Bihar Speaker | ಬಿಹಾರ ವಿಧಾನಸಭೆಯ 18ನೇ ಸ್ಪೀಕರ್ ಆಗಿ ಹಿರಿಯ ಶಾಸಕ ಪ್ರೇಮ್ ಕುಮಾರ್ ಆಯ್ಕೆ
ಪಟನಾ: ಬಿಹಾರ ವಿಧಾನಸಭೆಯ 18ನೇ ಸ್ಪೀಕರ್ ಆಗಿ ಹಿರಿಯ ಶಾಸಕ ಪ್ರೇಮ್ ಕುಮಾರ್ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರೇಮ್ ಕುಮಾರ್ ನಿನ್ನೆ ಎನ್ಡಿಎ ಒಕ್ಕೂಟ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ವಿರೋಧ ಪಕ್ಷಗಳ ಶಾಸಕರ ಸಂಖ್ಯಾಬಲ ಕಡಿಮೆ ಇರುವುದರಿಂದ ಯಾರನ್ನು ಕಣಕ್ಕಿಳಿಸಿರಲಿಲ್ಲ.
ವಿಜಯ್ ಕುಮಾರ್ ಸಿನ್ಹಾ ಮತ್ತು ನಂದಕಿಶೋರ್ ಯಾದವ್ ಬಳಿಕ ಬಿಜೆಪಿ ಕೋಟಾದಿಂದ ಸ್ಪೀಕರ್ ಆಗಿ ಆಯ್ಕೆಯಾದ ಮೂರನೇ ವ್ಯಕ್ತಿಯಾಗಿ ಪ್ರೇಮ್ ಕುಮಾರ್. ನೂತನ ಸಭಾಧ್ಯಕ್ಷರಿಗ ಆಯ್ಕೆಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಇಡೀ ಸದನದ ಪರವಾಗಿ ಪ್ರೇಮ್ ಕುಮಾರ್ ಜಿ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಸುದೀರ್ಘ ಅನುಭವವಿದ್ದು, ಸದನದ ಕಾರ್ಯಚಟುವಟಿಕೆಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ. ಇಡೀ ಸದನವು ಒಮ್ಮೆ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಪ್ರತಿಪಕ್ಷ ಸರ್ಕಾರದ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಸ್ಪೀಕರ್, ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ನಮ್ಮನ್ನು ಒಳಗೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಸದನದ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಸ್ಪೀಕರ್ ಪ್ರೇಮ್ ಕುಮಾರ್, ಎರಡು ಕಡೆಯವರ ಸಹಕಾರವನ್ನು ಎದುರು ನೋಡುತ್ತಿದ್ದೇನೆ ಎಂದರು. ಇಂದು ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡುವ ಮುನ್ನ, ವಿಧಾನಸಭೆಯ ಸುಗಮ ಕಾರ್ಯನಿರ್ವಹಣೆಗಾಗಿ ಉಪಸಭಾಧ್ಯಕ್ಷರ ಆಯ್ಕೆ ಅತ್ಯಗತ್ಯವಾಗಿದ್ದು, ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರೇಮ್ ಕುಮಾರ್ ಹಿನ್ನಲೆ...
ಸುಮಾರು 70 ವರ್ಷದ ಪ್ರೇಮ್ ಕುಮಾರ್, ಬಿಹಾರ ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಅತ್ಯಂತ ಹಿಂದುಳಿದ ಜಾತಿಗಳ (ಇಬಿಸಿ) ಸಮುದಾಯನ್ನು ಪ್ರತಿನಿಧಿಸುವ ಇವರು, ಸತತ ಒಂಬತ್ತನೇ ಬಾರಿಗೆ ಗಯಾ ಪಟ್ಟಣದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ಚುನಾವಣೆಯಲ್ಲಿ, ತಮ್ಮ ಪ್ರತಿಸ್ಫರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಖೌರಿ ಓಂಕಾರ್ ನಾಥ್ ಅವರನ್ನು 26,423 ಮತಗಳಿಂದ ಸೋಲಿಸಿದರು.
ಪ್ರೇಮ್ ಕುಮಾರ್ ಅವರು ಈ ಹಿಂದಿನ ಸರ್ಕಾರಗಳಲ್ಲಿ ಪರಿಸರ ಸಚಿವರಾಗಿ ಮತ್ತು ಸಹಕಾರಿ ಖಾತೆ ಸೇರಿದಂತೆ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2015 ರಿಂದ 2017 ರವರೆಗೆ ನಿತೀಶ್ ಕುಮಾರ್ ಅಂದಿನ ಮಹಾಘಟಬಂಧನ್ ಸರ್ಕಾರದ ನೇತೃತ್ವವಹಿಸಿಕೊಂಡು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದು, 1999 ರಲ್ಲಿ ಮಗಧ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ಸಹ ಪಡೆದಿದ್ದಾರೆ(ಏಜೆನ್ಸೀಸ್).