Micro cutting skills : ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಕೆಲವೊಂದು ವಿಡಿಯೋ ನಂಬಲಸಾಧ್ಯ ಎನಿಸುವಷ್ಟು ವಿಸ್ಮಯ ಮೂಡಿಸುತ್ತದೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಡುಗೆ ಕೇವಲ ರುಚಿಯಾದ ಆಹಾರ ತಯಾರಿಸುವುದಷ್ಟೇ ಅಲ್ಲ, ಬದಲಿಗೆ ಪದಾರ್ಥಗಳನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ತಾಳ್ಮೆಯಿಂದ ನಿರ್ವಹಿಸುವ ಕಲೆಯೂ ಹೌದು ಎಂಬುದನ್ನು ರಾಜೇಂದ್ರ ಮಿಶ್ರಾ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಇವರ ಈ ಅಸಾಧಾರಣ ನೈಪುಣ್ಯವು ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ರಾಜೇಂದ್ರ ಮಿಶ್ರಾ ಅವರು ಕೇವಲ ಒಂದು ಉಪ್ಪಿನ ಕಣವನ್ನು ಎಂಟು ತುಂಡುಗಳಾಗಿ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿರುವ ವೈರಲ್ ವಿಡಿಯೋದಲ್ಲಿ ಮೊದಲು ಉಪ್ಪಿನ ಪ್ಯಾಕೆಟ್ನಿಂದ ಒಂದು ಪುಟ್ಟ ಉಪ್ಪಿನ ಕಣವನ್ನು ಆರಿಸಿಕೊಳ್ಳುತ್ತಾರೆ. ಇದರ ಜತೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಂತ ಸಣ್ಣ ಕಟಿಂಗ್ ಬ್ಲೇಡ್ ಅನ್ನು ಬಳಸುತ್ತಾರೆ.
ಉಪ್ಪಿನ ಕಣದ ಗಾತ್ರ ಎಷ್ಟು ಚಿಕ್ಕದೆಂದರೆ ಬರಿಗಣ್ಣಿಗೆ ನೋಡುವುದೇ ಕಷ್ಟ. ಅಂತಹದ್ದರಲ್ಲಿ, ಅತ್ಯಂತ ಜಾಗರೂಕತೆಯಿಂದ ಪ್ರತಿ ಬಾರಿಯೂ ಉಪ್ಪಿನ ಕಣದ ಸ್ಥಾನವನ್ನು ಬದಲಿಸುತ್ತಾ, ಬ್ಲೇಡ್ನ ತುದಿಗಳನ್ನು ಹೊಂದಿಸುತ್ತಾ, ಕಣವನ್ನು ಎಂಟು ಸಮಾನ ಭಾಗಗಳಾಗಿ ಕತ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಅದ್ಭುತ ಏಕಾಗ್ರತೆ ಮತ್ತು ಸೂಕ್ಷ್ಮ ಕೈಚಳಕವನ್ನು ಕಂಡು ನೆಟಿಗರು ದಂಗಾಗಿದ್ದಾರೆ.
ಇನ್ನೂ ಈ ವೈರಲ್ ವಿಡಿಯೋ ನೋಡುಗರನ್ನು ಎರಡು ಗುಂಪುಗಳನ್ನಾಗಿ ವಿಭಜಿಸಿದೆ. ಒಂದು ಕಡೆ ಕಲಾಪ್ರೇಮಿಗಳು ಮತ್ತು ಅಡುಗೆ ಪ್ರಿಯರು ಈ ಅದ್ಭುತ ಕೌಶಲ್ಯವನ್ನು ಮುಕ್ತವಾಗಿ ಪ್ರಶಂಸಿಸುತ್ತಿದ್ದರೆ, ಮತ್ತೊಂದೆಡೆ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಹಾಯದಿಂದ ಸೃಷ್ಟಿಸಲಾದ ನಕಲಿ ವಿಡಿಯೋ ಇರಬಹುದೆಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸಿಸ್).