ಮಾಡೆಲಿಂಗ್​ ಹೆಸರಲ್ಲಿ ಯುವತಿಯರನ್ನು ದುಬೈಗೆ ಕರೆಸಿ ಅತ್ಯಾಚಾರ: ಸಿನಿಮಾ ನಟಿಯರ ಮೇಲೆ ತನಿಖೆಯ ಕರಿನೆರಳು! Modeling  
ದೇಶ

ಮಾಡೆಲಿಂಗ್​ ಹೆಸರಲ್ಲಿ ಯುವತಿಯರನ್ನು ದುಬೈಗೆ ಕರೆಸಿ ಅತ್ಯಾಚಾರ: ಸಿನಿಮಾ ನಟಿಯರ ಮೇಲೆ ತನಿಖೆಯ ಕರಿನೆರಳು! Modeling

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ ಹಾಗೂ ಮಾಡೆಲಿಂಗ್​ ಆಸೆ ಹುಟ್ಟಿಸಿ, ಯುವತಿಯರನ್ನು ದುಬೈಗೆ ಕರೆಸಿ ಲೈಂಗಿಕ ದಂಧೆಗೆ ಮಾರಾಟ
  • ಕೇರಳದ ತಿರುವನಂತಪುರಂನ ನಕಲಿ ಫ್ಯಾಶನ್ ಸ್ಟುಡಿಯೋ ಪ್ರಕರಣದ ತನಿಖೆ ಇದೀಗ ಮತ್ತಷ್ಟು ಚುರುಕು
  • ಸಿನಿಮಾ ಹಾಗೂ ಸೀರಿಯಲ್ ತಾರೆಗಳು ಮತ್ತು ಪ್ರಭಾವಿ ಗ್ಯಾಂಗ್‌ಗಳಿಗೂ ಹರಡಿಕೊಂಡ ಮಾಂಸದಂಧೆ ಜಾಲದ ಕರಿನೆರಳು
Modeling : ಉದ್ಯೋಗ ಹಾಗೂ ಮಾಡೆಲಿಂಗ್​ ಆಸೆ ಹುಟ್ಟಿಸಿ, ಯುವತಿಯರನ್ನು ದುಬೈಗೆ ಕರೆಸಿ ಲೈಂಗಿಕ ದಂಧೆಗೆ ಮಾರಾಟ ಮಾಡುತ್ತಿದ್ದ ಕೇರಳದ ತಿರುವನಂತಪುರಂನ ನಕಲಿ ಫ್ಯಾಶನ್ ಸ್ಟುಡಿಯೋ ಪ್ರಕರಣದ ತನಿಖೆಯನ್ನು ಇದೀಗ ಸಿನಿಮಾ ಹಾಗೂ ಸೀರಿಯಲ್ ತಾರೆಗಳು ಮತ್ತು ಪ್ರಭಾವಿ ಗ್ಯಾಂಗ್‌ಗಳಿಗೂ ವಿಸ್ತರಿಸಲಾಗಿದೆ.
ಈ ಪ್ರಕರಣದ ಮುಖ್ಯ ಆರೋಪಿ ಆಲುವಾದ ತೈನಾಟ್ ನಿವಾಸಿ, 56 ವರ್ಷದ ಸಿಂಧು ಅವರ ಮಗ ಹಾಗೂ ಮಗಳು ನಡೆಸುತ್ತಿರುವ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಚಿತ್ರರಂಗದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಯುವತಿಯರನ್ನು ದುಬೈಗೆ ಸೆಳೆಯುವಲ್ಲಿ ಇವರ ಪ್ರಭಾವವೇನಾದರೂ ಇತ್ತೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣದ ಎರಡನೇ ಆರೋಪಿಯಾದ ತಿರುವನಂತಪುರಂ ಪೊಂಗುವಿಲ ನಿವಾಸಿ ಅಲೀನಾ (23) ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಈಕೆಗೆ ಭೂಗತ ಗ್ಯಾಂಗ್‌ಸ್ಟರ್ ಮಾಫಿಯಾಗಳೊಂದಿಗೆ ನಿಕಟ ಸಂಪರ್ಕವಿರುವುದು ತಿಳಿದುಬಂದಿದೆ. ಸಂತ್ರಸ್ತ ಯುವತಿಯರು ದೂರು ನೀಡದಂತೆ ಈಕೆ ತನ್ನ ಆಪ್ತ ಹಾಗೂ ಕುಖ್ಯಾತ ಗ್ಯಾಂಗ್‌ಸ್ಟರ್ ಔರಂಗಜೇಬ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದಳು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಔರಂಗಜೇಬ್‌ಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವಿಷಯದ ಗಾಂಭೀರ್ಯವನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ದಳ (NIA) ಕೂಡ ಈ ಪ್ರಕರಣದ ವಿವರಗಳನ್ನು ಕಲೆಹಾಕಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾದ ಪ್ರಮುಖ ಆರೋಪಿ ಸಿಂಧುವನ್ನು ಕೊಚ್ಚಿಗೆ ಕರೆತಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕಾನೂನುಬಾಹಿರ ದಂಧೆ ಎಷ್ಟು ಸಮಯದಿಂದ ನಡೆಯುತ್ತಿತ್ತು, ಈವರೆಗೆ ಎಷ್ಟು ಯುವತಿಯರನ್ನು ದುಬೈಗೆ ಸಾಗಿಸಲಾಗಿದೆ ಮತ್ತು ಇದರ ಹಿಂದಿನ ನಿಜವಾದ ಸೂತ್ರಧಾರಿ ಯಾರು ಎಂಬ ಸಂಪೂರ್ಣ ವಿವರಗಳನ್ನು ಹೊರತರಲು ತನಿಖಾ ತಂಡ ಶ್ರಮಿಸುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಾಡೆಲಿಂಗ್ ಹೆಸರಿನಲ್ಲಿ ಯುವತಿಯರಿಗೆ ಜಾಲ ಹೆಣೆದಿದ್ದೇ ಸಿಂಧು ಎಂದು ತಿಳಿದುಬಂದಿದೆ.
ಸಿಂಧು ಅವರೇ ಯುವತಿಯರಿಗೆ ವೀಸಾ ವ್ಯವಸ್ಥೆ ಮಾಡಿ, ದುಬೈನಲ್ಲಿ ತಂಗಲು ವಸತಿ ಸೌಕರ್ಯಗಳನ್ನು ಕಲ್ಪಿಸುತ್ತಿದ್ದರು. ಯುವತಿಯರನ್ನು ಸೆಳೆಯಲು ದುಬೈನಲ್ಲಿ ಮಾಡೆಲಿಂಗ್ ತರಬೇತಿ, ಉದ್ಯೋಗ, ವಿಡಿಯೋ ಶೂಟ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯದ ಆಮಿಷ ಒಡ್ಡಲಾಗುತ್ತಿತ್ತು. ಸಿಂಧು ಪರವಾಗಿ ಯುವತಿಯರನ್ನು ಹುಡುಕಿಕೊಡುವ ಕೆಲಸವನ್ನು ಪೊನ್ನಾನಿ ಮೂಲದ ಮಂಜಿಮಾ ಹಾಗೂ ಸದ್ಯ ರಿಮಾಂಡ್‌ನಲ್ಲಿರುವ ಅಲೀನಾ ಮಾಡುತ್ತಿದ್ದರು. ಈ ಜಾಲಕ್ಕೆ ಸಂಬಂಧಿಸಿದಂತೆ ಸದ್ಯ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

ಮಾಡೆಲಿಂಗ್​ ಕರಾಳತೆ ಬಯಲು

ಅಂದಹಾಗೆ, ಮಾಡೆಲಿಂಗ್ ಹಾಗೂ ವಿದೇಶಗಳಲ್ಲಿ ಉನ್ನತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಿರುಕುಳಕ್ಕೆ ದೂಡುತ್ತಿದ್ದ ಜಾಲದ ಭೀಕರ ಕೃತ್ಯಗಳು ಬೆಳಕಿಗೆ ಬಂದಿವೆ. ಸಂತ್ರಸ್ತ ಯುವತಿಯರನ್ನು ದುಬೈಗೆ ಕರೆದೊಯ್ದು ಅಲ್ಲಿನ ಹೋಟೆಲ್‌ಗಳಲ್ಲಿ ಕೂಡಿಹಾಕಿ, ಸಾಫ್ಟ್ ಡ್ರಿಂಕ್ಸ್‌ಗಳಲ್ಲಿ ಮಾದಕ ದ್ರವ್ಯಗಳನ್ನು ಬೆರೆಸಿ ಬಲವಂತವಾಗಿ ಕುಡಿಸಿ ಪ್ರಜ್ಞೆ ತಪ್ಪಿಸಲಾಗುತ್ತಿತ್ತು, ಆನಂತರ ಅವರನ್ನು ಅಪರಿಚಿತ ಪುರುಷರ ಮುಂದೆ ಪ್ರದರ್ಶಿಸಿ, ಅವರ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಬಳಿಕ ಅದೇ ವಿಡಿಯೋ-ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಾ, ಯುವತಿಯರ ಮೇಲೆ ನಿರಂತರವಾಗಿ ಕ್ರೂರ ದೌರ್ಜನ್ಯ ಎಸಗಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಕೇರಳ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ, (ಏಜೆನ್ಸೀಸ್​).