Shashi tharoor | ಅಮೆರಿಕದ ವಿರುದ್ಧ ಸಂಸದ ಶಶಿ ತರೂರ್ ಕಿಡಿ
ದೆಹಲಿ: ವೆನೆಜುವೆಲಾ ಮೇಲೆ ಶನಿವಾರ ದಾಳಿ ನಡೆಸಿರುವ ಅಮೆರಿಕ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿರುವ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi tharoor), ಡೊನಾಲ್ಡ್ ಟ್ರಂಪ್ರನ್ನು ಟೀಕಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತರೂರ್, ಜಗತ್ತು ಇಂದು ಅಂತರಾಷ್ಟ್ರೀಯ ನಿಯಮಗಳ ಬದಲು ಬಲಪ್ರಯೋಗದ ಹಾದಿ ಹಿಡಿದಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ಕಾನೂನುಗಳು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಗೌರವಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಗಾಳಿಗೆ ತೂರಲಾಗುತ್ತಿದೆ. ಅಮೆರಿಕದ ಈ ಕ್ರಮವು ಸಾರ್ವಭೌಮ ದೇಶದ ಮೇಲೆ ನಡೆಸಿದ ನೇರ ಆಕ್ರಮಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ವೆನೆಜುವೆಲಾದಲ್ಲಿ ದರೋಡೆಕೋರತನವನ್ನು ಕ್ಷಮಿಸುವವರೆಲ್ಲರೂ, ಚೀನಾ ತೈವಾನ್ ಅಧ್ಯಕ್ಷರನ್ನು ಅಪಹರಿಸಿದಾಗ ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಬಗ್ಗೆ ಮಾತನಾಡುತ್ತಾರೆ ಎಂದು ಬರೆದ ಕಪಿಲ್ ಕೊಮಿರೆಡ್ಡಿ ಪೋಸ್ಟ್‌ಗೆ ತರೂರ್ ರೀಪೋಸ್ಟ್ ಮಾಡಿದ್ದಾರೆ. ಶನಿವಾರ ಬೆಳಿಗ್ಗೆ ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಿದ ಅಮೆರಿಕ, ಅದರ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧಿಸಿದೆ. ರಾತ್ರಿಯಿಡೀ ನಡೆದ ಕಾರ್ಯಾಚರಣೆಯು ವೆನೆಜುವೆಲಾವನ್ನು ಪ್ರಕ್ಷುಬ್ಧತೆಗೆ ತಳ್ಳಿದ್ದು, ಕೆಲವೆಡೆ ಹೋರಾಟಗಳು ನಡೆದಿವೆ ಎಂದು ವರದಿಯಾಗಿದೆ.
ಅಮೆರಿಕಾ ವಿರುದ್ಧ ವಿಶ್ವಸಂಸ್ಥೆ ವಾಗ್ದಾಳಿ..
ಅಮೆರಿಕದ ಈ ದಾಳಿಯನ್ನು ವಿಶ್ವಸಂಸ್ಥೆ ಟೀಕಿಸಿದ್ದು, ಇದು ಅಪಾಯಕಾರಿ ಪೂರ್ವನಿದರ್ಶನ ಎಂದು ಹೇಳಿದೆ. ಅಮೆರಿಕದ ಮಿಲಿಟರಿ ಕ್ರಮಗಳು ಈ ಪ್ರದೇಶಕ್ಕೆ ಆತಂಕಕಾರಿ ಪರಿಣಾಮಗಳನ್ನು ಬೀರುತ್ತವೆ, ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯವರು ಮಾತುಕತೆ ನಡೆಸಬೇಕೆಂದು ಕರೆ ನೀಡಿದೆ.
ಅಮೆರಿಕದ ದಾಳಿಗಳು ವಿಶ್ವಸಂಸ್ಥೆಯ ಚಾರ್ಟರ್‌ನ 2(4)ನೇ ವಿಧಿಯನ್ನು ಉಲ್ಲಂಘಿಸುತ್ತವೆ, ಅದು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಯಾವುದೇ ರಾಜ್ಯದ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಅಥವಾ ಬೆದರಿಕೆಯಿಂದ ದೂರವಿರಬೇಕು ಎಂದು ಹೇಳುತ್ತದೆ. ಇದರರ್ಥ ವೆನೆಜುವೆಲಾ ಸಾರ್ವಭೌಮ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದು, ಅಮೆರಿಕಾದ ಈ ದಾಳಿ ಕಾನೂನುಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾದಕವಸ್ತು-ಭಯೋತ್ಪಾದನಾ ಆರೋಪಗಳು
2020 ರಲ್ಲಿ ಕಾರ್ಟೆಲ್ ಆಫ್ ದಿ ಸನ್ಸ್ ಅನ್ನು ಮುನ್ನಡೆಸಿದ್ದಕ್ಕಾಗಿ ಮಡುರೊ ಅವರ ವಿರುದ್ಧ ಅಮೆರಿಕದ ನ್ಯಾಯಾಲಯಗಳು ದೋಷಾರೋಪಣೆ ಹೊರಿಸಿದ್ದವು. ಇತ್ತೀಚೆಗೆ, ಟ್ರಂಪ್ ಆಡಳಿತವು ಅವರ ಮೇಲಿನ ಬಹುಮಾನವನ್ನು $50 ಮಿಲಿಯನ್‌ಗೆ ದ್ವಿಗುಣಗೊಳಿಸಿತು. ಅಮೆರಿಕನ್ ಸಮಾಜವನ್ನು ದುರ್ಬಲಗೊಳಿಸಲು ಮಡುರೊ ಕೊಕೇನ್ ಮತ್ತು ಫೆಂಟನಿಲ್ ಅನ್ನು ತುಂಬಿದ್ದಾರೆ ಎಂದು ಯುಎಸ್ ಆರೋಪಿಸಿದೆ(ಏಜೆನ್ಸೀಸ್).