ರಾಜ್ ಠಾಕ್ರೆ, ವಿವೇಕ್ ಓಬೆರಾಯ್, ಆರ್.ಮಾದವನ್
ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಎಲ್ಲವನ್ನೂ ಅದ್ಭುತವಾಗಿ ಮಾಡಿದೆ ಎಂದು ಭಾವಿಸಿದ್ದರೆ, ನೀವು ಯಾಕೆ ದುಬೈನಲ್ಲಿ ವಾಸಿಸಿಬೇಕು? ಎಂದು ಬಾಲಿವುಡ್ ನಟರಾದ ವಿವೇಕ್ ಒಬೆರಾಯ್ ಮತ್ತು ಆರ್. ಮಾಧವನ್ ವಿರುದ್ಧ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ(Raj Thackeray) ವಾಗ್ದಾಳಿ ನಡೆಸಿದ್ದಾರೆ.
ಶನಿವಾರ(ಆ. 01) ಮುಂಬೈನಲ್ಲಿ ಎಂಎನ್‌ಎಸ್‌ನ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ದೇಶದಲ್ಲಿ ಸಾವಿರಾರು ಕೈಗಾರಿಕೋದ್ಯಮಿಗಳು ತಮ್ಮ ಚೀಲಗಳನ್ನು ಪ್ಯಾಕ್ ಮಾಡಿಕೊಂಡು ದೇಶವನ್ನು ತೊರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
2019ರಲ್ಲಿ ಬಿಡುಗಡೆಯಾದ ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾ ಉಲ್ಲೇಖಿಸಿದ ಅವರು, ಮೋದಿಯವರ ಬಗ್ಗೆ ಸಿನಿಮಾ ನಿರ್ಮಿಸಿ ಅದರಲ್ಲಿ ಮೋದಿ ಪಾತ್ರವನ್ನು ನಿರ್ವಹಿಸಿದ ವಿವೇಕ್ ಒಬೆರಾಯ್ ಕೂಡ ದುಬೈನಲ್ಲಿ ವಾಸಿಸಲು ಹೋಗಿದ್ದಾರೆ. ಪ್ರಧಾನಿ ಮೋದಿಯನ್ನು ಹೊಗಳಿದ ಇನ್ನೊಬ್ಬ ನಟ ಆರ್.ಮಾದವನ್ ಅವರು ಎಲ್ಲಿ ವಾಸಿಸುತ್ತಾರೆ? ದುಬೈನಲ್ಲಿ ವಾಸಿಸುತ್ತಾರೆ ಎಂದು ಹೇಳಿದ್ದಾರೆ.
ಹಾಗಾದರೆ ನೀವು ಭಾರತವನ್ನು ತುಂಬಾ ಪ್ರೀತಿಸುತ್ತಿದ್ದರೆ, ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಿದ್ದರೆ, ಅವರು ಭಾರತವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಅವರು ನಂಬಿದ್ರೆ, ಕುಟುಂಬ ಸಮೇತ ವಿದೇಶಿ ನೆಲದಲ್ಲಿ ಯಾಕೆ ನೆಲೆಸಿದ್ದೀರಿ? ಅವರು ಇಲ್ಲಿಗೆ ಬಂದು, ಧುರಂಧರ್ ನಂತಹ ಸರ್ಕಾರಿ ಪ್ರಾಯೋಜಿತ ಚಿತ್ರದಲ್ಲಿ ಕೆಲಸ ಮಾಡಿ, ಬಳಿಕ ದುಬೈಗೆ ಹಿಂತಿರುಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ರಧಾನಿ ವಿರುದ್ಧದ ನಿಂದನೆಗಳ ಕುರಿತು ಮಾತನಾಡಿದ ಅವರು, ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪ್ರಧಾನಿ ಮೋದಿ ವಿರುದ್ಧ ಬಳಸಿದ ಭಾಷೆ ಅನುಚಿತವಾಗಿದೆ. ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿ ಸರಿಯಾದ ದಾರಿಯಲ್ಲಿ ನಡೆಸಬೇಕು ಎಂಬ ಪ್ರಧಾನಿಯವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಯಾರೂ ಅಂತಹ ಕೀಳು ಮಟ್ಟದ ಭಾಷೆಯನ್ನು ಬಳಸಬಾರದು. ಆದರೆ ಅವರು ತಮ್ಮದೇ ಪಕ್ಷದ ಬಗ್ಗೆ ಜನರಿಗೂ ಅದನ್ನು ಹೇಳಬೇಕು ಎಂದಿದ್ದಾರೆ.
ಬಿಜೆಪಿಯ ಟ್ರೋಲ್ ಪೇಜ್ಗಳು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯಿಂದ ಹಿಡಿದು ಠಾಕ್ರೆಗಳವರೆಗೆ ಎಲ್ಲಾ ಐಕಾನ್‌ಗಳನ್ನು ಗುರಿಯಾಗಿಸಿಕೊಂಡಿವೆ. ಅವರೇ ಇದನ್ನು ಮೊದಲು ಆರಂಭಿಸಿದವರು. ಈಗ ಅನೇಕ ನಟರು ನಾವು ಟ್ರೋಲ್ ಆಗುತ್ತೇವೆ ಎಂಬ ಕಾರಣಕ್ಕೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸದಿರುವುದು ಉತ್ತಮ ಎಂದು ಭಾವಿಸಿದ್ದಾರೆ. ಬಿಜೆಪಿ ಬೆಂಬಲಿಗರಿಗೂ ಅವಹೇಳನಕಾರಿ ಭಾಷೆಯನ್ನು ಬಳಸುವುದನ್ನು ನಿಲ್ಲಿಸಲು ಹೇಳಬೇಕು ಎಂದು ಪ್ರಧಾನಿಗೆ ಟಾಂಗ್ ನೀಡಿದ್ದಾರೆ (ಏಜೆನ್ಸೀಸ್).