ಗಣಿಗಾರಿಕೆ ಆದಾಯ ಹಂಚಿಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ಭುಗಿಲೆದ್ದಿದೆ. ಖನಿಜ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರಕ್ಕೆ 2026ರ ತಿದ್ದುಪಡಿ ಕಾಯ್ದೆ ನಿರ್ಬಂಧ ಹೇರಲಿದ್ದು, ಅದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕಾಯ್ದೆಯಿಂದ ತನ್ನ 13 ಸಾವಿರ ಕೋಟಿ ರೂ. ವಾರ್ಷಿಕ ಆದಾಯಕ್ಕೆ ಕತ್ತರಿ ಬೀಳಲಿದೆ ಎಂದು ಜಾರ್ಖಂಡ್ ಆತಂಕ ವ್ಯಕ್ತಪಡಿಸಿದೆ. ಕರ್ನಾಟಕ, ಕೇರಳ, ಒಡಿಶಾ ಕೂಡ ಕೇಂದ್ರದ ಕ್ರಮವನ್ನು ವಿರೋಧಿಸಿವೆ. ಗಣಿಗಾರಿಕೆ ನಿಯಂತ್ರಣದ ಹೆಸರಿನಲ್ಲಿ ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಕೇಂದ್ರ ಮೊಟಕುಗೊಳಿಸುತ್ತಿದೆಯೇ? ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಅಧಿಕಾರವನ್ನು ಹೊಸ ಕಾಯ್ದೆ ಹೇಗೆ ಮೊಟಕುಗೊಳಿಸುತ್ತದೆ? ರಾಜ್ಯಗಳ ಆತಂಕವೇನು? ಕೇಂದ್ರದ ವಾದವೇನು? ಈ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ.
ದೇಶದ ಗಣಿಗಾರಿಕೆ ವಲಯವನ್ನು ನಿಯಂತ್ರಿಸುವ 1957ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಮಸೂದೆಯನ್ನು ಆ. 13ರಂದು ಸಂಸತ್ತು ಅಂಗೀಕರಿಸಿದೆ. ಪ್ರಮುಖ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯಗಳು ವಿಧಿಸುವ ತೆರಿಗೆ, ಸೆಸ್ ಮತ್ತು ಇತರ ಶುಲ್ಕಗಳಿಗೆ ನಿರ್ಬಂಧ ಹೇರುವುದು ಇದರ ಪ್ರಮುಖ ಉದ್ದೇಶ. ಖನಿಜ ಹಕ್ಕುಗಳು ಮತ್ತು ಖನಿಜ ನಿಕ್ಷೇಪವಿರುವ ಭೂಮಿಯ ಮೇಲೆ ರಾಜ್ಯಗಳು ಸ್ವತಂತ್ರವಾಗಿ ತೆರಿಗೆ ಅಥವಾ ಇತರ ಶುಲ್ಕ ವಿಧಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸುವ ಷರತ್ತುಗಳಿಗೆ ಒಳಪಟ್ಟು ಮಾತ್ರ ಇಂತಹ ತೆರಿಗೆ ವಿಧಿಸಬಹುದು.
ಕಾಯ್ದೆಯ ಸೆಕ್ಷನ್ 9ಡಿ ಈ ನಿರ್ಬಂಧವನ್ನು ಒಳಗೊಂಡಿದೆ. ಖನಿಜಗಳ ಪ್ರಮಾಣ, ಮೌಲ್ಯ, ರಾಯಧನ ಅಥವಾ ಇತರ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳು ವಿಧಿಸುವ ಸೆಸ್ ಮತ್ತು ತೆರಿಗೆಗಳಿಗೂ ಈ ನಿರ್ಬಂಧ ಅನ್ವಯಿಸುತ್ತದೆ. ಹಿಂದಿನ ಕೆಲವು ರಾಜ್ಯ ತೆರಿಗೆಗಳ ಬಾಕಿ ಅಥವಾ ವಸೂಲಾಗದ ಮೊತ್ತಗಳನ್ನೂ ಅಮಾನ್ಯಗೊಳಿಸುವ ಅಂಶ ತಿದ್ದುಪಡಿಯಲ್ಲಿದೆ. ಆದರೆ ಈಗಾಗಲೇ ಪಾವತಿಸಿದ ಅಥವಾ ವಸೂಲಿ ಮಾಡಿದ ಮೊತ್ತವನ್ನು ಹಿಂದಿರುಗಿಸುವ ಅಗತ್ಯವಿಲ್ಲ. ಈವರೆಗೆ ರಾಜ್ಯಗಳು ಗಣಿಗಾರಿಕೆ ಕಂಪನಿಗಳಿಂದ ರಾಯಧನ ಮತ್ತು ಇತರ ಕಾನೂನುಬದ್ಧ ಪಾವತಿಗಳ ಜತೆಗೆ ಹೆಚ್ಚುವರಿ ಸೆಸ್ ಹಾಗೂ ತೆರಿಗೆ ಸಂಗ್ರಹಿಸುತ್ತಿದ್ದವು. ಹೊಸ ತಿದ್ದುಪಡಿ ಈ ಅಧಿಕಾರವನ್ನು ಮೊಟಕುಗೊಳಿಸಿದೆ ಎಂಬುದು ರಾಜ್ಯಗಳ ಆಕ್ಷೇಪ.
ಈ ವಿವಾದದ ಮೂಲ 2024ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿದೆ. ಮಿನರಲ್ ಏರಿಯಾ ಡೆವಲಪ್ವೆುಂಟ್ ಅಥಾರಿಟಿ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಡುವಿನ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ 8:1ರ ಬಹುಮತದಿಂದ ತೀರ್ಪು ನೀಡಿತ್ತು. ‘ಗಣಿಗಾರಿಕೆ ಕಂಪನಿಗಳು ಪಾವತಿಸುವ ರಾಯಧನ (ರಾಯಲ್ಟಿ) ತೆರಿಗೆಯಲ್ಲ. ಖನಿಜ ಸಂಪತ್ತು ಇರುವ ಭೂಮಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೂ ಇದೆ’ ಎಂದು ಹೇಳಿತ್ತು. ಈ ತೀರ್ಪಿನಿಂದ, ಗಣಿಗಾರಿಕೆ ಮೂಲಕ ಹೆಚ್ಚುವರಿ ಆದಾಯ ಸಂಗ್ರಹಿಸಲು ರಾಜ್ಯಗಳಿಗೆ ಅವಕಾಶ ದೊರೆತಿತ್ತು.
ಖನಿಜಗಳ ಪ್ರಮಾಣ ಅಥವಾ ಮೌಲ್ಯದ ಆಧಾರದ ಮೇಲೆ ತೆರಿಗೆ ವಿಧಿಸುವುದರ ಜತೆಗೆ, ಹಿಂದಿನ ಕೆಲವು ಬಾಕಿ ಮೊತ್ತ ವಸೂಲಿಗೂ ಅವಕಾಶ ಸಿಕ್ಕಿತ್ತು. ಆದರೆ 2026ರ ತಿದ್ದುಪಡಿ ಕಾಯ್ದೆ ಈ ಅಧಿಕಾರಕ್ಕೇ ಕೊಕ್ಕೆ ಹಾಕಿದೆ. ಗಣಿಗಾರಿಕೆ ನಿಯಂತ್ರಿಸುವ ಅಧಿಕಾರ ಸಂಸತ್ತಿಗಿದೆ ಎಂಬುದನ್ನು ರಾಜ್ಯಗಳು ಒಪ್ಪುತ್ತವೆ. ಆದರೆ ಅದನ್ನು ನೆಪವಾಗಿಸಿಕೊಂಡು ಭೂಮಿ ಮತ್ತು ತೆರಿಗೆ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವಂತಿಲ್ಲ ಎಂಬುದು ಅವುಗಳ ವಾದ. ಇಲ್ಲಿ ಕಾನೂನಿನ ಸೂಕ್ಷ್ಮ ಅಂಶವೊಂದಿದೆ. ರಾಜ್ಯಗಳ ಖನಿಜ ಹಕ್ಕುಗಳ ಮೇಲಿನ ತೆರಿಗೆ ಅಧಿಕಾರಕ್ಕೆ ಸಂಸತ್ತು ಕೆಲವು ಮಿತಿಗಳನ್ನು ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ, ಭೂಮಿಯ ಮೇಲಿನ ತೆರಿಗೆ ಅಧಿಕಾರಕ್ಕೆ ಆ ಮಿತಿ ಅನ್ವಯಿಸುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳಿತ್ತು. ಹೀಗಾಗಿ ಹೊಸ ಕಾಯ್ದೆಯಲ್ಲಿ ಖನಿಜ ನಿಕ್ಷೇಪವಿರುವ ಭೂಮಿಯನ್ನು ಕೇಂದ್ರದ ನಿಯಂತ್ರಣಕ್ಕೆ ತರುವ ಅಂಶ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜಾರ್ಖಂಡ್: ಕಾಯ್ದೆಯ ವಿರುದ್ಧ ಜಾರ್ಖಂಡ್ ಅತ್ಯಂತ ತೀವ್ರವಾಗಿ ಧ್ವನಿ ಎತ್ತಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರಕಾರ, ಖನಿಜ ಹಕ್ಕುಗಳು ಮತ್ತು ಖನಿಜ ಭೂಮಿಯ ಮೇಲಿನ ಸೆಸ್ ಮೂಲಕ ಜಾರ್ಖಂಡ್ ವಾರ್ಷಿಕ 13 ಸಾವಿರ ಕೋಟಿ ರೂ. ಸಂಗ್ರಹಿಸುತ್ತಿದೆ. ಹೊಸ ಕಾಯ್ದೆಯಿಂದ ಈ ಆದಾಯಕ್ಕೆ ಹೊಡೆತ ಬೀಳುತ್ತದೆ. ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ, ಗ್ರಾಮೀಣಾಭಿವೃದ್ಧಿ ಮತ್ತು ಗಣಿಗಾರಿಕೆ ಪೀಡಿತ ಪ್ರದೇಶಗಳ ಕಲ್ಯಾಣ ಯೋಜನೆಗಳಿಗೆ ಹಣ ಸಾಲುವುದಿಲ್ಲ ಎಂಬುದು ಅವರ ಆತಂಕ. ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸುವ ನಿರ್ಣಯವನ್ನು ನ. 26ರಂದು ಜಾರ್ಖಂಡ್ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಕೇರಳ: ‘ಇದು ರಾಜ್ಯಗಳ ಅಧಿಕಾರದ ವಿಷಯದಲ್ಲಿ ಕೇಂದ್ರದ ಹಸ್ತಕ್ಷೇಪ. ಖನಿಜ ಭೂಮಿಯನ್ನು ಕೇಂದ್ರದ ನಿಯಂತ್ರಣಕ್ಕೆ ತರುವುದರಿಂದ ಒಕ್ಕೂಟ ವ್ಯವಸ್ಥೆಯ ಅಧಿಕಾರ ಹಂಚಿಕೆಗೆ ಧಕ್ಕೆಯಾಗುತ್ತದೆ’ ಎಂಬುದು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಾದ. ೆ.
ಕರ್ನಾಟಕ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಪತ್ರ ಬರೆದು ಕೇಂದ್ರವು ತನ್ನ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯಗಳ ಸಂವಿಧಾನಬದ್ಧ ಹಣಕಾಸು ಅಧಿಕಾರವನ್ನು ಈ ಕಾಯ್ದೆ ನಿರ್ಬಂಧಿಸುತ್ತದೆ. ಈ ಸಂಬಂಧ ಖನಿಜಸಮೃದ್ಧ ರಾಜ್ಯಗಳೊಂದಿಗೆ ಸಮಾಲೋಚಿಸಬೇಕು ಎಂಬುದು ಕರ್ನಾಟಕದ ವಾದ.
ಒಡಿಶಾ: ಕೇಂದ್ರ ಸರ್ಕಾರ ರಾಜ್ಯದ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಬಿಜು ಜನತಾದಳದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಂದ್ರದ ಮಾಜಿ ಸಚಿವ ಧಮೇಂದ್ರ ಪ್ರಧಾನ್, ‘ಹಿಂದಿನ ಬಿಜು ಜನತಾದಳ ಸರ್ಕಾರ ಖಾಸಗಿ ಗಣಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿತ್ತು’ ಎಂದು ತಿರುಗೇಟು ನೀಡಿದ್ದಾರೆ.
ಗಣಿ ಕಂಪನಿಗಳ ಮೇಲೆ ರಾಜ್ಯಗಳು ವಿಧಿಸುವ ಅನಿರೀಕ್ಷಿತ ಮತ್ತು ಭಿನ್ನವಾದ ತೆರಿಗೆಗಳು ಗಣಿಗಾರಿಕೆ ಉದ್ಯಮದ ವೆಚ್ಚ ಹೆಚ್ಚಿಸುತ್ತವೆ. ಇದರಿಂದ ಹೂಡಿಕೆ ಕಡಿಮೆಯಾಗಿ ದೇಶೀಯ ಖನಿಜ ಉತ್ಪಾದನೆಗೆ ಹಿನ್ನಡೆಯಾಗುತ್ತಿದೆ ಎಂಬುದು ಕೇಂದ್ರದ ವಾದ. ಗಣಿ ಯೋಜನೆಗಳಿಗೆ ದೊಡ್ಡ ಪ್ರಮಾಣದ ಬಂಡವಾಳ ಹಾಕಬೇಕಾಗುತ್ತದೆ. ಯೋಜನೆ ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕು. ಭಿನ್ನಭಿನ್ನ ತೆರಿಗೆ ಮತ್ತು ಹೆಚ್ಚುವರಿ ಶುಲ್ಕಗಳು ಹೂಡಿಕೆದಾರರಲ್ಲಿ ಅನಿಶ್ಚಿತತೆ ಮೂಡಿಸುತ್ತವೆ. ಏಕರೂಪದ ತೆರಿಗೆ ಇದ್ದರೆ ಹೂಡಿಕೆ, ದೇಶೀಯ ಉತ್ಪಾದನೆ ಹೆಚ್ಚಲಿದೆ, ಅಂತಿಮವಾಗಿ ರಾಜ್ಯಗಳಿಗೂ ಹೆಚ್ಚಿನ ಆದಾಯ ಬರಲಿದೆ. ಈ ತಿದ್ದುಪಡಿ ಪ್ರಮುಖ ಖನಿಜಗಳಿಗೆ ಮಾತ್ರ ಅನ್ವಯಿಸುತ್ತದೆ; ಸಣ್ಣ ಖನಿಜಗಳ ಮೇಲಿನ ರಾಜ್ಯಗಳ ಈಗಿನ ಅಧಿಕಾರ ಹಾಗೆ ಇರಲಿದೆ.
ರಾಜ್ಯಗಳ ಭೂಮಿ ಅಥವಾ ಖನಿಜ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಕೇಂದ್ರಕ್ಕಿಲ್ಲ ಎನ್ನುತ್ತಾರೆ ಗಣಿ ಸಚಿವ ಕಿಶನ್ ರೆಡ್ಡಿ. ರಾಜ್ಯಗಳಿಗೆ ಗಣಿಗಾರಿಕೆ ವಲಯದ ಶೇ. 90ರಷ್ಟು ಆದಾಯ ಈಗಲೂ ದೊರೆಯುತ್ತಿದೆ. 2025-26ರಲ್ಲಿ ಕಲ್ಲಿದ್ದಲು ಮತ್ತು ಇತರ ಖನಿಜಗಳು ಸೇರಿದಂತೆ ರಾಜ್ಯಗಳ ಪಾಲಿನ ಖನಿಜ ಆದಾಯ ಸುಮಾರು 1.14 ಲಕ್ಷ ಕೋಟಿ ರೂ. ಆಗಿದೆ. 2015ರಲ್ಲಿ ಹರಾಜು ಆಧಾರಿತ ಗಣಿಗಾರಿಕೆ ವ್ಯವಸ್ಥೆ ಆರಂಭವಾದ ಬಳಿಕ ರಾಜ್ಯಗಳಿಗೆ ಒಟ್ಟು 7 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ದೊರೆತಿದೆ. ಕಳೆದ ದಶಕದಲ್ಲಿ ರಾಜ್ಯಗಳ ಖನಿಜ ಆದಾಯ ಶೇ.350ಕ್ಕೂ ಹೆಚ್ಚು ಹೆಚ್ಚಾಗಿದೆ ಎಂಬುದು ಕೇಂದ್ರದ ವಾದ.
1. ರಾಜ್ಯಗಳ ಆದಾಯ: ಜಾರ್ಖಂಡ್, ಒಡಿಶಾದಂತಹ ರಾಜ್ಯಗಳಿಗೆ ಗಣಿಗಾರಿಕೆ ಪ್ರಮುಖ ಆದಾಯದ ಮೂಲ. ಈ ಹಣವನ್ನು ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತದೆ. ಖನಿಜ ಉತ್ಪಾದನೆ ಅಥವಾ ಬೆಲೆ ಹೆಚ್ಚಾದಾಗ ಹೆಚ್ಚುವರಿ ತೆರಿಗೆ ವಿಧಿಸಿ ಆದಾಯ ಹೆಚ್ಚಿಸಿಕೊಳ್ಳುವ ಅಧಿಕಾರವನ್ನೂ ರಾಜ್ಯಗಳು ಕಳೆದುಕೊಳ್ಳುವ ಆತಂಕದಲ್ಲಿವೆ. ಆದರೆ ಈ ತಿದ್ದುಪಡಿಯಿಂದ ಒಟ್ಟಾರೆ ರಾಜ್ಯಗಳ ಆದಾಯ ಕಡಿಮೆಯಾಗುವುದಿಲ್ಲ; ರಾಯಧನ, ಹರಾಜು ಪ್ರೀಮಿಯಂ ಮತ್ತು ಇತರ ಪಾವತಿಗಳು ಮುಂದುವರಿಯುತ್ತವೆ ಎನ್ನುತ್ತದೆ ಕೇಂದ್ರ. ಜಾರ್ಖಂಡ್ ಹೇಳಿರುವ 13 ಸಾವಿರ ಕೋಟಿ ರೂ. ನಷ್ಟ ಆ ರಾಜ್ಯದ ಅಂದಾಜು ಮಾತ್ರ. ಕಾಯ್ದೆಯಿಂದ ರಾಜ್ಯದ ಒಟ್ಟು ಹಣಕಾಸಿನ ಮೇಲೆ ಆಗುವ ನೈಜ ಪರಿಣಾಮದ ಸ್ವತಂತ್ರ ಲೆಕ್ಕಾಚಾರವಲ್ಲ.
2. ಒಕ್ಕೂಟ ವ್ಯವಸ್ಥೆ: ಗಣಿಗಾರಿಕೆ ನಿಯಂತ್ರಿಸುವ ಅಧಿಕಾರ ಕೇಂದ್ರಕ್ಕಿದ್ದರೂ, ಭೂಮಿ ಮತ್ತು ತೆರಿಗೆ ವಿಚಾರದಲ್ಲಿ ರಾಜ್ಯಗಳಿಗೂ ಸಂವಿಧಾನಬದ್ಧ ಅಧಿಕಾರವಿದೆ. ಈ ಎರಡರ ನಡುವಿನ ಗಡಿಯನ್ನು ಹೊಸ ಕಾಯ್ದೆ ಪರೀಕ್ಷೆಗೆ ಒಡ್ಡಿದೆ. ಕೇಂದ್ರವು ಖನಿಜ ಭೂಮಿಯ ಮೇಲಿನ ತೆರಿಗೆಗೂ ಷರತ್ತು ವಿಧಿಸಬಹುದಾದರೆ, ಮುಂದಿನ ದಿನಗಳಲ್ಲಿ ರಾಜ್ಯಗಳ ಹಣಕಾಸು ಸ್ವಾಯತ್ತತೆ ಮತ್ತಷ್ಟು ಕುಗ್ಗಬಹುದು ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನ 2024ರ ತೀರ್ಪು ಮತ್ತು ಹೊಸ ಕಾಯ್ದೆಯ ನಡುವಿನ ಸಂವಿಧಾನಾತ್ಮಕ ಹೊಂದಾಣಿಕೆ ಪ್ರಮುಖವಾಗಲಿದೆ.
3. ಗಣಿ ಉದ್ಯಮದ ಭವಿಷ್ಯ: ಕೈಗಾರಿಕೆ, ರಕ್ಷಣೆ, ಮೂಲಸೌಕರ್ಯ, ಇಂಧನ ಕ್ಷೇತ್ರಗಳಿಗೆ ಅಗತ್ಯವಾದ ಖನಿಜಗಳನ್ನು ದೇಶದಲ್ಲೇ ಉತ್ಪಾದಿಸುವುದು, ಆಮದು ಅವಲಂಬನೆ ಕಡಿಮೆ ಮಾಡುವುದು ಕೇಂದ್ರದ ಉದ್ದೇಶ. ಇದಕ್ಕೆ ಹೂಡಿಕೆ ಮತ್ತು ಸ್ಥಿರವಾದ ತೆರಿಗೆ ವ್ಯವಸ್ಥೆ ಅಗತ್ಯ. ಆದರೆ ಗಣಿಗಾರಿಕೆಯಿಂದ ಭೂಮಿಯ ನಾಶ, ಪರಿಸರ ಹಾನಿ, ಜನರ ಸ್ಥಳಾಂತರ ಮತ್ತು ಸ್ಥಳೀಯ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಎದುರಿಸುವುದು ಖನಿಜ ಉತ್ಪಾದಕ ರಾಜ್ಯಗಳೇ. ಹೀಗಾಗಿ ಸಂಪನ್ಮೂಲ ಇರುವ ಪ್ರದೇಶಗಳಿಗೆ ಅದರ ಲಾಭದಲ್ಲಿ ನ್ಯಾಯಯುತ ಪಾಲು ಸಿಗಬೇಕು ಎಂಬುದು ರಾಜ್ಯಗಳ ಒತ್ತಾಯ.