ಮಧ್ಯಪ್ರಾಚ್ಯ ಯುದ್ಧ; ಇರಾನ್ ಡ್ರೋನ್ ದಾಳಿಗೆ ಭಾರತೀಯ ಬಲಿ: ಕುವೈತ್ ಅಮೀರ್ ಜತೆ ಪ್ರಧಾನಿ ಮೋದಿ ತುರ್ತು ಮಾತುಕತೆ!
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಯುದ್ಧದ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್ ದೇಶದ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್(PM Modi Conversation With Kuwait Amir) ಅವರೊಂದಿಗೆ ಮಂಗಳವಾರ (ಜೂನ್ 9) ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಗಲ್ಫ್ ಪ್ರದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿ ಹಾಗೂ ಭಾರತೀಯರ ರಕ್ಷಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.
ಕಳೆದ ಜೂನ್ 3 ರಂದು ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಪಡೆಗಳು ಭೀಕರ ಡ್ರೋನ್ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ವಿಮಾನ ನಿಲ್ದಾಣಕ್ಕೆ ಭಾರಿ ಹಾನಿಯಾಗಿದ್ದಲ್ಲದೆ, ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನಾಗರಿಕರೊಬ್ಬರು ದುರದೃಷ್ಟವಶಾತ್ ಸಾವನ್ನಪ್ಪಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರ ಕ್ಷಿಪಣಿ ದಾಳಿಗಳು ನಡೆದ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕುವೈತ್ ಅಮೀರ್ ಜೊತೆ ನಡೆಸಿರುವ ಮಾತುಕತೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕುವೈತ್ ಸಾರ್ವಭೌಮತ್ವಕ್ಕೆ ಭಾರತದ ಬೆಂಬಲ: ಮೋದಿ ಆಶ್ವಾಸನೆ
ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್ ಮೇಲೆ ನಡೆದ ಡ್ರೋನ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕುವೈತ್ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗಲ್ಫ್ ವಲಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕೇವಲ ಶಾಂತಿ ಮಾತುಕತೆ ಮತ್ತು ರಾಜತಾಂತ್ರಿಕ ನಡೆಗಳೊಂದೇ ಏಕೈಕ ದಾರಿ ಎಂದು ಮೋದಿ ಪುನರುಚ್ಚರಿಸಿದ್ದಾರೆ.
ಇದೇ ವೇಳೆ, ಕುವೈತ್‌ನಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯ ವಲಸಿಗರ ಸುರಕ್ಷತೆ ಮತ್ತು ಯೋಗಕ್ಷೇಮದ ಕಡೆಗೆ ವೈಯಕ್ತಿಕವಾಗಿ ವಿಶೇಷ ಕಾಳಜಿ ವಹಿಸುತ್ತಿರುವ ಕುವೈತ್ ಅಮೀರ್ ಅವರಿಗೆ ಪ್ರಧಾನಿ ಮೋದಿ ಅವರು ಭಾರತದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಎಚ್ಚರಿಕೆ: ಹಾರ್ಮುಜ್ ಜಲಸಂಧಿ ದಿಗ್ಬಂಧನ ಮುಂದುವರಿಕೆ
ಮತ್ತೊಂದೆಡೆ, ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಸಮುದ್ರ ಮಾರ್ಗದ ದಿಗ್ಬಂಧನ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಎನ್‌ಬಿಎ ಫೈನಲ್ಸ್ ಪಂದ್ಯ ವೀಕ್ಷಿಸಿ ಹೊರಡುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ನಾವು ಇರಾನ್ ಜೊತೆ ಅತ್ಯುತ್ತಮ ಒಪ್ಪಂದದ ಅಂತಿಮ ಹಂತದಲ್ಲಿದ್ದೇವೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವುದನ್ನು ನಾವು ಬಿಡುವುದಿಲ್ಲ. ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣವೇ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗುವುದು. ಇದಕ್ಕೆ ಇನ್ನೂ ಕೇವಲ ಎರಡರಿಂದ ಮೂರು ದಿನಗಳು ಬೇಕಾಗಬಹುದು ಎಂದಿದ್ದಾರೆ.
ಆದರೆ, ಒಪ್ಪಂದ ಅಧಿಕೃತವಾಗಿ ಪೂರ್ಣಗೊಳ್ಳುವವರೆಗೂ ಇರಾನ್‌ನ ಯಾವುದೇ ತೈಲ, ಯಾವುದೇ ಆದಾಯ ಸಾಗಣೆಗೆ ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಈ ಕಠಿಣ ನಿಲುವಿನಿಂದಾಗಿ ಇಡೀ ಗಲ್ಫ್ ವಲಯದಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭಾರಿ ಆತಂಕ ಎದುರಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ,(ಏಜೆನ್ಸೀಸ್).