ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕೈ ಸನ್ನೆ (Hand Gesture) ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರಿಂದ ಆರಂಭವಾಗಿ ಸಿಎಂ ವಿಜಯ್ ಅನುಸರಿಸಿದ ಆ ಸನ್ನೆಯನ್ನು, ಈಗ ಡಿಎಂಕೆ ಪಕ್ಷವು ಆರ್ಎಸ್ಎಸ್ನ ಧ್ವಜ ಪ್ರಣಾಮ ಭಂಗಿಗೆ ಹೋಲಿಸುವ ಮೂಲಕ ವಿಜಯ್ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ.
ಕಳೆದ ಮಾರ್ಚ್ನಲ್ಲಿ, ಆಗಿನ ಮುಖ್ಯಮಂತ್ರಿಯಾಗಿದ್ದ ಸ್ಟಾಲಿನ್ ಅವರು ಚೆನ್ನೈನ ಡಿಎಂಕೆ ಪ್ರಧಾನ ಕಚೇರಿಯಿಂದ ಹೊರಬಂದು ತಮ್ಮ ಕಾರಿಗೆ ಹತ್ತುತ್ತಿದ್ದಾಗ, ಸೀಟು ಹಂಚಿಕೆ ಮಾತುಕತೆ ಮುಗಿದಿದೆಯೇ ಎಂದು ವರದಿಗಾರರು ಕೇಳಿದರು. ಸ್ಟಾಲಿನ್ ತಮ್ಮ ಕೈಯನ್ನು ಎತ್ತಿ ಸನ್ನೆ ಮಾಡಿ, ವಿಷಯ ಇತ್ಯರ್ಥವಾಗಿದೆ ಮತ್ತು ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ ಎಂದು ಸೂಚಿಸಿದರು.
ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಇದಾದ ಬಳಿಕ ಜೂನ್ನಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಸದನದಿಂದ ಹೊರನಡೆದಿದ್ದ ಡಿಎಂಕೆ ಸದಸ್ಯರನ್ನು ಉದ್ದೇಶಿಸಿ ಕೈ ಸನ್ನೆಯನ್ನು ಮಾಡಿ ತೋರಿಸಲು ಸಭಾಪತಿ ಜೆ.ಸಿ.ಡಿ. ಪ್ರಭಾಕರ್ ಅವರ ಬಳಿ ಅನುಮತಿ ಕೇಳಿದರು. ಇದಾದ ಬಳಿಕ ವಿಜಯ್ ಸ್ಟಾಲಿನ್ರ ಈ ಹಿಂದೆ ವೈರಲ್ ಆಗಿದ್ದ ಅದೇ ಕೈ ಸನ್ನೆಯನ್ನು ಅಲ್ಲಿ ಮಾಡಿ ತೋರಿಸಿದರು. ಈ ಘಟನೆಯು ಕ್ಷಣಮಾತ್ರದಲ್ಲಿ ಎಲ್ಲೆಡೆ ವೈರಲ್ ಆಯಿತು. ಆಡಳಿತ ಪಕ್ಷದವರು ಇದನ್ನು ಮೆಚ್ಚಿ ಸಂಭ್ರಮಿಸಿದರು.
ಇದರಲ್ಲಿನ ಒಂದು ವಿಪರ್ಯಾಸವೆಂದರೆ ಈ ಹಿಂದೆ ಸ್ಟಾಲಿನ್ ಈ ರೀತಿ ಕೈ ಸನ್ನೆ ಮಾಡಿದಾಗ, ಅಂದು ವಿರೋಧ ಪಕ್ಷದಲ್ಲಿದ್ದ ಎಐಎಡಿಎಂಕೆ ನಾಯಕರು ಇದನ್ನು ಅರ್ಥಹೀನ ಎಂದು ಟೀಕಿಸಿದ್ದರು. ಆದರೆ ಈಗ ಅದೇ ಸನ್ನೆಯನ್ನು ವಿಜಯ್ ಮಾಡಿದಾಗ, ಡಿಎಂಕೆ ಪಕ್ಷದವರೇ ವಿಜಯ್ ಅವರನ್ನು ಟೀಕಿಸುತ್ತಿದ್ದಾರೆ.
ಡಿಎಂಕೆಯ ಸಾಮಾಜಿಕ ಜಾಲತಾಣ ಈಗ ಈ ಸನ್ನೆಯ ವಿವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಇದನ್ನು ಆರ್ಎಸ್ಎಸ್ನ ಧ್ವಜ ಪ್ರಣಾಮ ಎಂದು ಆರೋಪಿಸಿದೆ. ಡಿಎಂಕೆ ಪೇಜ್ನಲ್ಲಿ ಇಬ್ಬರು ವ್ಯಕ್ತಿಗಳ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿನ ಒಬ್ಬ ವ್ಯಕ್ತಿ ಧ್ವಜ ಪ್ರಣಾಮ ಸಲ್ಲಿಸುತ್ತಿರುವ ಆರ್ಎಸ್ಎಸ್ ಕಾರ್ಯಕರ್ತನನ್ನು ಹೋಲುತ್ತದೆ, ಮತ್ತು ಇನ್ನೊಂದು ವಿಜಯ್ ತಮ್ಮ ಸನ್ನೆ ಮಾಡುತ್ತಿರುವುದನ್ನು ಹೋಲುತ್ತದೆ.
ಧ್ವಜ ಪ್ರಣಾಮ ಎಂದರೆ ನೇರವಾಗಿ ನಿಂತು, ಬಲಗೈಯನ್ನು ಎದೆಯ ಮಧ್ಯಭಾಗದಲ್ಲಿ ಅಂಗೈ ಕೆಳಮುಖವಾಗಿರುವಂತೆ ಇರಿಸಿ, ತಲೆಯನ್ನು ಸ್ವಲ್ಪ ಬಾಗಿಸುವುದಾಗಿದೆ. ಶಾಖಾ ಅಥವಾ ಸ್ಥಳೀಯ ಆರ್ಎಸ್ಎಸ್ ಸಭೆಯು ಸಾಮಾನ್ಯವಾಗಿ ಈ ನಮನದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಮುಕ್ತಾಯಗೊಳ್ಳುತ್ತದೆ.
ಡಿಎಂಕೆ ಪಕ್ಷದವರು ವಿಜಯ್ರನ್ನು ಆರ್ಎಸ್ಎಸ್ನ ದತ್ತು ಮಗು ಎಂದು ಕರೆದಿದ್ದಾರೆ. ಟಿವಿಕೆ ಬೆಂಬಲಿಗರು ವಿಜಯ್ರ ಈ ಸನ್ನೆಯನ್ನು ಖುಷಿಯಿಂದ ಸ್ವೀಕರಿಸಿದ್ದು, ಇದು ಈಗ ಅವರ ಪಕ್ಷದ ಕಾರ್ಯಕ್ರಮಗಳಲ್ಲಿ ಒಂದು ಖಾಯಂ ಭಾಗವಾಗಿಬಿಟ್ಟಿದೆ. ಈ ಸನ್ನೆಯ ಜನಪ್ರಿಯತೆ ಕೇವಲ ರಾಜಕೀಯ ಸಭೆಗಳಿಗಷ್ಟೇ ಸೀಮಿತವಾಗಿಲ್ಲ, ಅದನ್ನ ಮೀರಿ ಬೆಳೆದಿದೆ. ಇತ್ತೀಚೆಗೆ ತಮಿಳುನಾಡು ಸಚಿವ ಅರುಣ್ ರಾಜ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿರುವ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ವಿಜಯ್ ಅವರ ಆ ಸನ್ನೆಯನ್ನು ಅನುಕರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಯಾವುದೋ ಒಂದು ಒಪ್ಪಂದ ಮುಗಿಯಿತು ಎಂದು ತೋರಿಸಲು ಶುರುವಾದ ಈ ಸನ್ನೆ, ಆ ಬಳಿಕ ತನ್ನದೇ ಆದ ಸ್ವಂತ ಹಾದಿಯನ್ನು ಹಿಡಿದುಕೊಂಡಿದ್ದು, ವಿಧಾನಸಭೆಯಲ್ಲಿ ಕಿಡಿಹೊತ್ತಿಸುತ್ತಾ, ಈಗ ವಿಜಯ್ ಬೆಂಬಲಿಗರ ಖಾಯಂ ಸ್ಟೈಲ್ ಆಗಿ ಪರಿವರ್ತನೆಯಾಗಿದೆ(ಏಜೆನ್ಸೀಸ್).