ಚೆನ್ನೈ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ (Delimitation Bill) ಕುರಿತಾದ ರಾಜಕೀಯ ಚರ್ಚೆ ಭಾನುವಾರ ಮತ್ತಷ್ಟು ಜೋರಾಗಿದ್ದು, ಚೆನ್ನೈನಲ್ಲಿ ನಡೆಯಲಿರುವ ಮಹತ್ವದ ಭೇಟಿಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಮಸೂದೆಯನ್ನು ವಿರೋಧಿಸುವಂತೆ ಮನವಿ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟದ ಹಿರಿಯ ನಾಯಕರು ಚೆನ್ನೈಗೆ ತೆರಳಿ ಸ್ಟಾಲಿನ್ ಅವರನ್ನು ಭೇಟಿಯಾಗಲಿದ್ದು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ವಿರೋಧಿಸುವಂತೆ ಡಿಎಂಕೆಗೆ ಮನವಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಲೋಕಸಭೆಯ ಸ್ಥಾನಗಳನ್ನು 850ಕ್ಕೆ ವಿಸ್ತರಿಸುವ ಪ್ರಸ್ತಾವನೆಯು ಭಾರತದ ಪ್ರಜಾಪ್ರಭುತ್ವವನ್ನು ಮುಗಿಸಲಿದೆ ಮತ್ತು ಬಿಜೆಪಿ-ಆರ್ಎಸ್ಎಸ್ಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಇಡೀ ದೇಶದ ಚುನಾವಣಾ ನಕ್ಷೆಯನ್ನು ಮರುರೂಪಿಸಲು ಅವಕಾಶ ನೀಡುತ್ತದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಟಾಲಿನ್ ಅವರ ನಿಲುವನ್ನು ಶ್ಲಾಘಿಸಿದ ರಾಹುಲ್, ಅವರು ಯಾವಾಗಲೂ ತಮಿಳು ವಿರೋಧಿ ಶಕ್ತಿಗಳ ವಿರುದ್ಧ ದೃಢವಾಗಿ ನಿಂತಿದ್ದಾರೆ ಎಂದಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ, ತಮಿಳುನಾಡಿನ ಹಿತಾಸಕ್ತಿ ಮತ್ತು ಸಂವಿಧಾನವನ್ನು ರಕ್ಷಿಸಲು ಒಟ್ಟಾಗಿ ಈ ಮಸೂದೆಗಳನ್ನು ಸೋಲಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕನ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸ್ಟಾಲಿನ್, ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಸಹೋದರ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಎಂದಿದ್ದಾರೆ. ಡಿಎಂಕೆ ಯಾವಾಗಲೂ ತಮಿಳುನಾಡು ಮತ್ತು ಅಲ್ಲಿನ ಜನರ ಹಿತಾಸಕ್ತಿಗಳನ್ನು ಮೊದಲ ಆದ್ಯತೆಯಾಗಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದಿರುವ ಅವರು, ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸುತ್ತಾ, ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಲ್ಲಿ ತಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಹಕ್ಕುಗಳನ್ನು ರಕ್ಷಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆಯೇ ಹೊರತು, ರಾಜ್ಯಕ್ಕೆ ದ್ರೋಹ ಬಗೆಯಲು ಅಲ್ಲ. ಮುಂದಿನ ದಿನಗಳಲ್ಲಿ ಜನರು ನಮ್ಮನ್ನು ತಮಿಳುನಾಡಿನ ರಕ್ಷಕರು ((ವೀರಪಾಂಡ್ಯ ಕಟ್ಟಬೊಮ್ಮನ್) ಎಂದು ಗುರುತಿಸುತ್ತಾರೆಯೇ ಹೊರತು ಮೋಸಗಾರರಾಗಿ (ಎಟ್ಟಪ್ಪನ್) ಅಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ವಿಷಯದಲ್ಲಿ ಡಿಎಂಕೆ ನಾಯಕತ್ವವನ್ನು ಸಂಪರ್ಕಿಸಲು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಪ್ರಸ್ತಾವಿತ ಮಸೂದೆಯ ಕುರಿತು ವಿರೋಧ ಪಕ್ಷಗಳ ನಿಲುವನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಮುಂಬೈನಲ್ಲಿ ಶರದ್ ಪವಾರ್ ಅವರನ್ನೂ ಭೇಟಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇದಕ್ಕೂ ಮುನ್ನ ಮಾತನಾಡಿದ್ದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಕ್ಷೇತ್ರ ಪುನರ್ವಿಂಗಡಣೆ ವಿಷಯದಲ್ಲಿ ಪಕ್ಷವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ರಾಜ್ಯದ ಹಕ್ಕುಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಿಯೋಗದ ಭೇಟಿಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಬರುತ್ತಿದ್ದಾರೆಯೇ? ಬರಲಿ, ಬಂದು ಭೇಟಿಯಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಮಸೂದೆಗೆ ನೀಡಿರುವ ಬೆಂಬಲವನ್ನು ಡಿಎಂಕೆ ಮರುಪರಿಶೀಲಿಸುತ್ತದೆಯೇ ಎಂಬ ಪ್ರಶ್ನೆಗೆ, ಅಂತಿಮ ನಿರ್ಧಾರವನ್ನು ಎಂ ಕೆ ಸ್ಟಾಲಿನ್ ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಉದಯನಿಧಿ ತಿಳಿಸಿದ್ದಾರೆ. ಕನಿಮೊಳಿ, ಎ. ರಾಜಾ ಮತ್ತು ತಂಗಂ ತೆನ್ನರಸು ಸೇರಿದಂತೆ ಪಕ್ಷದ ಹಿರಿಯ ನಾಯಕರು ಈಗಾಗಲೇ ಡಿಎಂಕೆಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಉಲ್ಲೇಖಿಸಿದ ಅವರು, ದೇಶದಲ್ಲಿ ಈ ವಿಷಯವನ್ನು ಮೊದಲು ಎತ್ತಿದ್ದೇ ಡಿಎಂಕೆ ಮತ್ತು ತಮ್ಮ ನಾಯಕ ಎಂದು ಹೇಳಿದ್ದಾರೆ(ಏಜೆನ್ಸೀಸ್).