Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಎಡವೂ ಅಲ್ಲ, ಬಲವೂ ಅಲ್ಲ, ನೆಟ್ಟಗೆ ನಿಲ್ಲಿ!...ಇಂದಿರಾ ಗಾಂಧಿ ಉದಾಹರಣೆ ನೀಡಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ! | Rahul Gandhi

ನವದೆಹಲಿ: ಹೆಚ್ಚಿನ ಮೌಲ್ಯದ ಯುಪಿಐ (UPI) ವ್ಯಾಪಾರಿ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್​, ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಐ ಮೇಲೆ ತೆರಿಗೆ ವಿಧಿಸಿ ಅಮೆರಿಕಕ್ಕೆ ಭಾರಿ ಪ್ರಮಾಣದ ಹಣವನ್ನು ನೀಡುವ ಮೂಲಕ ಪ್ರತಿಯೊಬ್ಬ ಭಾರತೀಯನ ಮೇಲೆಯೂ ತೆರಿಗೆಯ ಹೊರೆ ಹೊರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಮೆರಿಕದ ಮುಂದೆ ಪ್ರಧಾನಿ ಮಂಡಿಯೂರಿದ್ದಾರೆ: ರಾಹುಲ್ ಆರೋಪ

ಕೆಲವು ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (MDR) ಶುಲ್ಕವನ್ನು ಅನುಮತಿಸುವ ಸರ್ಕಾರದ ಹೊಸ ಚೌಕಟ್ಟಿನ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಪ್ರಧಾನಿ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಹೋಲಿಕೆ ಮಾಡುತ್ತಾ ರಾಹುಲ್, ಇಂದಿರಾ ಜಿ ಅವರ ಬಳಿ ಒಮ್ಮೆ ನೀವು ಎಡಪಂಥೀಯರೇ ಅಥವಾ ಬಲಪಂಥೀಯರೇ ಎಂದು ಕೇಳಲಾಗಿತ್ತು. ಅದಕ್ಕೆ ಅವರು ನಾನು ಎಡಕ್ಕೂ ಹೋಗುವುದಿಲ್ಲ, ಬಲಕ್ಕೂ ಹೋಗುವುದಿಲ್ಲ, ನಾನು ನೆಟ್ಟಗೆ ನಿಲ್ಲುತ್ತೇನೆ ಎಂದು ಉತ್ತರಿಸಿದ್ದರು.
ಆದರೆ ಮೋದಿ ಜಿ ಅವರ ಶೈಲಿಯೇ ಸಂಪೂರ್ಣ ವಿಭಿನ್ನ. ಅವರು ಎಡಪಂಥೀಯರೂ ಅಲ್ಲ, ಬಲಪಂಥೀಯರೂ ಅಲ್ಲ. ಡೊನಾಲ್ಡ್ ಟ್ರಂಪ್ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಲು ನಿರ್ಧರಿಸಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಧಾನಿಯವರು ತಕ್ಷಣವೇ ಈ ಶರಣಾಗತಿಯನ್ನು ನಿಲ್ಲಿಸಬೇಕು ಎಂದಿರುವ ಅವರು, ಸ್ವಲ್ಪ ಬೆನ್ನೆಲುಬು ಬೆಳೆಸಿಕೊಳ್ಳಿ ಮತ್ತು ಯುಪಿಐ ಮೇಲಿನ ಈ ಶುಲ್ಕವನ್ನು ಕೂಡಲೇ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.

ಒತ್ತಡದ ಆರೋಪ ತಳ್ಳಿಹಾಕಿದ ಕೇಂದ್ರ ಸರ್ಕಾರ

ವಿಪಕ್ಷದವರ ಆರೋಪದಕ್ಕೆ ತಿರುಗೇಟು ನೀಡಿರುವ ಹಣಕಾಸು ಸಚಿವಾಲಯ, ಈ ನೀತಿ ಬದಲಾವಣೆಯ ಹಿಂದೆ ವಿದೇಶಿ ಪ್ರಭಾವವಿದೆ ಎಂಬ ಆರೋಪಗಳು ಆಧಾರರಹಿತ ಎಂದಿದೆ. ಯುಪಿಐ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು ವಿಶ್ವದಲ್ಲೇ ಅತಿ ದೊಡ್ಡ ರಿಯಲ್-ಟೈಮ್ ಇಂಟರ್‌ಆಪರೇಬಲ್ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ ಎಂದಿರುವ ಸರ್ಕಾರ, ವಹಿವಾಟಿನ ಪ್ರಮಾಣದಲ್ಲಿನ ಏರಿಕೆಯು ಮೂಲಸೌಕರ್ಯ, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ನಿರಂತರ ಹೂಡಿಕೆಯ ಅಗತ್ಯವನ್ನು ಹೆಚ್ಚಿಸಿದೆ ಎಂದು ಅದು ತಿಳಿಸಿದೆ.
ಗ್ರಾಹಕರಿಗೆ ಯುಪಿಐ ಸೇವೆಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಸಚಿವಾಲಯ ತಿಳಿಸಿದ್ದು, ಸ್ನೇಹಿತರಿಗೆ ಹಣ ಕಳುಹಿಸುವುದು, ಅಂಗಡಿಗಳಲ್ಲಿ ಪಾವತಿಸುವುದು ಮತ್ತು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದು ಉಚಿತವಾಗಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ನೀತಿ ಬದಲಾವಣೆಯನ್ನು ವಿದೇಶಿ ಪ್ರಭಾವಕ್ಕೆ ಲಿಂಕ್ ಮಾಡುವ ಆರೋಪಗಳು ಸುಳ್ಳು ಎಂದು ಹೇಳಿರುವ ಸಚಿವಾಲಯ, ಭಾರತದ ಯುಪಿಐ ನೀತಿ ನಿರ್ಧಾರಗಳನ್ನು ಸ್ವತಂತ್ರವಾಗಿಯೇ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರತಿಪಾದಿಸಿದೆ.

ಶುಲ್ಕದ ಅಗತ್ಯವಿದೆ ಎಂದು ಸರ್ಕಾರ ಹೇಳುವುದೇಕೆ..?

ಹಣಕಾಸು ಸಚಿವಾಲಯದ ಪ್ರಕಾರ, ಯುಪಿಐ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಈ ವ್ಯವಸ್ಥೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಅಗತ್ಯವಿದೆ. ಕಳೆದ ಆಗಸ್ಟ್ ಒಂದೇ ತಿಂಗಳಿನಲ್ಲಿ ಯುಪಿಐ 2,450 ಕೋಟಿ (24.5 ಶತಕೋಟಿ) ವ್ಯಾಪಾರಿ ವಹಿವಾಟುಗಳನ್ನು ನಿರ್ವಹಿಸಿದೆ. ಹೀಗಾಗಿ, ಹೆಚ್ಚಿನ ಮೌಲ್ಯದ ವ್ಯಾಪಾರಿ ವಹಿವಾಟುಗಳ ಮೇಲೆ ಸಣ್ಣ ಪ್ರಮಾಣದ ಶುಲ್ಕ ವಿಧಿಸುವುದರಿಂದ, ಪಾವತಿ ಜಾಲಕ್ಕೆ ಅಗತ್ಯವಿರುವ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಭದ್ರತೆಗೆ ಹಣಕಾಸಿನ ನೆರವು ಸಿಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸ್ವಯಂ-ಸುಸ್ಥಿರ, ಸಾರ್ವತ್ರಿಕ ಮತ್ತು ಕೈಗೆಟುಕುವಂತೆ ಮಾಡುವುದೇ ಈ ಕ್ರಮದ ಮುಖ್ಯ ಉದ್ದೇಶ ಎಂದು ಸರ್ಕಾರ ಹೇಳಿದೆ. ಸಾಮಾನ್ಯ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಯುಪಿಐ ಪಾವತಿಗಳನ್ನು ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಹೆಚ್ಚಿನ ಮೌಲ್ಯದ ವ್ಯಾಪಾರಿ ವಹಿವಾಟುಗಳ ಮೇಲಿನ ಶುಲ್ಕದ ವಿಷಯವೇ ಈಗ ರಾಜಕೀಯ ಚರ್ಚೆಯ ಮುಖ್ಯ ವಸ್ತುವಾಗಿದೆ(ಏಜೆನ್ಸೀಸ್​).