ಮೋದಿ-ನೆತನ್ಯಾಹು 'ಹೆಕ್ಸಾಗನ್' ರಣತಂತ್ರ: ಭಾರತ-ಇಸ್ರೇಲ್ ಹೊಸ ಮೈತ್ರಿಕೂಟಕ್ಕೆ ಪಾಕಿಸ್ತಾನ ಅಷ್ಟೊಂದು ಹೆದರುತ್ತಿರುವುದೇಕೆ..?  
ದೇಶ

ಮೋದಿ-ನೆತನ್ಯಾಹು 'ಹೆಕ್ಸಾಗನ್' ರಣತಂತ್ರ: ಭಾರತ-ಇಸ್ರೇಲ್ ಹೊಸ ಮೈತ್ರಿಕೂಟಕ್ಕೆ ಪಾಕಿಸ್ತಾನ ಅಷ್ಟೊಂದು ಹೆದರುತ್ತಿರುವುದೇಕೆ..? Hexagon Of Alliances

ಜೆರುಸಲೇಂ: ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಭಾರತವನ್ನು ಒಳಗೊಂಡ ಆರು ರಾಷ್ಟ್ರಗಳ ಪ್ರಬಲ ಹೆಕ್ಸಾಗನ್ ಒಕ್ಕೂಟದ(Hexagon Of Alliances) ಪ್ರಸ್ತಾವನೆ ಮಂಡಿಸಿದ್ದಾರೆ. ಈ ಒಕ್ಕೂಟವು ಮಧ್ಯಪ್ರಾಚ್ಯದ ಕಟುಪಂಥೀಯ ಶಕ್ತಿಗಳನ್ನು ಮಟ್ಟಹಾಕುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.
ಆದರೆ, ಈ ಬೆಳವಣಿಗೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಪಾಕಿಸ್ತಾನ, ಇದನ್ನು ಮುಸ್ಲಿಂ ವಿರೋಧಿ ಕೂಟ ಎಂದು ಕರೆದು ತನ್ನ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಿದೆ.

ಏನಿದು ಹೆಕ್ಸಾಗನ್ ಆಫ್ ಅಲೈಯನ್ಸ್..?

ನೆತನ್ಯಾಹು ಅವರ ವಿವರಿಸಿದಂತೆ, ಇದು ಆರು ಮುಖಗಳ ಬಲಿಷ್ಠ ಕಾರ್ಯತಂತ್ರದ ಚೌಕಟ್ಟಾಗಿದೆ.
ಪ್ರಮುಖ ಸದಸ್ಯರು: ಇಸ್ರೇಲ್, ಭಾರತ, ಗ್ರೀಸ್ ಮತ್ತು ಸೈಪ್ರಸ್ ಈ ಒಕ್ಕೂಟದ ಆಧಾರಸ್ತಂಭಗಳು. ಇದರೊಂದಿಗೆ ಕೆಲವು ಅರಬ್ ಮತ್ತು ಆಫ್ರಿಕನ್ ದೇಶಗಳು ಸೇರಿಕೊಳ್ಳಲಿವೆ.
ಗುರಿ: ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟುಮಾಡುತ್ತಿರುವ ಕಟುಪಂಥೀಯ ಶಿಯಾ ಮತ್ತು ಸುನ್ನಿ ಪಡೆಗಳನ್ನು ಎದುರಿಸುವುದು.
ಭಾರತದ ಪಾತ್ರ: ಭಾರತವು ಈ ಪ್ರದೇಶದಲ್ಲಿ ಆರ್ಥಿಕ ಮತ್ತು ವ್ಯೂಹಾತ್ಮಕ ಶಕ್ತಿಯಾಗಿರುವುದರಿಂದ, ಈ ಒಕ್ಕೂಟದಲ್ಲಿ ನವದೆಹಲಿಗೆ ಅತ್ಯಂತ ಪ್ರಮುಖ ಸ್ಥಾನ ನೀಡಲಾಗಿದೆ.

ಪಾಕಿಸ್ತಾನದ ನಡುಕಕ್ಕೆ ಕಾರಣವೇನು..?

ಪಾಕಿಸ್ತಾನದ ಸೆನೆಟ್ ಈ ಒಕ್ಕೂಟದ ವಿರುದ್ಧ ನಿರ್ಣಯ ಅಂಗೀಕರಿಸಿದ್ದು, ಇದನ್ನು ಪ್ರಾದೇಶಿಕ ಶಾಂತಿಗೆ ಧಕ್ಕೆ ಎಂದು ಕರೆದಿದೆ. ಪಾಕಿಸ್ತಾನದ ಆತಂಕಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.
ಒಂಟಿಯಾಗುವ ಭೀತಿ: ಈಗಾಗಲೇ ಸೌದಿ ಅರೇಬಿಯಾ ಮತ್ತು ಯುಎಇ ಅಂತಹ ಪ್ರಬಲ ಮುಸ್ಲಿಂ ರಾಷ್ಟ್ರಗಳು ಭಾರತದೊಂದಿಗೆ ಆಪ್ತವಾಗಿವೆ. ಈಗ ಈ ಹೊಸ ಒಕ್ಕೂಟ ಜಾರಿಗೆ ಬಂದರೆ, ಪಾಕಿಸ್ತಾನ ಸಂಪೂರ್ಣವಾಗಿ ಮೂಲೆಗುಂಪಾಗಲಿದೆ.
ಮುಸ್ಲಿಂ ಉಮ್ಮಾ ಕಾರ್ಡ್ ವೈಫಲ್ಯ: ಪಾಕಿಸ್ತಾನವು ಇರಾನ್, ಟರ್ಕಿ ಮತ್ತು ಸೌದಿ ಅರೇಬಿಯಾದೊಂದಿಗೆ ಸೇರಿ ನಾಟೋ ಮಾದರಿಯ ಮುಸ್ಲಿಂ ಸೈನ್ಯ ರಚಿಸಲು ಹವಣಿಸುತ್ತಿದೆ. ಇದಕ್ಕೆ ಪ್ರತಿಯಾಗಿ ನೆತನ್ಯಾಹು ಈ ಹೆಕ್ಸಾಗನ್ ಅಸ್ತ್ರ ಪ್ರಯೋಗಿಸಿದ್ದಾರೆ.
ಅಸ್ತಿತ್ವದ ಪ್ರಶ್ನೆ: ಐಎಂಎಫ್ ಸಾಲದ ಮೇಲೆ ಬದುಕುತ್ತಿರುವ ಪಾಕಿಸ್ತಾನಕ್ಕೆ, ಈ ಪ್ರಾದೇಶಿಕ ಬದಲಾವಣೆಗಳು ತನ್ನ ಅಸ್ತಿತ್ವವನ್ನೇ ಅಪ್ರಸ್ತುತಗೊಳಿಸುತ್ತವೆ ಎಂಬ ಭೀತಿ ಶುರುವಾಗಿದೆ.

ಸಂಘರ್ಷದ ಹಾದಿ

ಮುಸ್ಲಿಂ ಉಮ್ಮಾವನ್ನು ರಾಜಕೀಯವಾಗಿ ಮತ್ತು ಸಿದ್ಧಾಂತಿಕವಾಗಿ ಒಡೆಯಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕರು ಕಿಡಿಕಾರಿದ್ದಾರೆ. ಆದರೆ, ನೆತನ್ಯಾಹು ಅವರ ಪ್ರಕಾರ, ಈಗಾಗಲೇ ಇಸ್ರೇಲ್ ಈ ಕಟುಪಂಥೀಯ ಗುಂಪುಗಳನ್ನು ದುರ್ಬಲಗೊಳಿಸಿದ್ದು, ಹೆಕ್ಸಾಗನ್ ಮೂಲಕ ಶಾಶ್ವತ ಶಾಂತಿ ಸ್ಥಾಪಿಸಲು ಮುಂದಾಗಿದೆ.
ಒಟ್ಟಾರೆಯಾಗಿ, ಮೋದಿ ಅವರ ಇಸ್ರೇಲ್ ಭೇಟಿಯು ಕೇವಲ ಎರಡು ದೇಶಗಳ ಸ್ನೇಹವಲ್ಲ, ಬದಲಾಗಿ ಇಡೀ ಮಧ್ಯಪ್ರಾಚ್ಯದ ಚಿತ್ರಣವನ್ನೇ ಬದಲಿಸುವ ಮಹಾ ಮೈತ್ರಿಗೆ ಅಡಿಪಾಯ ಹಾಕಿದೆ ಎಂಬುದು ಸ್ಪಷ್ಟವಾಗಿದೆ,(ಏಜೆನ್ಸೀಸ್).