ಇನ್‌ಫ್ಲುಯೆನ್ಸರ್ ಮೋತೆ ಕ್ಷಮೆ ಕೇಳುತ್ತಿರುವುದು.
ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ(Raj Thackeray) ಅವರನ್ನು ಅಣಕಿಸಿ ರೀಲ್ಸ್ ಮಾಡಿದ ಆರೋಪದ ಮೇಲೆ ಇನ್ಫ್ಲುಯೆನ್ಸರ್ವೊಬ್ಬರನ್ನು ಎಮ್ಎನ್ಎಸ್ ಕಾರ್ಯಕರ್ತರು ಹಿಡಿದು ಥಳಿಸಿ, ಕಪ್ಪು ಮಸಿ ಬಳಿದು ಹಾಗೂ ತಲೆ ಮೇಲೆ ಚಪ್ಪಲಿ ಹೊರಿಸಿ ಠಾಕ್ರೆ ಫೋಟೋ ಮುಂದೆ ಒತ್ತಾಯಪೂರ್ವಕವಾಗಿ ಕ್ಷಮೆ ಕೇಳಿಸಿದ್ದಾರೆ.
ಮಹೇಶ್ ಮೋತೆ ಎಮ್ಎನ್ಎಸ್ ಕಾರ್ಯಕರ್ತರಿಂದ ಅಪಮಾನಿತನಾದ ಇನ್‌ಫ್ಲುಯೆನ್ಸರ್. ಘಟನೆ ಕುರಿತು ಎಂಎನ್‌ಎಸ್ ಕಾರ್ಯಕರ್ತರು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋತೆ ಕಣ್ಣೀರಾಕುತ್ತಾ ರೀಲ್ಸ್ನಲ್ಲಿ ತಾವು ಮಾಡಿದ ಅಪಹಾಸ್ಯಕ್ಕೆ ಕ್ಷಮೆ ಕೇಳುತ್ತಿರುವುದು ಕಂಡು ಬಂದಿದೆ. ಜೊತೆಗೆ ತಮ್ಮ ಬಿಟ್ಟು ಬಿಡುವಂತೆ ಅಂಗಲಾಚುತ್ತಿರುವುದು ದಾಖಲಾಗಿದೆ.
ವಿಡಿಯೋದಲ್ಲಿ ಮಾತನಾಡಿರುವ ಮೋತೆ, ನಾನು ಅರಿವಿಲ್ಲದೆ ರಾಜ್ ಸಾಹೇಬ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ಹಾಗೆಯೇ ಶುಭಂ ದಾದಾ ಮತ್ತು ಎಂಎನ್‌ಎಸ್ ಕಾರ್ಯಕರ್ತರ ಬಗ್ಗೆ ಬಗ್ಗೆಯೂ ಅನುಚಿತವಾಗಿ ಮಾತನಾಡಿದ್ದೇನೆ. ಇಂದು ನನ್ನ ಆ ತಪ್ಪಿನ ಬಗ್ಗೆ ನನಗೆ ತೀವ್ರ ಪಶ್ಚಾತ್ತಾಪವಿದೆ. ಎಲ್ಲರಿಗೂ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾನೆ.
ಸುಮಾರು 15 ದಿನಗಳ ಹಿಂದೆ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ ಮೋತೆ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಕುರಿತು ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾನೆ ಎನ್ನಲಾಗಿದೆ. ಬಳಿಕ ಮೋತೆ 15-20 ದಿನಗಳಿಂದ ಕೇರಳಕ್ಕೆ ತೆರಳಿದ್ದನು. ಅವನು ಪುಣೆಗೆ ಮರಳಿದ್ದು ಮತ್ತು ಕತ್ರಾಜ್ ಪ್ರದೇಶದಲ್ಲಿರುವುದು ಎಂಎನ್‌ಎಸ್ ಕಾರ್ಯಕರ್ತರಿಗೆ ತಿಳಿಯುತ್ತಿದ್ದಂತೆಯೇ, ಸ್ಥಳಕ್ಕೆ ಧಾವಿಸಿ ಹಿಡಿದುಕೊಂಡು ಎಂಎನ್‌ಎಸ್ ಕಚೇರಿಗೆ ಕರೆತಂದಿದ್ದಾರೆ.
ಈ ಕುರಿತು ಹೆಮ್ಮೆಯಿಂದ ಘಟನೆ ಬಗ್ಗೆ ವಿವರಿಸಿರುವ ಶುಭಂ ಜಗದಾಳೆ, ಮೋತೆಯನ್ನು ಕರೆತಂದು ಕಚೇರಿಯಲ್ಲಿ ಮಹಾಪ್ರಸಾದ ನೀಡಲಾಗಿದೆ ಎಂದಿದ್ದಾರೆ. ಮಹಾಪ್ರಸಾದ ಎಂದರೆ ಎಂಎನ್‌ಎಸ್ ಭಾಷೆಯಲ್ಲಿ ಹೊಡೆಯುವುದು ಎಂದರ್ಥ. ರಾಜ್ ಠಾಕ್ರೆ ಅವರನ್ನು ಅವಮಾನಿಸುವ ಯಾರೇ ಆದರೂ ಇದೇ ರೀತಿಯ ಗತಿಯನ್ನು ಎದುರಿಸಬೇಕಾಗುತ್ತದೆ ಅವರು ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).