Mirabai Chanu > ಸ್ಕಾಟ್ಲೆಂಡ್ನಲ್ಲಿ ಹಾರಿತು ಭಾರತದ ತ್ರಿವರ್ಣ ಧ್ವಜ: ಹಳೇ ದಾಖಲೆ ಪುಡಿಗಟ್ಟಿ ಚಿನ್ನ ಗೆದ್ದ ಮೀರಾಬಾಯಿ ಚಾನು
ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಮಣಿಪುರದ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು (Mirabai Chanu) ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಮಹಿಳೆಯರ 48 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು ತ್ರಿವರ್ಣ ಧ್ವಜವನ್ನು ತಮ್ಮ ಹೆಗಲ ಮೇಲೆ ಹೊತ್ತು ಮೆರೆಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಅವರಿಗೆ ಇದು ಮೂರನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಅವರು 2018 (49 ಕೆಜಿ) ಮತ್ತು 2022 (49 ಕೆಜಿ) ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ವಿಶೇಷವೆಂದರೆ, 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಮೀರಾಬಾಯಿ ಬೆಳ್ಳಿ ಪದಕ ಪಡೆದಿದ್ದರು.
ಸಾರ್ವಕಾಲಿಕ ದಾಖಲೆ ಬರೆದ ಮೀರಾ
31 ವರ್ಷದ ಮೀರಾಬಾಯಿ ಚಾನು ಸ್ನ್ಯಾಚ್ ವಿಭಾಗದಲ್ಲಿ 85 ಕೆಜಿ ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಹಾಗೂ ಗೇಮ್ಸ್ ದಾಖಲೆ ನಿರ್ಮಿಸಿದರು. ತದನಂತರ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಗೇಮ್ಸ್ ದಾಖಲೆಯ 105 ಕೆಜಿ ಎತ್ತುವ ಮೂಲಕ ಒಟ್ಟಾರೆಯಾಗಿ 190 ಕೆಜಿ ತೂಕ ಎತ್ತಿ ಪ್ರಥಮ ಸ್ಥಾನ ಪಡೆದರು. ಇದು 2026ರ ಕಾಮನ್‌ವೆಲ್ತ್ ಗೇಮ್ಸ್ನ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಪದಕವಾಗಿದ್ದು, ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇದಕ್ಕೂ ಮುನ್ನ ಪುರುಷರ 60 ಕೆಜಿ ವಿಭಾಗದಲ್ಲಿ ಋಷಿಕಾಂತ ಸಿಂಗ್ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಶುಭಾರಂಭ ತಂದಿತ್ತಿದ್ದರು. ಈ ವಿಭಾಗದಲ್ಲಿ ನೈಜೀರಿಯಾದ ರೂತ್ ಅಸುಕೊ ನ್ಯಾಂಗ್ ಬೆಳ್ಳಿ ಪದಕ ಹಾಗೂ ಮಲೇಷ್ಯಾದ ಐರೀನ್ ಜೇನ್ ಹೆನ್ರಿ ಕಾಂಸ್ಯ ಪದಕ ಪಡೆದುಕೊಂಡರು.
ಹೈ-ಡ್ರಾಮಾ ಸ್ಪರ್ಧೆ ಮತ್ತು ದಾಖಲೆಯ ಸಾಧನೆ
ಚಿನ್ನದ ಪದಕದ ನೆಚ್ಚಿನ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಆರಂಭ ಉತ್ತಮವಾಗಿರಲಿಲ್ಲ. ಸ್ನ್ಯಾಚ್ ವಿಭಾಗದಲ್ಲಿ ತಮ್ಮ ಮೊದಲ ಯತ್ನದ 82 ಕೆಜಿ ತೂಕ ಎತ್ತುವಲ್ಲಿ ಅವರು ವಿಫಲರಾದರು. ಆದರೆ, ದ್ವಿತೀಯ ಯತ್ನದಲ್ಲಿ 82 ಕೆಜಿ ಎತ್ತಿದ ಅವರು, ಮೂರನೇ ಯತ್ನದಲ್ಲಿ 85 ಕೆಜಿ ತೂಕವನ್ನು ಸುಲಭವಾಗಿ ಎತ್ತಿ ಹೊಸ ಗೇಮ್ಸ್ ದಾಖಲೆ ಬರೆದರು.
ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲೂ ತೀವ್ರ ಕುತೂಹಲ ಮೂಡಿಸಿತ್ತು. ನೈಜೀರಿಯಾದ ಸ್ಪರ್ಧಿ ತಮ್ಮ ಎರಡನೇ ಯತ್ನದಲ್ಲೇ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡ ನಂತರ, ಮೀರಾಬಾಯಿ ನೇರವಾಗಿ 105 ಕೆಜಿಯಿಂದ ಸ್ಪರ್ಧೆ ಆರಂಭಿಸಿದರು. ಮೊದಲ ಯತ್ನದಲ್ಲಿ 105 ಕೆಜಿ ಎತ್ತಲು ಸಾಧ್ಯವಾಗದಿದ್ದರೂ, ಧೃತಿಗೆಡದೆ ಎರಡನೇ ಯತ್ನದಲ್ಲಿ ಅದೇ ತೂಕವನ್ನು ಯಶಸ್ವಿಯಾಗಿ ಎತ್ತಿ ದೇಶಕ್ಕೆ ಸ್ವರ್ಣ ಪದಕವನ್ನು ಖಾತ್ರಿಪಡಿಸಿದರು. ಇನ್ನು ಎರಡು ತಿಂಗಳಲ್ಲಿ ಏಷ್ಯನ್ ಗೇಮ್ಸ್ ಸರಣಿ ನಡೆಯಲಿರುವ ಹಿನ್ನೆಲೆಯಲ್ಲಿ, ಚಿನ್ನದ ಪದಕ ಖಚಿತವಾದ ನಂತರ ಅನಗತ್ಯ ಅಪಾಯವನ್ನು ತಪ್ಪಿಸಲು ಮೀರಾಬಾಯಿ ತಮ್ಮ ಮೂರನೇ ಯತ್ನದಿಂದ ಹಿಂದೆ ಸರಿದರು.
ಪದಕಗಳ ಪಟ್ಟಿಯಲ್ಲಿ ಭಾರತದ ಶುಭಾರಂಭ
ಮೀರಾಬಾಯಿ ಚಾನು ಗೆದ್ದ ಈ ಸ್ವರ್ಣ ಪದಕದೊಂದಿಗೆ ಭಾರತವು 2026ರ ಕಾಮನ್‌ವೆಲ್ತ್ ಗೇಮ್ಸ್ ಪದಕಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ. ಇದಕ್ಕೂ ಮುನ್ನ ಎರಡನೇ ದಿನದ ಅಂತ್ಯದಲ್ಲಿ ಪ್ಯಾರಾ ಪವರ್‌ಲಿಫ್ಟರ್ ಝಂಡು ಕುಮಾರ್ ಕಾಂಸ್ಯ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು. ಮತ್ತೊಂದೆಡೆ, ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ತಾರೆ ಲವ್ಲಿನ್ ಬೋರ್ಗೊಹೈನ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ(ಏಜೆನ್ಸೀಸ್).