Attack On Suvendu Adhikari Convoy 
ದೇಶ

ಸುವೇಂದು ಅಧಿಕಾರಿ ಬೆಂಗಾವಲು ವಾಹನದ ಮೇಲೆ ದಾಳಿ; ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ | Attack On Suvendu Adhikari Convoy

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬೆಂಗಾವಲು ವಾಹನದ ಮೇಲೆ ಪಶ್ಚಿಮ ಮೇದಿನಿಪುರದಲ್ಲಿ ನಡೆದ ದಾಳಿಯ ಕುರಿತಾದ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಳಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದ ಮಾಹಿತಿಗಾಗಿ ಗೃಹ ಸಚಿವಾಲಯ ಸುವೇಂದು ಅಧಿಕಾರಿ ಕಚೇರಿಯನ್ನು ಸಂಪರ್ಕಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದು, ಕಚೇರಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲು ವೀಡಿಯೊ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸುವೇಂದು ಅಧಿಕಾರಿ ಆರೋಪವೇನು..?

ಪುರುಲಿಯಾದಿಂದ ಹಿಂತಿರುಗುತ್ತಿದ್ದಾಗ ತಮ್ಮ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಅಧಿಕಾರಿ ಆರೋಪಿಸಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದರು ಕೂಡ ಈ ವೇಳೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ಇದೇ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಧಿಕಾರಿ, ಇಂದು ರಾತ್ರಿ ಸುಮಾರು 8:20 ರ ಸುಮಾರಿಗೆ, ನಾನು ಪುರುಲಿಯಾದಿಂದ ಹಿಂತಿರುಗುತ್ತಿದ್ದಾಗ, ಪಶ್ಚಿಮ ಮೇದಿನಿಪುರ ಜಿಲ್ಲೆಯ ಚಂದ್ರಕೋಣ ರಸ್ತೆಯಲ್ಲಿ, ಟಿಎಂಸಿ ಗೂಂಡಾಗಳು ನನ್ನ ಮೇಲೆ ಕ್ರೂರವಾಗಿ ದಾಳಿ ಮಾಡಿದರು. ಮಮತಾ ಬ್ಯಾನರ್ಜಿ ಆಡಳಿತದ ಹಿಂಸಾಚಾರ ಮತ್ತು ಶಿಕ್ಷೆಯ ಭಯದಿಂದ ಧೈರ್ಯಗೊಂಡ ಈ ಹೇಡಿಗಳು, ಪೊಲೀಸರ ಸಮ್ಮುಖದಲ್ಲೇ ನನ್ನ ಮೇಲೆ ದಾಳಿ ಮಾಡಿದರು. ಕಾನೂನಿನ ರಕ್ಷಕರು ಮೂಕ ಪ್ರೇಕ್ಷಕರಂತೆ ನಿಂತಿದ್ದರು ಎಂದು ಬರೆದುಕೊಂಡಿದ್ದಾರೆ.
ಇದು ಕೇವಲ ನನ್ನ ಮೇಲಿನ ದಾಳಿಯಲ್ಲ, ಪಶ್ಚಿಮ ಬಂಗಾಳದ ಪ್ರತಿ ವಿರೋಧದ ಧ್ವನಿಯ ಮೇಲಿನ ದಾಳಿಯಾಗಿದೆ. ಜನರ ಆಕ್ರೋಶದ ಬಿಸಿಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಟಿಎಂಸಿ ಈ ಕ್ರಮಕ್ಕೆ ಮುಂದಾಗಿದೆ, ಗೂಂಡಾಗಿರಿಯನ್ನು ಆಶ್ರಯಿಸಿದೆ. ಈ ಘಟನೆಯ ಆರೋಪಿಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವರೆಗೂ ನಾನು ಚಂದ್ರಕೋಣ ಪೊಲೀಸ್ ಠಾಣೆಯೊಳಗೆ ಧರಣಿ ಕುಳಿತುಕೊಳ್ಳುತ್ತೇನೆ, ರಾಜ್ಯದ ಜನರು ಈ ರೀತಿಯ ಕಾನೂನುಬಾಹಿರ ಸರ್ವಾಧಿಕಾರದಿಂದ ಬಸವಳಿದಿದ್ದು, ಅವರನ್ನು ಬಂಧಿಸುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು(ಏಜೆನ್ಸೀಸ್​).