ಉಕ್ರೇನ್ ಸಂಘರ್ಷ ಕೊನೆಗೊಳಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಮತ್ತು ಆಲೋಚನೆಗಳನ್ನು ಕೊಂಡಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ದೇಶ

'ಮೋದಿ ಬಳಿ ಅತ್ಯುತ್ತಮ ಆಲೋಚನೆಗಳಿವೆ': ಉಕ್ರೇನ್​ ಯುದ್ಧ ನಿಲ್ಲಿಸಲು ವಿಶೇಷ ಕಾಳಜಿ; ಭಾರತದ ಪ್ರಧಾನಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್​ ಮೆಚ್ಚುಗೆ! Russian President Putin

ಉಕ್ರೇನ್ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಶಾಂತಿ ಪ್ರಯತ್ನಗಳು ಮತ್ತು ಆಲೋಚನೆಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಕ್ಕಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡುವ ಕುರಿತು ನಿರಂತರವಾಗಿ ಧ್ವನಿ ಎತ್ತುವ ಕೆಲವೇ ಕೆಲವು ವಿಶ್ವ ನಾಯಕರಲ್ಲಿ ಮೋದಿ ಕೂಡ ಒಬ್ಬರು ಎಂದು ಬಣ್ಣಿಸಿದ್ದಾರೆ.

ಮೋದಿ ಆಲೋಚನೆಗಳಿಗೆ ಪುಟಿನ್ ಧನ್ಯವಾದ!

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಪುಟಿನ್, "ನಮ್ಮ ನಡುವೆ ಉತ್ತಮ ಸ್ನೇಹ ಹಾಗೂ ವೈಯಕ್ತಿಕ ಬಾಂಧವ್ಯವಿದೆ. ಆದರೆ, ಉಕ್ರೇನ್ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ನರೇಂದ್ರ ಮೋದಿ ಸತತವಾಗಿ ಪ್ರಶ್ನೆ ಕೇಳುತ್ತಾ, ಚರ್ಚೆ ನಡೆಸುತ್ತಿರುವುದು ವಿಶೇಷವಾಗಿದೆ" ಎಂದಿದ್ದಾರೆ.

ಪರಸ್ಪರ ಒಪ್ಪಿಗೆಯಾಗುವಂತಹ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಪ್ರಧಾನಿ ಮೋದಿ ಅವರಿಗೆ ತೀವ್ರ ಆಸಕ್ತಿಯಿದೆ ಹಾಗೂ ಅವರ ಬಳಿ ಅತ್ಯುತ್ತಮ ಆಲೋಚನೆಗಳಿವೆ ಎಂದು ಪುಟಿನ್ ತಿಳಿಸಿದ್ದಾರೆ. ಭಾರತವು ತಟಸ್ಥ ನಿಲುವನ್ನು ಕಾಯ್ದುಕೊಂಡಿದ್ದರೂ, ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸಬೇಕೆಂಬ ಮೋದಿ ಅವರ ಕಳಕಳಿಗೆ ರಷ್ಯಾ ಕೃತಜ್ಞವಾಗಿದೆ ಎಂದು ಪುಟಿನ್​ ಸ್ಪಷ್ಟಪಡಿಸಿದ್ದಾರೆ.

ಭಾರತದ ಮಾನವೀಯ ನಿಲುವು

ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತ ಆರಂಭದಿಂದಲೂ ಅತ್ಯಂತ ಸಮತೋಲಿತ ಹಾಗೂ ಮಾನವೀಯ ದೃಷ್ಟಿಕೋನವನ್ನು ಕಾಯ್ದುಕೊಂಡು ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರೂ ಕೂಡ ಭಾರತದ ಈ ನಿಲುವನ್ನು ಮೆಚ್ಚಿಕೊಂಡಿದ್ದಾರೆ.

ಆಗಸ್ಟ್‌ನಲ್ಲಿ ಜಪಾನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, "ಭಾರತವು ಯಾವಾಗಲೂ ಶಾಂತಿಯ ಪಕ್ಷದಲ್ಲಿದೆ. ಸಮಸ್ಯೆ ಪರಿಹಾರಕ್ಕೆ ಹಿಂಸೆಯಲ್ಲ, ಬದಲಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಏಕೈಕ ಮಾರ್ಗ" ಎಂದು ಹೇಳಿದ್ದರು. ಉಭಯ ದೇಶಗಳ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಉಕ್ರೇನ್‌ನಲ್ಲಿ ಶಾಶ್ವತ ಶಾಂತಿ ಮರುಸ್ಥಾಪಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನಕ್ಕೆ ಸಂಪೂರ್ಣ ಸಾಥ್ ನೀಡಲು ಸಿದ್ಧವಿದೆ ಎಂಬುದನ್ನು ಮೋದಿ ಸ್ಪಷ್ಟಪಡಿಸಿದ್ದರು.

ಬ್ರಿಕ್ಸ್ ಶೃಂಗಸಭೆ ಹಾಗೂ ದ್ವಿಪಕ್ಷೀಯ ಬಾಂಧವ್ಯ

ಇತ್ತೀಚೆಗೆ, ನವದೆಹಲಿಯಲ್ಲಿ ನಡೆದ 18 ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲೂ ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ವ್ಯಾಪಾರ-ವ್ಯವಹಾರ, ಆರ್ಥಿಕ ಸಹಕಾರ, ಇಂಧನ, ತಂತ್ರಜ್ಞಾನ, ರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಮಹತ್ವದ ಚರ್ಚೆಗಳು ನಡೆದಿದ್ದವು, (ಏಜೆನ್ಸೀಸ್​).