ಪ್ರಧಾನಿ ನರೇಂದ್ರ ಮೋದಿ 
ದೇಶ

ಮಧ್ಯಪ್ರಾಚ್ಯದ ಸಂಘರ್ಷ; ಬಹ್ರೇನ್ ರಾಜನ ಜೊತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ; ದಾಳಿ ಬಗ್ಗೆ ಖಂಡನೆ | PM Modi

ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದ ಪ್ರಸ್ತುತ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಮಾ. 20) ಬಹ್ರೇನ್‌ನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ವೇಳೆ ಬಹ್ರೇನ್ ಮೇಲಿನ ದಾಳಿನಯನ್ನ ಖಂಡಿಸಿದ್ದಾರೆ ಎಂದು ವರದಿಯಾಗಿದೆ.
ದೂರವಾಣಿಯಲ್ಲಿ, ರಾಜ ಹಮದ್ ಅವರಿಗೆ ಈದ್ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮಕ್ಕಾಗಿ ಅವರ ನಿರಂತರ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದೆ. ಅವರಿಗೆ ಮತ್ತು ಬಹ್ರೇನ್ ಜನರಿಗೆ ಈದ್ ಅಲ್-ಫಿತರ್ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದೆ. ಪಶ್ಚಿಮ ಏಷ್ಯಾ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಿದ್ದೇವೆ. ಈ ಪ್ರದೇಶದಲ್ಲಿನ ಇಂಧನ ಮತ್ತು ನಾಗರಿಕ ಮೂಲಸೌಕರ್ಯದ ಮೇಲಿನ ದಾಳಿಗಳನ್ನು ಖಂಡಿಸಿದ್ದು, ಇದು ಜಾಗತಿಕ ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯ ಮೇಲೆ ಅವುಗಳ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು, ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಹಡಗು ಮಾರ್ಗಗಳನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವವನ್ನು ಪುನರುಚ್ಚರಿಸಲಾಗಿದೆ. ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮಕ್ಕಾಗಿ ಅವರ ನಿರಂತರ ಬೆಂಬಲಕ್ಕಾಗಿ ಮಹಾರಾಜರಿಗೆ ಧನ್ಯವಾದ ಅರ್ಪಿಸಿದ್ದಾಗಿ ತಿಳಿಸಿದ್ದಾರೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಗಳು ನಡೆದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಬ್ಬರು ನಾಯಕರ ನಡುವಿನ ಸಂಭಾಷಣೆ ನಡೆದಿದೆ. ಪ್ರತಿಕ್ರಿಯೆಯಾಗಿ, ಇರಾನ್ ಪಶ್ಚಿಮ ಏಷ್ಯಾದಲ್ಲಿನ ಅಮೆರಿಕ ಮತ್ತು ಇಸ್ರೇಲಿ ಸೌಲಭ್ಯಗಳು, ಪ್ರಾದೇಶಿಕ ರಾಜಧಾನಿಗಳು ಮತ್ತು ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ (ಏಜೆನ್ಸೀಸ್).