Melodi  
ದೇಶ

ಇಟಲಿ ಪ್ರವಾಸದಲ್ಲಿ ‘Melodi’ ಮ್ಯಾಜಿಕ್‌; ಮೋದಿ ಕೊಟ್ಟ ವಿಶೇಷ ಉಡುಗೊರೆ ವೈರಲ್‌!

ನವದೆಹಲಿ: ನರೇಂದ್ರ ಮೋದಿ ಅವರ ಇಟಲಿ ಪ್ರವಾಸದಲ್ಲಿ ಮತ್ತೊಮ್ಮೆ ‘Melodi’ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ ಮೋದಿ ‘Melody’ ಚಾಕೊಲೇಟ್‌ ಪ್ಯಾಕೆಟ್‌ ಉಡುಗೊರೆಯಾಗಿ ನೀಡಿದ ಕ್ಷಣ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೋದಿ ಮತ್ತು ಮೆಲೋನಿ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣ ಬಳಕೆದಾರರು ‘Melodi’ ಎಂಬ ಹೆಸರು ನೀಡಿದ್ದರು. ಈಗ ಅದೇ ಹೆಸರನ್ನು ಹಾಸ್ಯಮಯವಾಗಿ ಬಳಸಿಕೊಂಡು ಪ್ರಧಾನಿ ಮೋದಿ ನೀಡಿದ ಗಿಫ್ಟ್‌ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಜಾರ್ಜಿಯಾ ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, “ಭಾರತದಿಂದ ನನಗೆ ತುಂಬಾ ವಿಶೇಷ ಉಡುಗೊರೆ ಬಂದಿದೆ” ಎಂದು ಮೆಲೋನಿ ಹೇಳುತ್ತಾರೆ. ಬಳಿಕ ಪ್ರಧಾನಿ ಮೋದಿ ಕೈಯಲ್ಲಿ ‘Melody’ ಚಾಕೊಲೇಟ್‌ ಪ್ಯಾಕೆಟ್‌ ಹಿಡಿದು “Melodi” ಎಂದು ನಗುತ್ತಾ ಹೇಳುವ ದೃಶ್ಯ ಕಾಣಿಸುತ್ತದೆ. ಈ ಕ್ಷಣವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ℹ️

ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿದ್ದು, “Melodi is back” ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು “ಅತ್ಯಂತ ಕ್ಯೂಟ್‌ ಡಿಪ್ಲೊಮಸಿ” ಎಂದು ಕರೆದಿದ್ದಾರೆ. ಭಾರತ ಮತ್ತು ಇಟಲಿ ನಾಯಕರ ಸ್ನೇಹಭಾವದ ಈ ಕ್ಷಣ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಸೆಳೆದಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ ರೋಮ್‌ನ ಐತಿಹಾಸಿಕ ಕೊಲೊಸಿಯಂ ಬಳಿ ಮೆಲೋನಿ ಜೊತೆಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಅಧಿಕೃತ ಮಾತುಕತೆಗೆ ಮುನ್ನ ನಡೆದ ಭೋಜನ ಕೂಟದಲ್ಲಿ ಇಬ್ಬರೂ ನಾಯಕರು ದೀರ್ಘ ಮಾತುಕತೆಯಲ್ಲಿ ತೊಡಗಿರುವ ದೃಶ್ಯಗಳು ಗಮನ ಸೆಳೆದಿದ್ದವು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಮೋದಿ, “ನಿನ್ನೆ ರಾತ್ರಿ ರೋಮ್‌ನಲ್ಲಿ ಪ್ರಧಾನಿ ಮೆಲೋನಿ ಅವರನ್ನು ಭೇಟಿಯಾದೆ. ಇಂದಿನ ಮಾತುಕತೆಗೆ ಎದುರು ನೋಡುತ್ತಿದ್ದೇನೆ,” ಎಂದು ಬರೆದುಕೊಂಡಿದ್ದರು.
ಇನ್ನು ಮೋದಿ ರೋಮ್‌ಗೆ ತಲುಪಿದಾಗ ಜಾರ್ಜಿಯಾ ಮೆಲೋನಿ ತಮ್ಮ ಎಕ್ಸ್‌ ಖಾತೆಯಲ್ಲಿ ಇಬ್ಬರ ಸೆಲ್ಫಿ ಹಂಚಿಕೊಂಡು, “Welcome to Rome, my friend!” ಎಂದು ಬರೆದು ಸ್ವಾಗತಿಸಿದ್ದರು. ಈ ಪೋಸ್ಟ್ ಕೂಡಾ ವೈರಲ್ ಆಗಿತ್ತು.
ಇಬ್ಬರೂ ನಾಯಕರು ರೋಮ್ ನಗರದ ರಸ್ತೆಯಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸಿದ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಕೆಲವರು “Car Diplomacy” ಎಂದು ಕರೆಯುತ್ತಿದ್ದಾರೆ.
‘Melodi’ ಎಂಬ ಹೆಸರು ಮೊದಲ ಬಾರಿ 2023ರ ದುಬೈನಲ್ಲಿ ನಡೆದ COP28 ಶೃಂಗಸಭೆಯ ವೇಳೆ ಭಾರೀ ಟ್ರೆಂಡ್ ಆಗಿತ್ತು. ಆಗ ಜಾರ್ಜಿಯಾ ಮೆಲೋನಿ ಪ್ರಧಾನಿ ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡು “Good friends at COP28 #Melodi” ಎಂದು ಬರೆದುಕೊಂಡಿದ್ದರು. ಆ ನಂತರ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತು.
ಈಗ ಮತ್ತೆ ಮೋದಿ ಇಟಲಿ ಪ್ರವಾಸದ ವೇಳೆ ‘Melodi’ ಟ್ರೆಂಡ್ ಮರುಕಳಿಸಿದೆ. ರಾಜಕೀಯ ಮಾತುಕತೆಗಳ ಜೊತೆಗೆ ಇಬ್ಬರು ನಾಯಕರು ತೋರಿಸುತ್ತಿರುವ ಸ್ನೇಹಭಾವ ಜನರ ಗಮನ ಸೆಳೆಯುತ್ತಿದೆ.
ವಿಶೇಷವಾಗಿ ಪ್ರಧಾನಿ ಮೋದಿ ನೀಡಿದ ‘Melody’ ಚಾಕೊಲೇಟ್‌ ಗಿಫ್ಟ್‌ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ರಾಜಕೀಯ ನಾಯಕರ ನಡುವಿನ ಸ್ನೇಹವನ್ನು ಹಾಸ್ಯಮಯವಾಗಿ ಮತ್ತು ಸರಳವಾಗಿ ಜನರ ಮುಂದೆ ತರುವ ಕ್ಷಣ ಇದಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).