Vinosha Ravi | ವಿಡಿಯೋ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮಲೇಷ್ಯಾ ಯುವತಿ!
ಮಲೇಷ್ಯಾ ಮೂಲದ ಯುವತಿ ವಿನೋಷಾ ರವಿ (Vinosha Ravi) ಅವರ ವೈಯಕ್ತಿಕ ದಿನನಿತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ರಾಜಕೀಯ ಸಮರಕ್ಕೆ ಕಾರಣವಾಗಿದೆ.
ಕಪ್ಪು ಬಣ್ಣದ ಉಡುಪಿನಲ್ಲಿದ್ದ ಈ ಯುವತಿಯ ವಿಡಿಯೋವನ್ನು ಹಂಚಿಕೊಂಡಿದ್ದ ನೆಟ್ಟಿಗರು, ಆಕೆಯನ್ನು ತಮಿಳುನಾಡಿನ ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಎಂದು ತಪ್ಪಾಗಿ ಬಿಂಬಿಸಿದ್ದರು. ಈ ಆಧಾರರಹಿತ ಸುಳ್ಳು ಪ್ರಚಾರ ಮತ್ತು ಜಾಲತಾಣಗಳ ಟ್ರೋಲಿಂಗ್‌ನಿಂದಾಗಿ ತಮ್ಮ ವೈಯಕ್ತಿಕ ಜೀವನವೇ ತಲೆಕೆಳಗಾಗಿದೆ ಎಂದು ನೊಂದ ಯುವತಿ ವಿನೋಷಾ ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಷಯ ವಿವಾದಕ್ಕೆ ತಿರುಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಸಚಿವೆ ಎಸ್. ಕೀರ್ತನಾ, ವಿಡಿಯೋದಲ್ಲಿರುವ ಮಹಿಳೆ ತಾನಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮನ್ನ ಹೋಲುವ ಕಾರಣಕ್ಕಾಗಿಯೇ ವಿವಾದಕ್ಕೆ ಸಿಲುಕಬೇಕಾಗಿ ಬಂದ ವಿನೋಷಾ ರವಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ತಮ್ಮ ಟೀಕಾಕಾರರು ಮತ್ತು ಟ್ರೋಲಿಗರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ಕೀರ್ತನಾ, ಉಡುಪನ್ನು ಆಧರಿಸಿ ಮಹಿಳೆಯರನ್ನು ನಿರ್ಣಯಿಸುವುದು ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ. ಒಂದು ವೇಳೆ ಅದು ನಾನೇ ಆಗಿದ್ದರೂ ಅದರಲ್ಲಿ ತಪ್ಪೇನಿದೆ, ಅದು ಯಾಕೆ ವಿಷಯವಾಗಬೇಕು..? ಎಂದು ಪ್ರಶ್ನಿಸಿದ್ದಾರೆ.
ಟ್ರೊಲ್ ನನ್ನನ್ನು ಖಿನ್ನತೆಗೆ ತಳ್ಳಿದವು!
ಈ ವಿವಾದದ ನಂತರ ಆ ಶಾರ್ಟ್ ಡ್ರೆಸ್ ತೊಟ್ಟಿದ್ದ ವಿನೋಷಾ ರವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಆರಂಭವಾಯಿತು. ಈ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿದ ಮಲೇಷ್ಯಾದಲ್ಲಿ ನೆಲೆಸಿರುವ ವಿನೋಷಾ, ಮೊದಲಿಗೆ ಸಹೋದ್ಯೋಗಿಯೊಬ್ಬರು ಈ ವಿಡಿಯೋ ತೋರಿಸಿದಾಗ ನಾನಿದನ್ನು ತಮಾಷೆಯಾಗಿ ತೆಗೆದುಕೊಂಡಿದ್ದೆ. ಆದರೆ ದಿನಕಳೆದಂತೆ ಪರಿಸ್ಥಿತಿ ತೀವ್ರಗೊಂಡು ನನ್ನನ್ನು ಆತಂಕಕ್ಕೆ ದೂಡಿತು. ಆನ್‌ಲೈನ್‌ನಲ್ಲಿ ಬಂದ ಅನೇಕ ಕಮೆಂಟ್‌ಗಳು ಅತ್ಯಂತ ಅಸಭ್ಯ ಹಾಗೂ ಅಶ್ಲೀಲವಾಗಿದ್ದು, ನನ್ನನ್ನು ಖಿನ್ನತೆಗೆ ತಳ್ಳಿದವು ಎಂದು ನೋವು ತೋಡಿಕೊಂಡಿದ್ದಾರೆ.
ತಮ್ಮ ಮೇಲಿನ ಈ ಆರೋಪಗಳ ಕುರಿತು ಮಾತನಾಡಿದ ವಿನೋಷಾ, ಮಹಿಳೆಯರ ಉಡುಪನ್ನು ನೋಡಿ ಅವರನ್ನು ಅಳೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಜನರು ಯಾವುದೇ ಆಲೋಚನೆ ಇಲ್ಲದೆ ಕೇವಲ ವೀವ್ಸ್ ಮತ್ತು ಲೈಕ್ಸ್‌ಗಳಿಗಾಗಿ ಪೋಸ್ಟ್ ಮಾಡುತ್ತಾರೆ. ಎದುರಿಗಿರುವ ವ್ಯಕ್ತಿಯ ಜೀವನದ ಮೇಲೆ ಇದು ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಯೋಚಿಸುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್‌ನಲ್ಲಿ ಬೆದರಿಕೆ ಹಾಗೂ ಅಸಭ್ಯ ಮೆಸೇಜ್‌ಗಳು ಬಂದ ಹಿನ್ನೆಲೆಯಲ್ಲಿ ವಿನೋಷಾ ರವಿ ಮಲೇಷ್ಯಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಆನ್‌ಲೈನ್ ದಾಳಿಯಿಂದ ಆಘಾತಗೊಂಡಿದ್ದರೂ ತಾವು ಸೋಲೊಪ್ಪಿಕೊಳ್ಳುವುದಿಲ್ಲ ಎಂದಿರುವ ವಿನೋಷಾ, ಯಾರೋ ಆನ್‌ಲೈನ್‌ನಲ್ಲಿ ದಾಳಿ ನಡೆಸಿದರೆಂದು ತಮ್ಮ ಉಡುಪಿನ ಶೈಲಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಮಹಿಳೆಯರ ಉಡುಪಿನ ಬಗ್ಗೆ ತೀರ್ಪು ನೀಡುವ ಅಥವಾ ಉಪದೇಶ ನೀಡುವ ಹಕ್ಕು ಯಾರಿಗೂ ಇಲ್ಲ, ಹೇಗೆ ಉಡುಪು ಧರಿಸಬೇಕು ಎಂಬುದು ತಮಗೆ ತಿಳಿದಿದೆ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್).