ದುಬೈನಲ್ಲಿ ಯುವತಿಗೆ ಡ್ರಗ್ಸ್​ ನೀಡಿ ಕಾಮುಕರ ಕೋಣೆಗೆ ತಳ್ಳಿದ ಕಿರಾತಕಿ: ವಿಡಿಯೋ ಸೆರೆಹಿಡಿದು ಹರಾಜಿಗಿಟ್ಟ ಕ್ರೂರಿ! Modeling  
ದೇಶ

ದುಬೈನಲ್ಲಿ ಯುವತಿಗೆ ಡ್ರಗ್ಸ್​ ನೀಡಿ ಕಾಮುಕರ ಕೋಣೆಗೆ ತಳ್ಳಿದ ಕಿರಾತಕಿ: ವಿಡಿಯೋ ಸೆರೆಹಿಡಿದು ಹರಾಜಿಗಿಟ್ಟ ಕ್ರೂರಿ! Modeling

ಪ್ರಮುಖ ಮುಖ್ಯಾಂಶಗಳು

  • ದುಬೈನಲ್ಲಿ ಮಾಡೆಲಿಂಗ್ ಅವಕಾಶಗಳ ಆಮಿಷ ಒಡ್ಡಿ ಮಲಯಾಳಂ ಯುವತಿಯರ ಕಳ್ಳಸಾಗಾಣೆ
  • ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಮಾನವ ಕಳ್ಳಸಾಗಣೆ ಜಾಲ ಕೊನೆಗೂ ಬಯಲು
  • ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡ ಪ್ರಕರಣದ ಪ್ರಮುಖ ಆರೋಪಿ ಗುರುವಾಯೂರು ಮೂಲದ ಸಿಂಧು
  • ಸಂತ್ರಸ್ತ ಮಹಿಳೆಯರ ವಿಡಿಯೋ ಬಳಸಿ ದೊಡ್ಡ ಮಟ್ಟದ ಹಣದ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದ್ದ ಕ್ರೂರಿ
ಕೊಚ್ಚಿ: ದುಬೈನಲ್ಲಿ ಮಾಡೆಲಿಂಗ್ ( Modeling ) ಅವಕಾಶಗಳ ಆಮಿಷ ಒಡ್ಡಿ ಕಳೆದ ನಾಲ್ಕು ವರ್ಷಗಳಿಂದ ಮಲಯಾಳಿ ಯುವತಿಯರನ್ನು ಹ್ಯೂಮನ್ ಟ್ರಾಫಿಕಿಂಗ್ (ಮಾನವ ಕಳ್ಳಸಾಗಣೆ) ಜಾಲಕ್ಕೆ ತಳ್ಳುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಸಿಂಧು (56) ತನ್ನ ತಪ್ಪೊಪ್ಪಿಕೊಂಡಿದ್ದಾಳೆ.
ಮೂಲತಃ ಗುರುವಾಯೂರಿನವಳಾಗಿದ್ದು, ಪ್ರಸ್ತುತ ಆಲುವಾದ ತೈಹೋಟದ ಕಡವಿಯಲ್ಲಿ ವಾಸಿಸುತ್ತಿದ್ದ ಸಿಂಧು, ಈ ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರಧಾರಿಯಾಗಿದ್ದಳು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ. ಪ್ರಸ್ತುತ ಪೊಲೀಸರು ಈ ಜಾಲಕ್ಕೆ ಸಿಲುಕಿ ಸಂತ್ರಸ್ತರಾದ ಯುವತಿಯರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಪೊನ್ನಾನಿ ಮೂಲದ ಮಂಜಿಮಾ ಹಾಗೂ ತಿರುವನಂತಪುರಂನ ಪೊಂಗುವಿಲ ನಿವಾಸಿಯಾದ ಅಲೀನಾ ಎಂಬ ಆರೋಪಿಗಳು ಮುಖ್ಯ ಆರೋಪಿ ಸಿಂಧು ಅಧೀನದಲ್ಲೇ ಕೆಲಸ ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ. ಈ ಅಂತಾರಾಷ್ಟ್ರೀಯ ಸೆಕ್ಸ್ ರಾಕೆಟ್ ಜಾಲದಲ್ಲಿ ದುಬೈ ಮೂಲದ ಶಾಮ್ಲಾ ಮತ್ತು ರಹಮತ್ ಮಾಟಕ್ ಎಂಬುವವರ ಹೆಸರೂ ಕೇಳಿಬಂದಿದ್ದು, ಇವರಿಗೂ ಈ ಜಾಲದೊಂದಿಗೆ ನೇರ ಸಂಪರ್ಕವಿದೆ ಎಂದು ವರದಿಯಾಗಿದೆ.
ಇನ್ನು ತನಿಖೆಯ ವೇಳೆ ಈ ಅಕ್ರಮ ದಂಧೆಯ ಸಭೆ ಹಾಗೂ ನೆಟ್‌ವರ್ಕ್‌ನಲ್ಲಿ ಕೆಲವು ಪ್ರಸಿದ್ಧ ಸಿನಿಮಾ ಮತ್ತು ಸೀರಿಯಲ್ ನಟಿಯರೂ ಭಾಗಿಯಾಗಿರುವ ಆಘಾತಕಾರಿ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಸಿಂಧುಗೆ ಎರ್ನಾಕುಲಂ ಫರ್ಸ್ಟ್‌ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೂನ್ 4 ರವರೆಗೆ ಕಾಕನಾಡ್ ಮಹಿಳಾ ಜೈಲಿನಲ್ಲಿ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ವರದಿಯ ಪ್ರಕಾರ, ಈ ಜಾಲದ ಸದಸ್ಯರಿಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಪಾಯಕಾರಿ ಗೂಂಡಾ ಗ್ಯಾಂಗ್‌ಗಳೊಂದಿಗೆ ನಿಕಟ ಸಂಪರ್ಕವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದಂಧೆಯ ಆರೋಪಿಗಳು ಅಮಾಯಕ ಯುವತಿಯರಿಗೆ ವೀಸಾ ಮತ್ತು ಉದ್ಯೋಗದ ಆಮಿಷ ಒಡ್ಡಿ ದುಬೈಗೆ ಕರೆಸಿಕೊಳ್ಳುತ್ತಿದ್ದರು.
ದುಬೈಗೆ ಬಂದ ಯುವತಿಯರಿಗೆ ಮಾದಕ ದ್ರವ್ಯ ಮಿಶ್ರಿತ ಪಾನೀಯಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಅವರ ಅಸಹಾಯಕ ಸ್ಥಿತಿಯ ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಅವರ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಯುವತಿಯರನ್ನು ಲೈಂಗಿಕ ದಾಸ್ಯಕ್ಕೆ ತಳ್ಳುತ್ತಿದ್ದರು ಎಂಬ ಕ್ರೂರ ಸತ್ಯ ರಿಮಾಂಡ್ ವರದಿಯಿಂದ ಬಯಲಾಗಿದೆ.
ಆರೋಪಿ ಸಿಂಧು ಒಡೆತನದ ದುಬೈ ಮೂಲದ ‘ಆಲಿಸ್ ಇವೆಂಟ್ಸ್’ ಎಂಬ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಂತ್ರಸ್ತ ಮಹಿಳೆಯನ್ನು ವಿದೇಶಕ್ಕೆ ಕರೆದೊಯ್ಯಲಾಗಿತ್ತು. ವೀಸಾ ಮತ್ತು ವಿಮಾನದ ಟಿಕೆಟ್‌ಗಾಗಿ ಸಿಂಧು, ಸಂತ್ರಸ್ತೆಯಿಂದ ಬರೋಬ್ಬರಿ 4.75 ಲಕ್ಷ ರೂಪಾಯಿಗಳನ್ನು ಪೀಕಿದ್ದಳು. ಈ ಆಮಿಷವನ್ನು ನಂಬಿದ ಮಹಿಳೆ 2024ರ ಫೆಬ್ರವರಿ 20 ರಂದು ದುಬೈ ತಲುಪಿದ್ದರು. ಆದರೆ ಅಲ್ಲಿಗೆ ತಲುಪಿದ ಬೆನ್ನಲ್ಲೇ ಆಕೆಯನ್ನು ಒಂದು ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು, ಬಾಟಲಿಯಲ್ಲಿದ್ದ ಬಿಳಿ ಬಣ್ಣದ ನಿಗೂಢ ಪೌಡರ್ (ಮಾದಕ ದ್ರವ್ಯ) ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ತದನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬೇರೆ ಪುರುಷರಿದ್ದ ಕೋಣೆಗೆ ತಳ್ಳಿ, ಅವರ ಮೇಲೆ ಗ್ಯಾಂಗ್ ರೇಪ್ (ಸಾಮೂಹಿಕ ಅತ್ಯಾಚಾರ) ಎಸಗಲಾಗಿತ್ತು ಎಂಬ ಅತ್ಯಂತ ಭೀಕರ ಸತ್ಯ ಪೊಲೀಸರ ರಿಮಾಂಡ್ ವರದಿಯಿಂದ ತಿಳಿದುಬಂದಿದೆ.
ಇಷ್ಟೇ ಅಲ್ಲದೆ, ಆರೋಪಿ ಸಿಂಧು ಸಂತ್ರಸ್ತೆಯ ಮೇಲೆ ನಡೆದ ಈ ಘೋರ ದೌರ್ಜನ್ಯದ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದಳು. ನಂತರ ಮಹಿಳೆಯ ಪತಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಆ ಅತ್ಯಾಚಾರದ ಕ್ರೂರ ವಿಡಿಯೋ ತುಣುಕುಗಳನ್ನು ಆತನ ಮೊಬೈಲ್ ಸಂಖ್ಯೆಗೆ ವಾಟ್ಸ್​ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದಳು.
ಅತ್ಯಂತ ದಿಗಿಲು ಮೂಡಿಸುವ ವಿಷಯವೆಂದರೆ, ಆರೋಪಿ ಸಿಂಧು ಈ ದೃಶ್ಯಗಳನ್ನು ವಾಟ್ಸ್​ಆ್ಯಪ್​​ ಚಾಟ್‌ಗಳ ಮೂಲಕ ಇತರ ಗಿರಾಕಿಗಳಿಗೆ ತೋರಿಸಿ, ಸಂತ್ರಸ್ತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅವರೊಂದಿಗೆ ದೊಡ್ಡ ಮಟ್ಟದ ಹಣದ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದ್ದಳು ಎಂಬ ಭಯಾನಕ ನೆಟ್‌ವರ್ಕ್ ಜಾಲ ಕೂಡ ತನಿಖೆಯಲ್ಲಿ ಬಹಿರಂಗಗೊಂಡಿದೆ, (ಏಜೆನ್ಸೀಸ್​).