ದೇಶ

ನನ್ನ ಜೊತೆ ಚರ್ಚೆಯ ಬಳಿಕ ಮೋದಿ ಪ್ರಧಾನಿಯಾಗಿ ಉಳಿಯಲ್ಲ: ಮತ್ತೆ ರಾಹುಲ್ ಗಾಂಧಿ ಸವಾಲು | Rahul Gandhi

ನರೇಂದ್ರ ಮೋದಿ ನನ್ನ ಜೊತೆ ಬಹಿರಂಗ ಚರ್ಚೆ ಮಾಡಿದ ಬಳಿಕ ಪ್ರಧಾನಿಯಾಗಿ ಅಧಿಕಾರದಲ್ಲಿ ಉಳಿಯಲ್ಲ ಎಂದು ಶುಕ್ರವಾರ(ನ. 13) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿಗೆ ಚರ್ಚೆಗೆ ಸವಾಲು ಹಾಕಿದ್ದಾರೆ.

ನವದೆಹಲಿ: ನರೇಂದ್ರ ಮೋದಿ ನನ್ನ ಜೊತೆ ಬಹಿರಂಗ ಚರ್ಚೆ ಮಾಡಿದ ಬಳಿಕ ಪ್ರಧಾನಿಯಾಗಿ ಅಧಿಕಾರದಲ್ಲಿ ಉಳಿಯಲ್ಲ ಎಂದು ಶುಕ್ರವಾರ(ನ. 13) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿಗೆ ಚರ್ಚೆಗೆ ಸವಾಲು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 'ಆಸ್ಕ್​ ಮಿ' ಎಂಬ ಚರ್ಚೆಯಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಯಬಹುದು ಎಂದು ಬಿಜೆಪಿ ಹೇಳಿದ್ದರೂ ಸಾರ್ವಜನಿಕ ಚರ್ಚೆಗೆ ಒತ್ತಾಯಿಸುವುದನ್ನು ಯಾಕೆ ಮುಂದುವರಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ಸದನದಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ನೀಡುತ್ತಿಲ್ಲ, ತಮ್ಮ ಮೈಕ್ರೊಫೋನ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕೃಷಿ ಮಸೂದೆಗಳು, ವೋಟ್ ಚೋರಿ, ಎಸ್​ಐಆರ್, ಚೀನಾ, ಜನರಲ್ ನರವಾಣೆ ಅವರ ಪುಸ್ತಕ, ಎಪ್ಸ್ಟೀನ್ ಬಗ್ಗೆ ಮಾತನಾಡಲು ನೀವು ನನಗೆ ಅವಕಾಶ ನೀಡಲಿಲ್ಲ. ನನಗೆ ಮುಖಾಮುಖಿ ಚರ್ಚೆ (ಒನ್-ಟು-ಒನ್ ಡಿಬೇಟ್) ಬೇಕು. ಸುದೀರ್ಘ ಭಾಷಣಗಳನ್ನು ಒಳಗೊಂಡ ಚರ್ಚೆ ನನಗೆ ಬೇಡ ಎಂದಿದ್ದಾರೆ.

ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಮತ್ತು ನಾನು ಅವರಿಗೆ ಹಾಗೆಯೇ ಮಾಡುತ್ತೇನೆ. ಅವರು ಬರಬಹುದು, ಒಂದು ಟೇಬಲ್ ಇರುತ್ತದೆ, ಒಂದು ಕಡೆ ನರೇಂದ್ರ ಮೋದಿ ಜಿ ಇರುತ್ತಾರೆ ಮತ್ತು ಇನ್ನೊಂದು ಕಡೆ ನಾನಿರುತ್ತೇನೆ.

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಚರ್ಚೆಯ ತೀರ್ಪುಗಾರರನ್ನಾಗಿ ನೇಮಿಸಿದರೆ ತಮಗೆ ಯಾವುದೇ ಆಕ್ಷೇಪವಿಲ್ಲ. ಆದರ ಒಂದು ಮಾತ್ರ ಖಾತರಿಪಡಿಸುತ್ತೇನೆ. ನನ್ನೊಂದಿಗೆ ನೇರ ಚರ್ಚೆಯ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ದೇಶದಲ್ಲಿನ ವಿಪಕ್ಷಗಳ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ್ದರು. ಬಳಿಕ ಯಾರು ದೇಶದ್ರೋಹಿ, ಯಾರು ವಿದೇಶಿಯರ ಕೈಗೊಂಬೆ ಎಂಬ ಬಗ್ಗೆ ರಾಹುಲ್ ಗಾಂಧಿಯವರು ಪದೇ ಪದೇ ಮೋದಿಯವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕುತ್ತಿದ್ದಾರೆ (ಏಜೆನ್ಸೀಸ್).