ಪಂಜಾಬ್: ಇದು ಸಿನಿಮಾದ ಕಥೆಯಲ್ಲ, ಪಂಜಾಬ್‌ನ ಕಪೂರ್ತಲಾದಲ್ಲಿ ನಡೆದ ನೈಜ ಘಟನೆ. ಸತ್ತೇ ಹೋಗಿದ್ದಾನೆ ಎಂದು ಭಾವಿಸಿ ಮನೆಯವರೆಲ್ಲ ಸೇರಿ(Punjab Family Twist) ಯಾವ ವ್ಯಕ್ತಿಯ ಅಂತ್ಯಸಂಸ್ಕಾರದ ವಿಧಿವಿಧಾನ ಮುಗಿಸಿದ್ದರೋ, ಅದೇ ವ್ಯಕ್ತಿ ಬರೊಬ್ಬರಿ 25 ವರ್ಷಗಳ ನಂತರ ಮನೆಗೆ ಮರಳಿ ಬಂದಿದ್ದಾನೆ. ಆದರೆ, ಆತನ ಆಗಮನ ಸಂತೋಷಕ್ಕಿಂತ ಹೆಚ್ಚಾಗಿ ಇಡೀ ಕುಟುಂಬವನ್ನು ಧರ್ಮಸಂಕಟಕ್ಕೆ ದೂಡಿದೆ. ಕಾರಣ, ಆತ ಇಲ್ಲದ ಸಮಯದಲ್ಲಿ ಆತನ ಪತ್ನಿ ಈಗ ಆತನ ಸ್ವಂತ ತಮ್ಮನ ಹೆಂಡತಿಯಾಗಿದ್ದಾಳೆ!
ಏನಿದು ಘಟನೆ?
ಕಪೂರ್ತಲಾ ಜಿಲ್ಲೆಯ ಹಂಸಾ ಸಿಂಗ್ ಎಂಬ ವ್ಯಕ್ತಿ 25 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮೂರು ವರ್ಷಗಳ ಕಾಲ ಕಾದ ಕುಟುಂಬಸ್ಥರು, ಹಂಸಾ ಸಿಂಗ್ ಸತ್ತಿರಬಹುದು ಎಂದು ನಿರ್ಧರಿಸಿದರು. ಸಾಮಾಜಿಕ ಸಂಪ್ರದಾಯದಂತೆ ಹಂಸಾ ಸಿಂಗ್ ಅವರ ಪತ್ನಿ ವಿಮಲಾ ದೇವಿಯನ್ನು, ಹಂಸಾ ಸಿಂಗ್ ಅವರ ಕಿರಿಯ ಸಹೋದರ ಸುಖ್ ಸಿಂಗ್‌ಗೆ ಮದುವೆ ಮಾಡಿಕೊಡಲಾಯಿತು.
ಸುಖ್ ಸಿಂಗ್ ಮತ್ತು ವಿಮಲಾ ದೇವಿ ದಂಪತಿಗೆ ಈಗ ಮೂವರು ಮಕ್ಕಳಿದ್ದಾರೆ. ಕಳೆದ 22 ವರ್ಷಗಳಿಂದ ಈ ದಂಪತಿ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಈಗ ಹಂಸಾ ಸಿಂಗ್ ಅವರ ದಿಢೀರ್ ಎಂಟ್ರಿ ಇಡೀ ಸಂಸಾರವನ್ನು ಅಸ್ತವ್ಯಸ್ತಗೊಳಿಸಿದೆ.
ಪತ್ತೆಯಾಗಿದ್ದು ಹೇಗೆ?
ಉತ್ತರ ಪ್ರದೇಶದ ನಾರ್ಥೌರ್‌ನ ಬಜಾರ್‌ನಲ್ಲಿ ಹರಿದ ಬಟ್ಟೆ ಧರಿಸಿ, ಗಡ್ಡ ಬಿಟ್ಟುಕೊಂಡು ಭಿಕ್ಷುಕನಂತೆ ಅಲೆಯುತ್ತಿದ್ದ ವ್ಯಕ್ತಿಯನ್ನು ಕಂಡು ಪೊಲೀಸರು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ಏನೂ ಹೇಳದ ಆತ, ಮೆಲ್ಲನೆ ತನ್ನ ಹೆಸರು ಹಂಸಾ ಸಿಂಗ್ ಎಂದು ಬಾಯಿಬಿಟ್ಟಿದ್ದ. ನಾರ್ಥೌರ್ ಪೊಲೀಸರು ಕೂಡಲೇ ಪಂಜಾಬ್ ಪೊಲೀಸರನ್ನು ಸಂಪರ್ಕಿಸಿ ಕುಟುಂಬಕ್ಕೆ ಮಾಹಿತಿ ನೀಡಿದರು. 72 ಗಂಟೆಗಳ ಒಳಗಾಗಿ ಹಂಸಾ ಸಿಂಗ್ ಕುಟುಂಬಸ್ಥರು ಅಲ್ಲಿಗೆ ಧಾವಿಸಿದರು. ಬಾಲ್ಯದ ನೆನಪುಗಳನ್ನು ಕೇಳಿದಾಗ ಹಂಸಾ ಸಿಂಗ್ ಕಣ್ಣೀರು ಹಾಕಿದ್ದು, ಆತನೇ ತಮ್ಮ ಹಳೆಯ ಹಂಸಾ ಸಿಂಗ್ ಎಂದು ಕುಟುಂಬಸ್ಥರು ಗುರುತಿಸಿದರು.
ಎದುರಾಗಿದೆ ನೈತಿಕ ಮತ್ತು ಕಾನೂನು ಸಂಕಟ
ಹಂಸಾ ಸಿಂಗ್ ಮರಳಿದ್ದರಿಂದ ಕುಟುಂಬಕ್ಕೇನೋ ಖುಷಿಯಾಗಿದೆ. ಆದರೆ ವಿಮಲಾ ದೇವಿಯ ಪರಿಸ್ಥಿತಿ ಈಗ 'ಇತ್ತ ದರಿ ಅತ್ತ ಪುಲಿ' ಎಂಬಂತಾಗಿದೆ. ಕಾನೂನುಬದ್ಧವಾಗಿ ಮೊದಲ ಪತಿ ಬದುಕಿರುವಾಗ ಎರಡನೇ ಮದುವೆ ಅಸಿಂಧು ಎಂದರೂ, ಸಾಮಾಜಿಕವಾಗಿ ಮತ್ತು ಮಾನವೀಯ ದೃಷ್ಟಿಯಿಂದ 22 ವರ್ಷಗಳ ಸಂಸಾರವನ್ನು ಮುರಿಯುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಈ ವಿಚಿತ್ರ ಪ್ರಕರಣ ಈಗ ಇಡೀ ಪಂಜಾಬ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).