ಅಡ್ಡಾದಿಡ್ಡಿ ಕಾರ್ ಓಡಿಸಿ 7 ವಾಹನ ಪುಡಿಪುಡಿ ಮಾಡಿದ ಅಪ್ರಾಪ್ತ! (Hyderabad Accident ಚಿತ್ರ X) 
ದೇಶ

ಅಡ್ಡಾದಿಡ್ಡಿ ಕಾರ್ ಓಡಿಸಿ 7 ವಾಹನ ಪುಡಿಪುಡಿ ಮಾಡಿದ ಅಪ್ರಾಪ್ತ!...ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ Hyderabad Accident

ಹೈದರಾಬಾದ್: ನಗರದ ಬೋರಾಬಂಡ ಪ್ರದೇಶದಲ್ಲಿ ಭಾನುವಾರ (ಆಗಸ್ಟ್ 02) ಅಪ್ರಾಪ್ತ ಬಾಲಕನೊಬ್ಬನ ಬೇಜವಾಬ್ದಾರಿ ಚಾಲನೆಗೆ ಭೀಕರ ಅಪಘಾತ ಸಂಭವಿಸಿದೆ. ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದೆ ಕಾರು ಚಲಾಯಿಸುತ್ತಿದ್ದ 17 ವರ್ಷದ ಯುವಕ, ರಸ್ತೆ ಬದಿಯಲ್ಲಿದ್ದ 7 ದ್ವಿಚಕ್ರ ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದ ಬಳಿಕ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಿಗೆ ಜೋರಾಗಿ ಗುದ್ದಿದ (Hyderabad Accident) ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ಕಾರಿನ ಅಡಿಯಲ್ಲಿ ಸಿಲುಕಿದ ವೃದ್ಧ

ಘಟನೆಯ ಭಯಾನಕ ದೃಶ್ಯಗಳು ಅಲ್ಲಿನ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾರು ಚಲಾಯಿಸುತ್ತಿದ್ದ ಯುವಕ ಹಠಾತ್ತನೆ ನಿಯಂತ್ರಣ ಕಳೆದುಕೊಂಡ ಹಿನ್ನಲೆ ಸಾಲಾಗಿ ನಿಲ್ಲಿಸಿದ್ದ 7 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದೇ ವೇಳೆ ಬೈಕ್​ನಲ್ಲಿ ಚರ್ಚ್‌ಗೆ ಹೋಗುತ್ತಿದ್ದ ರಾಜಕುಮಾರ್ (60) ಮತ್ತು ಪ್ರಭಾಕರ್ (55) ಎಂಬ ಸಹೋದರರ ಕಾರು ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ನೆಲಕ್ಕುರುಳಿ ಕಾರಿನ ಅಡಿಯ್ಲಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ.

ರಕ್ಷಣೆಗೆ ಓಡೋಡಿ ಬಂದ ಸಾರ್ವಜನಿಕರು!

ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಹಾಯಕ್ಕೆ ಧಾವಿಸಿದ್ದು, ಕಾರನ್ನು ಮೇಲಕ್ಕೆತ್ತುವ ಮೂಲಕ ಕಾರಿನ ಅಡಿಯಲ್ಲಿ ಸಿಲುಕಿದ್ದ ವೃದ್ಧನನ್ನು ಹೊರತೆಗೆದಿದ್ದಾರೆ. ಆದಾಗ್ಯೂ, ಗಾಯಗೊಂಡಿದ್ದ ಅವರಿಬ್ಬರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಲಕನನ್ನು ಬೆನ್ನಟ್ಟಿ ಹಿಡಿದು ಥಳಿಸಿದ ಸ್ಥಳೀಯರು!

ಅಪಘಾತ ಸಂಭವಿಸುತ್ತಿದ್ದಂತೆಯೇ ಯುವಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಆತನನ್ನು ಬೆನ್ನಟ್ಟಿದ ಸ್ಥಳೀಯರು ಸ್ವಲ್ಪ ದೂರದಲ್ಲೇ ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರನ್ನು ತೊಳೆದ ನಂತರ ಕೀ ವಾಹನದಲ್ಲೇ ಇದ್ದುದ್ದನ್ನು ಗಮನಿಸಿದ ಆತ ಕಾರನ್ನು ಚಲಾಯಿಸಲು ಯತ್ನಿಸಿ ಈ ದುರಂತ ಎಸಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಧುರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್​).