ಇಟಲಿಯಲ್ಲಿ ಮೋದಿ ರೀಲ್ಸ್ ಮಾಡುತ್ತಿದ್ದಾರೆ! ದೇಶದ ಯುವಜನರು ಪೇಪರ್ ಲೀಕ್‌ನಿಂದ ಬೀದಿಗೆ ಬಿದ್ದಿದ್ದಾರೆ! ಕೇಂದ್ರದ ರಾಹುಲ್ ಗಾಂಧಿ ವಾಗ್ದಾಳಿ!
ನವದೆಹಲಿ: ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಅತ್ಯಂತ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ದೇಶದ ಲಕ್ಷಾಂತರ ಯುವಕರ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದ್ದರೂ ಪ್ರಧಾನಿ ಮೋದಿ ಅವರು ಇಟಲಿಯಲ್ಲಿ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ Xನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ರಾಹುಲ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಮತ್ತು ದೇಶದಲ್ಲಿ ಪೇಪರ್ ಲೀಕ್ ತಡೆಯಲು ಬಲಿಷ್ಠ ವ್ಯವಸ್ಥೆ ಜಾರಿಗೆ ಬರುವವರೆಗೂ ಕಾಂಗ್ರೆಸ್ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇಟಲಿಯಲ್ಲಿ ರೀಲ್ಸ್, ಭಾರತದಲ್ಲಿ ಲಾಠಿಚಾರ್ಜ್!
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸವನ್ನು ಗುರಿಯಾಗಿಸಿಕೊಂಡು ಕಠಿಣ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ, ಮೋದಿಜಿಯವರು ಇಟಲಿಯಲ್ಲಿ ಕ್ಯಾಂಡಿಗಳನ್ನು ಹಂಚುತ್ತಾ ರೀಲ್ಸ್ ಮಾಡಿಕೊಳ್ಳುತ್ತಾ ಮಜಾ ಮಾಡುತ್ತಿದ್ದಾಗ, ಇತ್ತ ಭಾರತದಲ್ಲಿ ಪೇಪರ್ ಲೀಕ್ ಹಗರಣದಿಂದ ನೊಂದ ಯುವಕರು ತಮಗಾಗಿರುವ ಅನ್ಯಾಯದ ವಿರುದ್ಧ ಬೀದಿಗಿಳಿದು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂದುವರೆದು ಮಾತನಾಡಿರುವ ರಾಹುಲ್, ನೀಟ್ ಪೇಪರ್ ಲೀಕ್ ಹಗರಣವು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಸಂಪೂರ್ಣವಾಗಿ ಹಾಳುಗೆಡವಿದೆ. ಭವಿಷ್ಯವೇ ಶೂನ್ಯವಾಯಿತೆಂದು ನೊಂದು ಹಲವು ಮಕ್ಕಳು ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ದುರಂತಗಳು ಸಂಭವಿಸಿದರೂ ಪ್ರಧಾನಿ ಮೋದಿ ಈವರೆಗೆ ಹಗರಣದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ, ಅತ್ತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿಯೂ ಇಲ್ಲ. ಇಡೀ ಹಗರಣದ ಬಗ್ಗೆ ಮೋದಿ ಬಾಯಿಂದ ಒಂದೇ ಒಂದು ಶಬ್ದವೂ ಹೊರಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಶ್ನೆ ಕೇಳಿದರೆ ಲಾಠಿ ಏಟು: ರಾಜಸ್ಥಾನದಲ್ಲಿ ಭುಗಿಲೆದ್ದ ಆಕ್ರೋಶ!
ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಗಿಳಿದಿರುವ ವಿದ್ಯಾರ್ಥಿಗಳು, ಎನ್‌ಎಸ್‌ಯುಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಪೊಲೀಸರ ಮೂಲಕ ಕ್ರೂರವಾಗಿ ಲಾಠಿ ಪ್ರಹಾರ ನಡೆಸುತ್ತಿವೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಜಲಫಿರಂಗಿ ಮತ್ತು ಲಾಠಿ ಬೀಸುತ್ತಿರುವ ವಿಡಿಯೋವನ್ನು ಅವರು ತಮ್ಮ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದಾರೆ.
ವಿದ್ಯಾರ್ಥಿಗಳ ನ್ಯಾಯಸಮ್ಮತ ಪ್ರಶ್ನೆಗಳಿಗೆ ಲಾಠಿ ಮತ್ತು ದಂಡನೆಗಳ ಮೂಲಕ ಉತ್ತರಿಸುವ ಸರ್ಕಾರ ಎಂದಿಗೂ ಹೊಣೆಗಾರಿಕೆಯಿಂದ ನಡೆಯಲು ಸಾಧ್ಯವಿಲ್ಲ. ಅದು ಕೇವಲ ಭಯದ ವಾತಾವರಣದ ಮೂಲಕ ಆಡಳಿತ ನಡೆಸಲು ಬಯಸುತ್ತದೆ. ಆದರೆ ನಾವು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ಕೊನೆಯದಾಗಿ ಮಾತನಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಹೋರಾಟವು ಕೇವಲ ರಾಜಕೀಯ ಹೋರಾಟವಲ್ಲ. ಈ ಭ್ರಷ್ಟ ಮತ್ತು ವಿಫಲ ಸರ್ಕಾರದಿಂದ ತಮ್ಮ ಸುಂದರ ಭವಿಷ್ಯವನ್ನು ಕಳೆದುಕೊಂಡಿರುವ ದೇಶದ ಪ್ರತಿಯೊಬ್ಬ ಪ್ರಾಮಾಣಿಕ ವಿದ್ಯಾರ್ಥಿಯ ಪರವಾದ ನ್ಯಾಯದ ಯುದ್ಧವಾಗಿದೆ. ಶಿಕ್ಷಣ ಸಚಿವರ ವಜಾ ಮತ್ತು ಪರೀಕ್ಷಾ ವ್ಯವಸ್ಥೆಯ ಸಮೂಲ ಸುಧಾರಣೆಯಾಗುವವರೆಗೂ ಈ ಹೋರಾಟ ತೀವ್ರಗೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ನೇರ ಸಂದೇಶ ರವಾನಿಸಿದ್ದಾರೆ,(ಏಜೆನ್ಸೀಸ್).