ಮೋದಿ ಆಡಳಿತಕ್ಕೆ 12 ವರ್ಷ: ಯುಪಿಐನಿಂದ ಡಿಜಿಲಾಕರ್ವರೆಗೆ...ಭಾರತ ಸಾಧಿಸಿದ ಡಿಜಿಟಲ್ ಕ್ರಾಂತಿ ಇಲ್ಲಿದೆ! Modi govt 12 years
- ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಸರ್ಕಾರವು ಯಶಸ್ವಿಯಾಗಿ ಸತತ 12 ವರ್ಷ ಪೂರೈಸಿದೆ
- ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲೇ ಅಭೂತಪೂರ್ವ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ
- ಜೂನ್ 10 ರ ಬುಧವಾರದಂದು ಪ್ರಧಾನಿ ಹುದ್ದೆಯಲ್ಲಿ ಸತತ 4,399 ದಿನಗಳನ್ನು ಪ್ರಧಾನಿ ಮೋದಿ ಪೂರೈಸಿದ್ದಾರೆ
- ದೇಶದಲ್ಲೇ ಅತ್ಯಂತ ದೀರ್ಘಾವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಮೊದಲ ಪ್ರಧಾನಿ ಎಂಬ ದಾಖಲೆ ಬರೆದಿದ್ದಾರೆ
ನವದೆಹಲಿ: ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಎನ್‌ಡಿಎ (NDA) ಸರ್ಕಾರವು ಯಶಸ್ವಿಯಾಗಿ ಸತತ 12 ವರ್ಷಗಳನ್ನು ( Modi govt 12 years ) ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲೇ ಅಭೂತಪೂರ್ವ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಜೂನ್ 10 ರ ಬುಧವಾರದಂದು ಪ್ರಧಾನಿ ಹುದ್ದೆಯಲ್ಲಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ, ದೇಶದಲ್ಲೇ ಅತ್ಯಂತ ದೀರ್ಘಾವಧಿಗೆ 'ನಿರಂತರವಾಗಿ ಸೇವೆ ಸಲ್ಲಿಸಿದ ಮೊದಲ ಪ್ರಧಾನಿ' ಎಂಬ ಐತಿಹಾಸಿಕ ದಾಖಲೆಯನ್ನು ಮೋದಿ ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸುದೀರ್ಘ ಅವಧಿಯ ದಾಖಲೆಯನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವ ನರೇಂದ್ರ ಮೋದಿ ಅವರ ಈ ಸಾಧನೆ, ನವ ಭಾರತದ ರಾಜಕೀಯ ಸ್ಥಿರತೆ ಮತ್ತು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ 12 ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಅತ್ಯಂತ ಹೆಚ್ಚು ಶ್ಲಾಘನೆಗೆ ಒಳಗಾದ ಮತ್ತು ಮುಂಚೂಣಿಯಲ್ಲಿರುವ ಪ್ರಮುಖ ಬದಲಾವಣೆಗಳೆಂದರೆ, ಅದು ದೇಶದಲ್ಲಿ ನಡೆದ ತಾಂತ್ರಿಕ ಪರಿವರ್ತನೆ.
ಹೌದು, ಸಾಮಾಜಿಕ ಮಾಧ್ಯಮಗಳ ಸದ್ಬಳಕೆ, ಆನ್‌ಲೈನ್ ಪಾವತಿ ಆ್ಯಪ್‌ಗಳ ಕ್ರಾಂತಿ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಆಧಾರಿತ ಪ್ರಧಾನಿ ಮೋದಿಯವರ ಸುಧಾರಣಾ ಕ್ರಮಗಳನ್ನು ವಿಪಕ್ಷಗಳು ಹಾಗೂ ಬೆಂಬಲಿಗರು ಇಬ್ಬರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಡಿಜಿಟಲ್ ಕ್ರಾಂತಿಯು ದೇಶದ ಕಟ್ಟಕಡೆಯ ಪ್ರಜೆಗೂ ತಂತ್ರಜ್ಞಾನದ ಲಾಭವನ್ನು ತಲುಪಿಸುವಲ್ಲಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಹಾಗಾದರೆ, ಕಳೆದ 12 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಏನೆಲ್ಲ ಡಿಜಿಟಲ್ ಕ್ರಾಂತಿಯಾಗಿದೆ ಎಂಬುದನ್ನು ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಆನ್‌ಲೈನ್ ಪೇಮೆಂಟ್
ಭಾರತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಜಾಗತಿಕ ರಿಯಲ್-ಟೈಮ್ (ನೈಜ-ಸಮಯದ) ಪಾವತಿ ವಹಿವಾಟುಗಳಲ್ಲಿ ಭಾರತದ ಪಾಲು ಬರೋಬ್ಬರಿ ಶೇ. 49 ರಷ್ಟಿದ್ದು, ಇದು ಇಡೀ ವಿಶ್ವದ ಒಟ್ಟು ವಹಿವಾಟಿನ ಸರಿಸುಮಾರು ಅರ್ಧದಷ್ಟಾಗಿದೆ. ಈ ಡಿಜಿಟಲ್ ಕ್ರಾಂತಿಗೆ ಪುಷ್ಟಿ ನೀಡುವಂತೆ, ಮಾರ್ಚ್ 2026ರ ಒಂದೇ ತಿಂಗಳಿನಲ್ಲಿ ಸುಮಾರು 30 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹತ್ತಿರಹತ್ತಿರ 2,300 ಕೋಟಿ ಯುಪಿಐ (UPI) ವಹಿವಾಟುಗಳು ದಾಖಲಾಗಿವೆ. ಕೈಯಲ್ಲಿ ನಗದು ಹಣವನ್ನು ಹಿಡಿದುಕೊಂಡು ಓಡಾಡುವ ಜಂಜಾಟವನ್ನು ಸಂಪೂರ್ಣವಾಗಿ ನಿವಾರಿಸಿರುವ ಈ ಆನ್‌ಲೈನ್ ಪಾವತಿ ವ್ಯವಸ್ಥೆಯು, ಬಳಕೆದಾರರು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕವೇ ಬ್ಯಾಂಕ್ ಖಾತೆಗಳನ್ನು ಅತ್ಯಂತ ಸುಲಭವಾಗಿ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ. ಪ್ರಸ್ತುತ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಂದ ಹಿಡಿದು ಬೃಹತ್ ಶಾಪಿಂಗ್ ಮಾಲ್‌ಗಳವರೆಗೆ ಪ್ರತಿಯೊಬ್ಬರೂ ಯುಪಿಐ ಅನ್ನು ವ್ಯಾಪಕವಾಗಿ ಬಳಸುತ್ತಿರುವುದು ದೇಶದ ಡಿಜಿಟಲ್ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಇಡೀ ಭಾರತ ಆವರಿಸಿದ ಇಂಟರ್ನೆಟ್
ಭಾರತ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ದೇಶದ ಶೇ. 99.9 ರಷ್ಟು ಜಿಲ್ಲೆಗಳಲ್ಲಿ 5G ಸೇವೆಗಳು ಲಭ್ಯವಿದ್ದು, ಶೇ. 85 ರಷ್ಟು ಜನಸಂಖ್ಯೆಯನ್ನು ಇದು ತಲುಪಿದೆ. ಈ ಅಗಾಧ ಪ್ರಗತಿಯಿಂದಾಗಿ ಭಾರತವು ಇಂದು ಚೀನಾದ ನಂತರ ವಿಶ್ವದ 2ನೇ ಅತಿ ದೊಡ್ಡ 5G ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಅಲ್ಲದೆ, 2014 ರಲ್ಲಿ ಕೇವಲ 25 ಕೋಟಿಯಷ್ಟಿದ್ದ ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ ಡಿಸೆಂಬರ್ 2025 ರ ವೇಳೆಗೆ ಬರೋಬ್ಬರಿ 4 ಪಟ್ಟು ಹೆಚ್ಚಳವಾಗಿ 103 ಕೋಟಿಗೆ ತಲುಪಿದೆ. ಇಷ್ಟೇ ಅಲ್ಲದೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ಸರ್ಕಾರವು 'ಸೈಬರ್ ಸ್ವಚ್ಛತಾ ಕೇಂದ್ರ'ದ ಮೂಲಕ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ಸೈಬರ್ ಜಗತ್ತನ್ನು ನಿರ್ಮಿಸುತ್ತಿದೆ. ಈ ಮೂಲಕ ದೇಶದ ಶೇ. 98 ರಷ್ಟು ಡಿಜಿಟಲ್ ಜನಸಂಖ್ಯೆಯನ್ನು ಸೈಬರ್ ದಾಳಿ ಮತ್ತು ಭೀತಿಗಳಿಂದ ಯಶಸ್ವಿಯಾಗಿ ರಕ್ಷಿಸಲಾಗುತ್ತಿದೆ.
ಬಾಹ್ಯಾಕಾಶದಲ್ಲಿ ಭಾರತ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಕೃಷಿ ವಲಯದಲ್ಲೂ ದೇಶವು ಅಭೂತಪೂರ್ವ ಡಿಜಿಟಲ್ ಸಾಧನೆ ಮಾಡಿದೆ. 1990ರ ದಶಕದಿಂದ 2014ರವರೆಗೆ ಕೇವಲ 35 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದ ಇಸ್ರೋ, ಈಗ ಬರೋಬ್ಬರಿ 399 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತಲುಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಮತ್ತೊಂದೆಡೆ, ದೇಶದ ರೈತರನ್ನೂ ಸಹ ಡಿಜಿಟಲ್ ಮುಂಚೂಣಿಗೆ ತರಲಾಗಿದ್ದು, ಇದಕ್ಕಾಗಿ 9 ಕೋಟಿಗೂ ಅಧಿಕ 'ರೈತರ ಗುರುತಿನ ಚೀಟಿ'ಗಳನ್ನು ಸೃಷ್ಟಿಸಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯ ಮೂಲಕ ರೈತರಿಗೆ ಕೃಷಿ ಸಾಲಗಳು, ಸಬ್ಸಿಡಿಗಳು ಮತ್ತು ಬೆಳೆ ವಿಮೆ ಸುಲಭವಾಗಿ ಸಿಗುವಂತಾಗಿದೆ. ಅಲ್ಲದೆ, ಅವರ ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಜೋಡಿಸಿರುವುದರಿಂದ ಆರ್ಥಿಕ ವಹಿವಾಟುಗಳು ಅತ್ಯಂತ ಸರಳ ಮತ್ತು ಪಾರದರ್ಶಕವಾಗಿ ನಡೆಯುತ್ತಿವೆ.
ಸರ್ಕಾರಿ ಆ್ಯಪ್ಗಳು
ಮೈಗವ್ ( My gov ): ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕವನ್ನು ಸುಲಭಗೊಳಿಸುವಲ್ಲಿ 'ಮೈಗವ್' ವೆಬ್‌ಸೈಟ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ಇದರಲ್ಲಿ ಆರು ಕೋಟಿಗೂ ಅಧಿಕ ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ಡಿಜಿಟಲ್ ವೇದಿಕೆಯು ಆಡಳಿತದಲ್ಲಿ ಸಾರ್ವಜನಿಕರ ನೇರ ಭಾಗವಹಿಸುವಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಅಲ್ಲದೆ, ನಾಗರಿಕರು ತಮ್ಮ ಅನಿಸಿಕೆಗಳು, ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ಹಿಂದೆಂದಿಗಿಂತಲೂ ಅತ್ಯಂತ ಸುಲಭವಾಗಿ ಸರ್ಕಾರದೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ಅತ್ಯುತ್ತಮ ಸೇತುವೆಯಾಗಿ ಹೊರಹೊಮ್ಮಿದೆ.
ಡಿಜಿಲಾಕರ್ ( DigiLocker ): ಡಿಜಿಟಲ್ ದಾಖಲೆಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ 'ಡಿಜಿಲಾಕರ್' ಆ್ಯಪ್ ಕ್ರಾಂತಿಕಾರಿ ಬದಲಾವಣೆ ತಂದಿದ್ದು, ಪ್ರಸ್ತುತ ಇದರ ಮೂಲಕ 950 ಕೋಟಿಗೂ ಅಧಿಕ ಅಧಿಕೃತ ದಾಖಲೆಗಳನ್ನು ವಿತರಿಸಲಾಗಿದೆ ಹಾಗೂ 69 ಕೋಟಿಗೂ ಹೆಚ್ಚು ಬಳಕೆದಾರರು ಇದರೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಈ ಆ್ಯಪ್ ನಾಗರಿಕರ ವೈಯಕ್ತಿಕ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿರುವುದಲ್ಲದೆ, ಅವುಗಳಿಗೆ ಗರಿಷ್ಠ ಭದ್ರತೆಯನ್ನೂ ಒದಗಿಸಿದೆ. ಬಳಕೆದಾರರು ತಮ್ಮ ಪ್ರಮುಖ ದಾಖಲೆಗಳಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ (Driving License) ಮತ್ತು ವಾಹನ ನೋಂದಣಿ ಪತ್ರ (RC) ಸೇರಿದಂತೆ ಮುಂತಾದ ಅತ್ಯಗತ್ಯ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಡಿಜಿಲಾಕರ್‌ನಲ್ಲಿ ಶೇಖರಿಸಿಡಲು ಇದು ಅನುವು ಮಾಡಿಕೊಟ್ಟಿದೆ.
ಅಂದಹಾಗೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ 'ಡಿಜಿಟಲ್ ಇಂಡಿಯಾ' ಯೋಜನೆಯು ಭಾರತದ ಆರ್ಥಿಕತೆಯನ್ನು ಆಧುನಿಕ ರೂಪಕ್ಕೆ ಬದಲಾಯಿಸುವಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಯೋಜನೆಯಡಿ ದೇಶದಲ್ಲಿ ಬೃಹತ್ ಪ್ರಮಾಣದ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ವನ್ನು ಯಶಸ್ವಿಯಾಗಿ ಸೃಷ್ಟಿಸಲಾಗಿದ್ದು, ಇದರೊಂದಿಗೆ ಜಾರಿಗೆ ತಂದ ಹಲವು ತಂತ್ರಜ್ಞಾನ ಆಧಾರಿತ ಸುಧಾರಣಾ ಕ್ರಮಗಳು ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನೇ ಮರುರೂಪಿಸಿವೆ. ಪಾರದರ್ಶಕ ಆಡಳಿತ, ಸುಲಭ ಆನ್‌ಲೈನ್ ಪಾವತಿಗಳು ಮತ್ತು ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳ ಮೂಲಕ ಈ ಅಭಿಯಾನವು ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಸಬಲೀಕರಣಗೊಳಿಸಿದ್ದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಡಿಜಿಟಲ್ ಶಕ್ತಿಯಾಗಿ ಮುಂಚೂಣಿಗೆ ತಂದು ನಿಲ್ಲಿಸಿದೆ, (ಏಜೆನ್ಸೀಸ್).