ಹೈದರಾಬಾದ್: ಹೈದರಾಬಾದ್‌ನ ಕುಕತ್‌ಪಲ್ಲಿಯಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ಮನೆಯಿಂದ ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣದೊಂದಿಗೆ(Missing Boy Case) ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೋಗುವ ಮುನ್ನ ಆತ ಬರೆದಿಟ್ಟಿರುವ ಪತ್ರ ಈಗ ಪೋಷಕರನ್ನು ಆತಂಕಕ್ಕೆ ತಳ್ಳಿದೆ.
ಕೆಪಿಎಚ್‌ಬಿ (KPHB) ಕಾಲೋನಿಯ ನಿವಾಸಿ ನಾಗಿ ರೆಡ್ಡಿ ಎಂಬುವವರ ಮಗ ಸಿದ್ಧಾರ್ಥ್ (17) ನಾಪತ್ತೆಯಾದ ಬಾಲಕ. ಕಳೆದ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿದ್ಧಾರ್ಥ್ ಸುಮಾರು 9 ತೊಲ ಚಿನ್ನದ ಆಭರಣಗಳು, 8 ಲಕ್ಷ ರೂಪಾಯಿ ನಗದು ಮತ್ತು ತಂದೆಯ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಓಡಿಹೋಗುವ ಮುನ್ನ ಸಿದ್ಧಾರ್ಥ್ ಮನೆಯಲ್ಲಿ ಒಂದು ಚೀಟಿಯನ್ನು ಬಿಟ್ಟು ಹೋಗಿದ್ದಾನೆ. ಅದರಲ್ಲಿ "ಕ್ಷಮಿಸಿ ತಂದೆ, ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ.. ನಾನು ನಿಮ್ಮ ಬೈಕನ್ನು ಹೊರಗೆ ಎಲ್ಲೋ ಒಂದು ಕಡೆ ಬಿಟ್ಟು ಹೋಗುತ್ತೇನೆ" ಎಂದು ಬರೆದಿದ್ದಾನೆ. ಮಗ ಕಾಣೆಯಾಗಿರುವುದು ಮತ್ತು ಮನೆಯಲ್ಲಿದ್ದ ಹಣ, ಒಡವೆ ಮಾಯವಾಗಿರುವುದನ್ನು ಕಂಡು ಪೋಷಕರು ಕಂಗೆಟ್ಟಿದ್ದಾರೆ. ಮಗನ ಮೊಬೈಲ್‌ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿದೆ.
ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಈ ಹಿಂದೆಯೂ ಒಂದು ಅಥವಾ ಎರಡು ಬಾರಿ ಮನೆಯಿಂದ ಯಾರಿಗೂ ಹೇಳದೆ ಓಡಿಹೋಗಿದ್ದನಂತೆ. ಆದರೆ ಪ್ರತಿ ಬಾರಿ ಹೋದಾಗಲೂ ಕೆಲ ದಿನಗಳ ನಂತರ ವಾಪಸ್ ಬರುತ್ತಿದ್ದ. ಆದರೆ ಈ ಬಾರಿ ಇಷ್ಟೊಂದು ದೊಡ್ಡ ಮೊತ್ತದ ಹಣ ಮತ್ತು ಬಂಗಾರದೊಂದಿಗೆ ಪರಾರಿಯಾಗಿರುವುದು ಪೋಷಕರಲ್ಲಿ ದಿಗಿಲು ಹುಟ್ಟಿಸಿದೆ.
ಪೊಲೀಸ್ ತನಿಖೆ ಚುರುಕು
ಪೋಷಕರ ದೂರಿನ ಮೇರೆಗೆ ಕುಕತ್‌ಪಲ್ಲಿ ಪೊಲೀಸರು ನಾಪತ್ತೆ ಪ್ರಕರಣ ಹಾಗೂ ಕಳ್ಳತನದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕ ಎಲ್ಲಿಗೆ ಹೋಗಿರಬಹುದು? ಅಷ್ಟೊಂದು ಹಣವನ್ನು ಆತ ಏನು ಮಾಡುತ್ತಾನೆ? ಎಂಬ ನಿಟ್ಟಿನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕ ಬೈಕ್ ಬಿಟ್ಟು ಹೋಗುವುದಾಗಿ ಹೇಳಿದ ಜಾಗಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ,(ಏಜೆನ್ಸೀಸ್).