ಎಂ.ಕೆ.ಸ್ಟಾಲಿನ್ ಮತ್ತು ಸಿಎಂ ವಿಜಯ್  
ದೇಶ

ಅಧಿಕಾರದಲ್ಲಿ ಉಳಿಯಲು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ: ಸಿಎಂ ವಿಜಯ್ ವಿರುದ್ಧ ಎಂ.ಕೆ.ಸ್ಟಾಲಿನ್ ವಾಗ್ದಾಳಿ | M K Stalin

ಚೆನ್ನೈ: ಎಐಎಡಿಎಂಕೆ ಪಕ್ಷದ ಹಾಲಿ ನಾಲ್ವರು ಶಾಸಕರು ರಾಜೀನಾಮೆ ನೀಡಿ ಟಿವಿಕೆ ಸೇರ್ಪಡೆಯಾಗುವುದನ್ನು ಟೀಕಿಸಿರುವ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್(M K Stalin), ಅಧಿಕಾರದಲ್ಲಿ ಉಳಿಯಲು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ಸಿಎಂ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಹಾಕಿರುವ ಅವರು, ಟಿವಿಕೆ ಮೊದಲು ಡಿಎಂಕೆ ಮಿತ್ರಪಕ್ಷಗಳಿಂದ ಬೆಂಬಲ ಕೋರಿತು. ಬಳಿಕ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಎಐಎಡಿಎಂಕೆ ಶಾಸಕರ ಒಂದು ಭಾಗದೊಂದಿಗೆ ಚೌಕಾಶಿ ಮಾಡಿತು. ಈಗ ಅದೇ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷ ಸೇರ್ಪಡೆಗೆ ಅನುಕೂಲ ಮಾಡಿಕೊಡ್ತಿದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಟೀಕಿಸಿರುವ ಸ್ಟಾಲಿನ್, ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಲುವಾಗಿ ಟಿವಿಕೆ ಬೆಂಬಲ ನೀಡಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಅದರ ಸಂಪುಟದ ಭಾಗವಾಗಿದೆ. ಇದು ಕಾಂಗ್ರೆಸ್​ನ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಜರಿದಿದ್ದರು.

ಆರೋಪ ನಿರಾಕರಿಸಿದ ಟಿವಿಕೆ

ಇನ್ನೂ ಕುದುರೆ ವ್ಯಾಪಾರದ ಆರೋಪವನ್ನು ತಿರಸ್ಕರಿಸಿರುವ ಸಚಿವ ಆರ್. ನಿರ್ಮಲ್‌ಕುಮಾರ್, ಎಐಎಡಿಎಂಕೆ ಶಾಸಕರು ತಮ್ಮ ಪಕ್ಷದ ನಾಯಕತ್ವದ ಮೇಲಿನ ಭರವಸೆಯನ್ನು ಕಳೆದುಕೊಂಡ ಕಾರಣ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಟಿವಿಕೆ ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ಈಗಲೂ ಚುನಾವಣೆ ನಡೆದರೆ, ಟಿವಿಕೆ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).