Fishermen Arrested | ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ 
ದೇಶ

Fishermen Arrested | ಗಡಿ ದಾಟಿದ್ದಕ್ಕೆ ಮೀನುಗಾರರ ಬಂಧನ..ಕೇಂದ್ರ ಸಚಿವರಿಗೆ ಪತ್ರ ಬರೆದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ ಸಿಎಂ ಸ್ಟಾಲಿನ್​

ಚೆನ್ನೈ: ಇಂದು (ಮಂಗಳವಾರ ಡಿ.23) ಧನುಷ್ಕೋಡಿ-ತಲೈಮನ್ನಾರ್ ಪ್ರದೇಶದ ಬಳಿ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿದ ಆರೋಪದ ಹಿನ್ನಲೆಯಲ್ಲಿ ಶ್ರೀಲಂಕಾ ನೌಕಾಪಡೆಯು, ತಮಿಳುನಾಡಿನ ರಾಮೇಶ್ವರಂನ 12 ಮೀನುಗಾರರನ್ನು ಬಂಧಿಸಿ, ಅವರ ದೋಣಿಯನ್ನು ವಶಪಡಿಸಿಕೊಂಡಿದೆ.
ಈ ಘಟನೆಯ ಕುರಿತಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್​​​ಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​, ಮೀನುಗಾರರನ್ನು ನಿರಂತರವಾಗಿ ಬಂಧಿಸುವುದರಿಂದ ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಳ್ಳುವುದರಿಂದ ಕರಾವಳಿ ಮೀನುಗಾರಿಕಾ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ, ಆದ್ದರಿಂದ ಆದಷ್ಟು ಬೇಗ ಜಂಟಿ ಕಾರ್ಯಪಡೆ ಮತ್ತು ಮೀನುಗಾರರ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸಿ, ಶಾಶ್ವತ ಮತ್ತು ಪರಸ್ಪರ ಒಪ್ಪುವಂತಹ ಪರಿಹಾರವನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ 2024 ರಲ್ಲಿ ಬಂಧಿಸಲ್ಪಟ್ಟ 18 ಮೀನುಗಾರರು ಸೇರಿದಂತೆ ತಮಿಳುನಾಡಿನ 248 ಮೀನುಗಾರಿಕಾ ದೋಣಿಗಳು ಮತ್ತು 62 ಮೀನುಗಾರರು ಶ್ರೀಲಂಕಾದ ವಶದಲ್ಲಿದ್ದಾರೆ ಎಂದು ಸ್ಟಾಲಿನ್ ಉಲ್ಲೇಖಿಸಿದ್ದು, ಬಂಧಿತ ಮೀನುಗಾರರು ಮತ್ತು ವಶಪಡಿಸಿಕೊಂಡ ದೋಣಿಗಳನ್ನು ತಕ್ಷಣವೇ ಬಿಡುಗಡೆ ಮಾಡಿ ಮುಂದೆ ಈ ರೀತಿಯ ಘಟನೆಗಳು ಶ್ರೀಲಂಕಾ ನೌಕಾಪಡೆಯಿಂದ ನಡೆಯದಂತೆ ನೋಡಿಕೊಳ್ಳಲು ಕೇಂದ್ರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಘಟನೆಯ ಹಿನ್ನಲೆ...

ಮೀನುಗಾರರು ಡಿಸೆಂಬರ್ 22 ರಂದು ರಾಮೇಶ್ವರಂ ಮೀನುಗಾರಿಕಾ ಬಂದರಿನಿಂದ ಸಮುದ್ರಕ್ಕೆ ಇಳಿದಾಗ ಶ್ರೀಲಂಕಾ ನೌಕಾಪಡೆಯಿಂದ ಸುತ್ತುವರೆದಿದ್ದರು. ಅವರನ್ನು ವಿಚಾರಣೆಗಾಗಿ ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ತಮಿಳುನಾಡು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಪ್ರಕಾರ, ಧನುಷ್ಕೋಡಿ ಮತ್ತು ತಲೈಮನ್ನಾರ್ ನಡುವಿನ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ತಡೆಹಿಡಿದು, ಮುಂದಿನ ಕಾನೂನು ಕ್ರಮಗಳಿಗಾಗಿ ಶ್ರೀಲಂಕಾದ ನೌಕಾ ಬಂದರಿಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.
ತಮಿಳುನಾಡು ಮೂಲದ ಮೀನುಗಾರರು ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಶ್ರೀಲಂಕಾದ ಅಧಿಕಾರಿಗಳು ಆರೋಪಿಸಿದ್ದು, ಪಾಕ್ ಜಲಸಂಧಿಯಲ್ಲಿನ ಮೀನುಗಾರಿಕಾ ವಲಯದ ಕಿರಿದಾದ ಮತ್ತು ವಿವಾದಾತ್ಮಕ ಸ್ವರೂಪವನ್ನು ಉಲ್ಲೇಖಿಸಿ ಭಾರತೀಯ ಮೀನುಗಾರರು ಇಂತಹ ಹಕ್ಕುಗಳನ್ನು ಪದೇ ಪದೇ ವಿರೋಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೂ ಮುಂಚಿತವಾಗಿ ಡಿಸೆಂಬರ್ 22 ರಂದು ರಾಮೇಶ್ವರಂ ಮೀನುಗಾರಿಕಾ ಜೆಟ್ಟಿಯಿಂದ ಸುಮಾರು 450 ಮೀನುಗಾರಿಕೆ ಟೋಕನ್‌ಗಳನ್ನು ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಇದು ಈ ಪ್ರದೇಶದಲ್ಲಿ ಮೀನುಗಾರಿಕೆ ಚಟುವಟಿಕೆ ಹೆಚ್ಚಾಗಿದೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದೆ.
ವಶಪಡಿಸಿಕೊಂಡ ಟ್ರಾಲರ್ ದೋಣಿ ತಂಗಚಿಮಾಡಂನ ಮಾಂಥೋಪ್ಪುವಿನ ಜೋತಿಬಾಸ್‌ಗೆ ಸೇರಿದ್ದು ಎನ್ನಲಾಗಿದ್ದು, ಬಂಧಿತ ಮೀನುಗಾರರಲ್ಲಿ ಪ್ರಭಾತ್ (28), ಜೇಮ್ಸ್ ಹೈಟನ್ (29) ಮತ್ತು ಆಂಟನಿ (32) ಸೇರಿದ್ದಾರೆ, ಇವರೆಲ್ಲರೂ ಕುಟುಂಬಗಳಿಗೆ ಜೀವನಾಧಾರವಾಗಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್).