಾ ಗಾಂಧಿ ಪರವಾಗಿ ವಿರೋಧ ವ್ಯಕ್ತವಾಗಿತ್ತು ಎಂದು ದೇಬ್ರಾಯ್ ಹೇಳಿದ್ದರು.
ದೇಬ್ರಾಯ್ರ ಈ ಆರೋಪಗಳಿಗೆ ಅಂದೇ ಕಾಂಗ್ರೆಸ್ ಪಕ್ಷವು ದಾಖಲೆಗಳೊಂದಿಗೆ ತಿರುಗೇಟು ನೀಡಿತ್ತು. ದೇಬ್ರಾಯ್ ಎರಡು ವರ್ಷಗಳ ಒಪ್ಪಂದ ಮುಗಿದ ಕಾರಣ ಡಿಸೆಂಬರ್ 2005ರಲ್ಲಿ ಅವರು ಸಂಸ್ಥೆಯಿಂದ ಹೊರನಡೆದಿದ್ದರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು. ಇದೇ ಅವಧಿಯಲ್ಲಿ ಸೋನಿಯಾ ಗಾಂಧಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ವಿರೋಧ ಪಕ್ಷಗಳು ಅವರನ್ನು ಸೂಪರ್ ಪಿಎಂ ಎಂದು ಟೀಕಿಸುತ್ತಿದ್ದವು.
ತಮ್ಮ ಆತ್ಮಕಥೆ ಬಿಲಾಂಗಿಂಗ್ನಲ್ಲಿ ಎನ್ಎಸಿ ಮೇಲಿನ ಟೀಕೆಗಳ ಬಗ್ಗೆ ಬರೆದುಕೊಂಡಿರುವ ಸೋನಿಯಾ ಗಾಂಧಿ, ಎನ್ಎಸಿಯನ್ನು ನಿರಂತರವಾಗಿ ಸೋನಿಯಾ ಗಾಂಧಿಯವರ ಕಿಚನ್ ಕ್ಯಾಬಿನೆಟ್ ಎಂದು ನಿಂದಿಸಲಾಯಿತು. ಆದರೂ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯದ ಸಂಯೋಜನೆಯೇ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಎರಡನೇ ಅವಧಿಗೆ ಅಧಿಕಾರ ತಂದುಕೊಟ್ಟಿತು ಎಂದು ಸಮರ್ಥಿಸಿಕೊಂಡಿದ್ದಾರೆ.
2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಿರ್ಬಂಧ ಮತ್ತು ಅಸಹಿಷ್ಣುತೆಯ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಇದಕ್ಕೆ ಗುರುವಾರ ತಿರುಗೇಟು ನೀಡಿದ ಪ್ರಧಾನಿ ಮೋದಿ, ಅಂದು ಅಂತಹ ಪರಿಸ್ಥಿತಿ ನಿರ್ಮಿಸಿದ್ದವರೇ ಇಂದು ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡದಾಗಿ ಭಾಷಣ ಮಾಡುತ್ತಿದ್ದಾರೆ ಎಂದು ಕಿಡಿಕಾರುವ ಮೂಲಕ 20 ವರ್ಷಗಳ ಹಳೆಯ ವಿವಾದಕ್ಕೆ ಮತ್ತೆ ಜೀವ ತುಂಬಿದ್ದಾರೆ(ಏಜೆನ್ಸೀಸ್).