ನಾನು ಜನರ ಹೃದಯದಲ್ಲಿದ್ದೇನೆ ಎಂದ ಎಂ.ಕೆ. ಸ್ಟಾಲಿನ್; ನಿಮ್ಮ ತಂದೆ ಎಲ್ಲಿದ್ದಾರೆ ಎಂದ ಸಿಎಂ ವಿಜಯ್‌ಗೆ ಡಿಎಂಕೆ ಕೌಂಟರ್! 
ದೇಶ

ನಾನು ಜನರ ಹೃದಯದಲ್ಲಿದ್ದೇನೆ ಎಂದ ಎಂ.ಕೆ. ಸ್ಟಾಲಿನ್; ನಿಮ್ಮ ತಂದೆ ಎಲ್ಲಿದ್ದಾರೆ ಎಂದ ಸಿಎಂ ವಿಜಯ್‌ಗೆ ಡಿಎಂಕೆ ಕೌಂಟರ್! MK Stalin

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ನಡೆದ ನಿಮ್ಮ ತಂದೆ ಎಲ್ಲಿದ್ದಾರೆ ಎಂಬ ವಾಕ್ಸಮರ ಈಗ ತಮಿಳುನಾಡು ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಸಿಎಂ ವಿಜಯ್ ಅವರ ಈ ವ್ಯಂಗ್ಯಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್(MK Stalin), ನಾನು ವಿಧಾನಸಭೆಯಲ್ಲಿ ಇಲ್ಲದಿರಬಹುದು, ಆದರೆ ಜನರ ಹೃದಯದಲ್ಲಿದ್ದೇನೆ ಎಂದು ಹೇಳಿದ್ದಾರೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಕೆ. ಸ್ಟಾಲಿನ್ ಅವರು ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದ ಅಭ್ಯರ್ಥಿ ಎದುರು ಅನಿರೀಕ್ಷಿತ ಸೋಲು ಕಂಡಿದ್ದರು. ಹೀಗಾಗಿ ಅವರು ಸದ್ಯ ವಿಧಾನಸಭೆಯ ಹೊರಗಿದ್ದಾರೆ. ಅವರ ಪುತ್ರ ಉದಯನಿಧಿ ಸ್ಟಾಲಿನ್ ಸದನದಲ್ಲಿ ವಿಪಕ್ಷದ ನಾಯಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಸಿಎಂ ವಿಜಯ್ ಆಡಿರುವ ಮಾತುಗಳು ಈಗ ತಮಿಳುನಾಡಿನಲ್ಲಿ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿವೆ.

"ಜನರು ಹುಡುಕಿದ ಕಡೆಯಲ್ಲೆಲ್ಲಾ ನಾನಿರುತ್ತೇನೆ" - ಸ್ಟಾಲಿನ್ ತಿರುಗೇಟು

ಸಿಎಂ ವಿಜಯ್ ಅವರ ಲೇವಡಿಗೆ ಪ್ರತಿಕ್ರಿಯಿಸಿರುವ ಎಂ.ಕೆ. ಸ್ಟಾಲಿನ್, ನಾನು ಶಾಸಕಾಂಗ ಸಭೆಯಲ್ಲಿ ಇಲ್ಲದೇ ಇರಬಹುದು. ಆದರೆ ನಾನು ಸದಾ ತಮಿಳುನಾಡು ಜನರ ಹೃದಯದಲ್ಲಿ ನೆಲೆಸಿದ್ದೇನೆ. ಜನರು ನನ್ನನ್ನು ಎಲ್ಲೇ ಹುಡುಕಿದರೂ, ಅವರ ಕಷ್ಟದ ಸಮಯದಲ್ಲಿ ನಾನು ಅವರ ಜೊತೆಯಲ್ಲೇ ಇರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ, ಸಿಎಂ ವಿಜಯ್ ಅವರ ಹೇಳಿಕೆಗೆ ಕೌಂಟರ್ ನೀಡಿರುವ ಡಿಎಂಕೆ ಹಿರಿಯ ನಾಯಕ ಮತ್ತು ಶಾಸಕ ಕೆ.ಎನ್. ನೆಹರೂ, ಎಂ.ಕೆ. ಸ್ಟಾಲಿನ್ ಅವರು ಶೀಘ್ರದಲ್ಲೇ ಉಪಚುನಾವಣೆ ಮೂಲಕ ಅತ್ಯಂತ ಭರ್ಜರಿಯಾಗಿ ವಿಧಾನಸಭೆಗೆ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಡಿಎಂಕೆ ಕಾರ್ಯಕರ್ತರು ಇದುವರೆಗೆ ಸುಮ್ಮನಿದ್ದಿರಬಹುದು, ಆದರೆ ಮಾಜಿ ಮುಖ್ಯಮಂತ್ರಿಗಳು ಮತ್ತೆ ಸದನ ಪ್ರವೇಶಿಸಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದು ನೆಹರೂ ಹೇಳಿರುವುದು ಡಿಎಂಕೆ ಮುಂದಿನ ರಾಜಕೀಯ ತಂತ್ರದ ಮುನ್ಸೂಚನೆಯಾಗಿದೆ.

ವೈಯಕ್ತಿಕ ಮಟ್ಟಕ್ಕೆ ಇಳಿದ 'ಟ್ವಿಟರ್' ವಾಗ್ದಾಳಿ: ಮೈತ್ರಿಕೂಟದಲ್ಲೇ ಆಕ್ಷೇಪ

ವಿಧಾನಸಭೆಯಲ್ಲಿ ಕಥೆಯೊಂದನ್ನು ಹೇಳುವ ನೆಪದಲ್ಲಿ ಸಿಎಂ ವಿಜಯ್, ನಿಮ್ಮ ತಂದೆ ಎಲ್ಲಿದ್ದಾರೆ ಎಂದು ಉದಯನಿಧಿ ಸ್ಟಾಲಿನ್‌ರನ್ನು ಕೆಣಕಿದ್ದರು. ಇದಕ್ಕೆ ಪ್ರತಿಯಾಗಿ ಉದಯನಿಧಿ ಸ್ಟಾಲಿನ್ ಅವರು ತಮ್ಮ Xನಲ್ಲಿ, ಪತ್ನಿಯೊಬ್ಬಳು ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ತನ್ನ ಗಂಡನನ್ನು ಹುಡುಕುತ್ತಿದ್ದಾಳೆ ಎಂಬ ಅರ್ಥದ ಪೋಸ್ಟ್ ಹಾಕಿದ್ದರು. ಇದು ಸಿಎಂ ವಿಜಯ್ ಅವರ ವೈಯಕ್ತಿಕ ಜೀವನ ಹಾಗೂ ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಅರ್ಜಿಯ ವದಂತಿಗಳನ್ನು ಉಲ್ಲೇಖಿಸಿ ನೀಡಿದ ಪರೋಕ್ಷ ಕೌಂಟರ್ ಎನ್ನಲಾಗುತ್ತಿದೆ. ಉಭಯ ನಾಯಕರ ಈ ವೈಯಕ್ತಿಕ ನಿಂದನೆಯ ರಾಜಕಾರಣಕ್ಕೆ ರಾಜಕೀಯ ವಿಶ್ಲೇಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಸಿಎಂ ವಿಜಯ್ ಅವರ ಮೈತ್ರಿಕೂಟದ ಪಾಲುದಾರ ಪಕ್ಷವಾದ VCK ಮುಖ್ಯಸ್ಥ ತೋಲ್ ತಿರುಮಾವಲವನ್ ಅವರೂ ಸಿಎಂ ಹೇಳಿಕೆಗೆ ಆಕ್ಷೇಪ ಎತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಇಂತಹ ವೈಯಕ್ತಿಕ ನಿಂದನೆಗಳನ್ನು ಮಾಡುವುದು ಸದನದ ಘನತೆಗೆ ತಕ್ಕುದಲ್ಲ. ವಿಜಯ್ ಅವರು ಇಂತಹ ಹೇಳಿಕೆಗಳಿಂದ ದೂರ ಇರಬೇಕಿತ್ತು ಎಂದು ಕಿವಿಮಾತು ಹೇಳಿದ್ದಾರೆ.

ಬೈ-ಎಲೆಕ್ಷನ್ ಕಣ ರಂಗು: ಸ್ಟಾಲಿನ್ ಮರುಪ್ರವೇಶಕ್ಕೆ ವೇದಿಕೆ?

ತಮಿಳುನಾಡಿನಲ್ಲಿ ಸದ್ಯ ಆರು (6) ವಿಧಾನಸಭಾ ಕ್ಷೇತ್ರಗಳು ಖಾಲಿಯಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಉಪಚುನಾವಣೆ ನಡೆಯಲಿದೆ. ಸಿಎಂ ವಿಜಯ್ ತಾವು ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಂಡು, ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಎಐಎಡಿಎಂಕೆ ಪಕ್ಷದ 5 ಜನ ಶಾಸಕರು ರಾಜೀನಾಮೆ ನೀಡಿದ್ದು, ಅವರಲ್ಲಿ ನಾಲ್ವರು ಈಗಾಗಲೇ ವಿಜಯ್ ಅವರ ಟಿವಿಕೆ ಪಕ್ಷವನ್ನು ಸೇರಿದ್ದಾರೆ.
ಈ ಮುಂಬರುವ ಉಪಚುನಾವಣೆಗಳು ವಿಜಯ್ ಸರ್ಕಾರದ ಮೊದಲ ಜನಪ್ರಿಯತೆಯ ಪರೀಕ್ಷೆಯಾಗಲಿವೆ. ಇದೇ ಸಂದರ್ಭವನ್ನು ಬಳಸಿಕೊಂಡು ಎಂ.ಕೆ. ಸ್ಟಾಲಿನ್ ಅವರನ್ನು ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಸಿ, ಮತ್ತೆ ವಿಧಾನಸಭೆಗೆ ಕರೆತರಲು ಡಿಎಂಕೆ ತೆರೆಮರೆಯಲ್ಲಿ ಭಾರಿ ಸ್ಕೆಚ್ ಹಾಕುತ್ತಿದೆ. ಸ್ಟಾಲಿನ್ ಸ್ಪರ್ಧೆಯ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳದಿದ್ದರೂ, ತಮಿಳುನಾಡು ರಾಜಕೀಯ ಸದ್ಯ ತೀವ್ರ ಕುತೂಹಲ ಕೆರಳಿಸಿದೆ,(ಏಜೆನ್ಸೀಸ್​).