CM Vijay (ಚಿತ್ರ X) 
ದೇಶ

ಬೆಳಿಗ್ಗೆ 4 ಗಂಟೆಗೆ ಸಚಿವರಿಗೆ ಸಿಎಂ ವಿಜಯ್ ಕಾಲ್: ಪ್ರಧಾನಿಗಿಂತಲೂ ಹೆಚ್ಚು ಹೊತ್ತು ಕೆಲಸ ಮಾಡ್ತಾರಂತೆ ತಮಿಳುನಾಡು ಮುಖ್ಯಮಂತ್ರಿ! CM Vijay

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಚಿತ್ರರಂಗದ ಸೂಪರ್​ಸ್ಟಾರ್​ನಿಂದ ರಾಜಕಾರಣಿಯಾಗಿ ಹೊರಹೊಮ್ಮಿರುವ ಜೋಸೆಫ್ ವಿಜಯ್
  • ಜೋಸೆಫ್ ವಿಜಯ್​, ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರದ ಮೊದಲ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ
  • ವಿಜಯ್​ ದಿನಕ್ಕೆ 18-20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದ ಸಚಿವ ಆದವ್ ಅರ್ಜುನ್

ಚೆನ್ನೈ: ತಮಿಳುನಾಡಿನ ಚಿತ್ರರಂಗದ ಸೂಪರ್​ಸ್ಟಾರ್​ನಿಂದ ರಾಜಕಾರಣಿಯಾಗಿ ಹೊರಹೊಮ್ಮಿರುವ (

CM Vijay)

ಜೋಸೆಫ್ ವಿಜಯ್​, ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರದ ಮೊದಲ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ರಾಜಕೀಯ ರಂಗಪ್ರವೇಶದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿರುವ ವಿಜಯ್ ಅವರ ಆಡಳಿತ ಶೈಲಿಯ ಕುರಿತು ಅವರ ನಿಕಟವರ್ತಿ ಆದವ್ ಅರ್ಜುನ್ ಅವರು ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ದಿನಕ್ಕೆ 18 ರಿಂದ 20 ಗಂಟೆ ಕೆಲಸ

ಚೆನ್ನೈನಲ್ಲಿ ನಡೆದ ‘ಇಂಡಿಯಾ ಟುಡೇ ತಮಿಳುನಾಡು ಕಾನ್‌ಕ್ಲೇವ್’ ಕಾರ್ಯಕ್ರಮದಲ್ಲಿ ಮಾತನಾಡಿದ ಆದವ್ ಅರ್ಜುನ್, ವಿಜಯ್​ ದಿನಕ್ಕೆ 18-20 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ನಾಯಕರು ಬೆಳಿಗ್ಗೆ 4 ಗಂಟೆಗೆ ಎದ್ದು ಎಲ್ಲಾ ಸಚಿವರಿಗೆ ಕರೆ ಮಾಡಿ, ಆಯಾ ಇಲಾಖೆಗಳ ಪ್ರಗತಿ ಹಾಗೂ ಪ್ರಚಲಿತ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಾರೆ ಎಂದು ವಿವರಿಸಿದ್ದಾರೆ.

ಚುನಾವಣಾ ಗೆಲುವಿಗಿಂತ ಆಡಳಿತಕ್ಕೆ ಆದ್ಯತೆ

ವಿಜಯ್ ಅವರು ಚುನಾವಣೆ ಗೆದ್ದ ನಂತರ ಯಾವುದೇ ಸಂಭ್ರಮಾಚರಣೆಯಲ್ಲಿ ಮುಳುಗದೆ, ಸಂಪೂರ್ಣವಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅವರನ್ನು ನೋಡಿದರೆ ಒಬ್ಬ ರಾಜಕೀಯ ಸನ್ಯಾಸಿಯಂತೆ ಭಾಸವಾಗುತ್ತದೆ. ಪ್ರತಿಯೊಂದು ಇಲಾಖೆಯ ಸವಾಲುಗಳು, ಅಲ್ಲಿನ ಸಮಸ್ಯೆಗಳು ಹಾಗೂ ಮುಖ್ಯವಾಗಿ ಭ್ರಷ್ಟಾಚಾರವನ್ನು ತೊಡೆದುಹಾಕಲು ವಿಜಯ್​ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಅರ್ಜುನ್ ಹೇಳಿದ್ದಾರೆ.

ಪಾರದರ್ಶಕತೆಗೆ ಆದ್ಯತೆ ಮತ್ತು ಭ್ರಷ್ಟಾಚಾರ ನಿಯಂತ್ರಣ

ತಮ್ಮ ಆಡಳಿತದ ಮೊದಲ 100 ದಿನಗಳಲ್ಲೇ ಸರ್ಕಾರಿ ವ್ಯವಸ್ಥೆಯಲ್ಲಿನ ಆರ್ಥಿಕ ಸೋರಿಕೆಯನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ವಿಜಯ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದಾಗ್ಯೂ, ದಶಕಗಳಿಂದ ಅಧಿಕಾರಿಶಾಹಿ ವ್ಯವಸ್ಥೆಯಲ್ಲಿ ಬೇರೂರಿರುವ ಕೆಳಹಂತದ ಭ್ರಷ್ಟಾಚಾರವನ್ನು ತೊಡೆದುಹಾಕಲು, ಮೇಲ್ಮಟ್ಟದಿಂದಲೇ ಸಿಸ್ಟಮ್ ಅನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ವಿಜಯ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಸಭೆಯಲ್ಲಿ ಕರುಣಾನಿಧಿ ಹೆಸರು: ಕ್ಷಮೆಯಾಚಿಸಿದ ವಿಜಯ್

ವಿಧಾನಸಭೆಯಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅನುದಾನ ಬೇಡಿಕೆ ಮೇಲಿನ ಚರ್ಚೆ ವೇಳೆ, ಅರಣ್ಯ ಸಚಿವ ಆರ್‌ವಿ ರಂಜಿತ್ ಕುಮಾರ್ ಚುನಾವಣೆಗಳಲ್ಲಿ ಹಣ ಹಂಚಿಕೆ ಆರೋಪಗಳ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಅವರು ಡಿಎಂಕೆ ನಾಯಕ, ಮಾಜಿ ಸಿಎಂ ಕರುಣಾನಿಧಿ ಅವರಿಗೆ ‘ಕಲೈಂಜರ್’ ಅಥವಾ ‘ಮಾಜಿ ಮುಖ್ಯಮಂತ್ರಿ’ ಎಂದು ಗೌರವ ನೀಡದೆ, ನೇರವಾಗಿ ‘ಕರುಣಾನಿಧಿ’ ಎಂದು ಪ್ರಸ್ತಾಪಿಸಿದರು.
ಇದಕ್ಕೆ ಕೆ.ಎಸ್.ಆರ್ ರಾಮಚಂದ್ರನ್ ನೇತೃತ್ವದ ಡಿಎಂಕೆ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣ ಮಧ್ಯಪ್ರವೇಶಿಸಿದ ಸಿಎಂ ವಿಜಯ್, ಸಚಿವರ ಭಾಷಣ ತಡೆದು ಹಿರಿಯ ನಾಯಕರನ್ನು ಆ ರೀತಿ ಕರೆಯುವುದು ತಪ್ಪು ಎಂದರು. ಜೊತೆಗೆ ಸಚಿವರ ಪರವಾಗಿ ತಾವೇ ಕ್ಷಮೆಯಾಚಿಸಿ ಗೊಂದಲಕ್ಕೆ ತೆರೆ ಎಳೆದರು (ಏಜೆನ್ಸೀಸ್​).