ಮಹಾರಾಷ್ಟ್ರದಲ್ಲಿ ಅಕ್ರಮ ಮಾನವ ಅಂಡಾಣು ದಂಧೆ ಮತ್ತು IVF ಕೇಂದ್ರಗಳ ಮೇಲೆ ED ದಾಳಿ ಕುರಿತ ಸಾಂಕೇತಿಕ ಚಿತ್ರ 
ದೇಶ

ಬಡ ಮಹಿಳೆಯರ ಜೀವದ ಜೊತೆ ಚೆಲ್ಲಾಟ: ಅಕ್ರಮ IVF, ಮಾನವ ಅಂಡಾಣು ಮಾಫಿಯಾ ಬಯಲು; 5 ವೈದ್ಯರು ಸೇರಿ 15 ಜನರ ಮೇಲೆ FIR ದಾಖಲು! Illegal Egg Donation

ಮಹಾರಾಷ್ಟ್ರದಲ್ಲಿ ಬಡ ಮಹಿಳೆಯರನ್ನು ಗುರಿಯಾಗಿಸಿ ನಡೆಸುತ್ತಿದ್ದ ಅಕ್ರಮ ಮಾನವ ಅಂಡಾಣು ದಂಧೆಯನ್ನು ಇಡಿ ಬಯಲಿಗೆಳೆದಿದೆ. 5 ವೈದ್ಯರು ಸೇರಿ 15 ಆರೋಪಿಗಳ ಮೇಲೆ FIR ದಾಖಲು, ಸಂಪೂರ್ಣ ವಿವರ ಇಲ್ಲಿದೆ.

ಮುಂಬೈ: ಬಡತನದ ಲಾಭ ಪಡೆದು ಮಹಿಳೆಯರ ಜೀವದ ಜೊತೆ ಚೆಲ್ಲಾಟವಾಡುವ ಅಕ್ರಮ ಮಾನವ ಅಂಡಾಣು ದಂಧೆಯೊಂದು ಮಹಾರಾಷ್ಟ್ರದಲ್ಲಿ ಬಯಲಾಗಿದೆ. ಹಣದಾಸೆ ತೋರಿಸಿ ಬಡ ಮಹಿಳೆಯರನ್ನು ಬಲಿಪಶು ಮಾಡುತ್ತಿದ್ದ ಈ ಬಹುಕೋಟಿ ಜಾಲಕ್ಕೆ ಈಗ ಜಾರಿ ನಿರ್ದೇಶನಾಲಯ (ED) ಭರ್ಜರಿ ಶಾಕ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ, ಬಾರಾಮತಿ ಮತ್ತು ನಾಸಿಕ್‌ನ ಪ್ರಮುಖ ಆಸ್ಪತ್ರೆಗಳು ಹಾಗೂ ಐವಿಎಫ್ (IVF) ಕೇಂದ್ರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಬರೋಬ್ಬರಿ 29 ಲಕ್ಷ ರೂ. ನಗದು, ಬ್ಯಾಂಕ್ ಲಾಕರ್‌ಗಳು, ಕೋಟ್ಯಂತರ ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ದಂಧೆ? ಮಹಿಳೆಯರ ಮೇಲೆ ನಡೆದಿದ್ದೇನು?

ಬಡತನದಲ್ಲಿ ಬೆಂದ, ಆರ್ಥಿಕವಾಗಿ ಕಷ್ಟದಲ್ಲಿದ್ದ 40 ಕ್ಕೂ ಹೆಚ್ಚು ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಜಾಲ, ಪ್ರತಿ ಬಾರಿ ಮೊಟ್ಟೆ ನೀಡಿದರೆ 25,000 ದಿಂದ 30,000 ರೂಪಾಯಿ ಕೈಗಿಡುತ್ತಿತ್ತು. ಹೆಚ್ಚಿನ ಅಂಡಾಣುಗಳು ಉತ್ಪತ್ತಿಯಾಗಲಿ ಎಂಬ ಕಾರಣಕ್ಕೆ ಮಹಿಳೆಯರಿಗೆ ಸತತ 10 ರಿಂದ 12 ದಿನಗಳ ಕಾಲ ಅಪಾಯಕಾರಿ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿತ್ತು. ಸೋನೋಗ್ರಫಿ ಪರೀಕ್ಷೆಗಳ ವರದಿಗಳನ್ನು ಮಹಾರಾಷ್ಟ್ರ ಹಾಗೂ ಹೊರರಾಜ್ಯಗಳ ಐವಿಎಫ್ ಸೆಂಟರ್‌ಗಳಿಗೆ ಕಳುಹಿಸಿ, ಮಹಿಳೆಯರ ದೇಹದಿಂದ ಅಂಡಾಣುಗಳನ್ನು ಕದಿಯಲಾಗುತ್ತಿತ್ತು ಎಂಬ ಮಾಹಿತಿ ಈಗ ಬಟಾಬಯಲಾಗಿದೆ.

ಕಾನೂನಿನ ಪ್ರಕಾರ ಮಹಿಳೆಯೊಬ್ಬರು ಜೀವಿತಾವಧಿಯಲ್ಲಿ ಇಂತಿಷ್ಟೇ ಅಂಡಾಣುಗಳನ್ನು ಮಾತ್ರ ಉತ್ಪತ್ತಿ ಮಾಡುತ್ತಾಳೆ. ಆದರೆ ಈ ಗ್ಯಾಂಗ್‌ ಪ್ರತಿ ಮಹಿಳೆ ನೀಡುವುದಕ್ಕಿಂತ 30-35 ಹೆಚ್ಚುವರಿ ಅಂಡಾಣುಗಳನ್ನು ಒತ್ತಾಯಪೂರ್ವಕವಾಗಿ ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ಸತತವಾಗಿ ಇಂಜೆಕ್ಷನ್ ನೀಡಿ ಸರ್ಜರಿ ಮಾಡಿದ್ದರಿಂದ ಆ ಮಹಿಳೆಯರ ಗರ್ಭಕೋಶ ಹಾಗೂ ಆರೋಗ್ಯ ಸಂಪೂರ್ಣ ಹದಗೆಡುವ ಅಪಾಯವಿತ್ತು. ಆದರೂ ಹಣದಾಸೆಗೆ ಬಿದ್ದ ಈ ಜಾಲ ಯಾವುದೇ ವೈದ್ಯಕೀಯ ನಿಯಮಗಳನ್ನು ಪಾಲಿಸದೆ ಮಹಿಳೆಯರ ಜೀವದ ಜೊತೆ ಚೆಲ್ಲಾಟವಾಡಿದೆ.

ನಕಲಿ ಆಧಾರ್, ಫೇಕ್ ಮೆಡಿಕಲ್ ಸರ್ಟಿಫಿಕೇಟ್!

ನಿಯಮಗಳ ಪ್ರಕಾರ ಪದೇ ಪದೇ ಅಂಡಾಣು ದಾನ ಮಾಡುವ ಹಾಗಿಲ್ಲ. ಹೀಗಾಗಿ ಆಸ್ಪತ್ರೆಗಳು ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚಲು ನಕಲಿ ಆಧಾರ್ ಕಾರ್ಡ್, ಫೇಕ್ ಪ್ಯಾನ್ ಕಾರ್ಡ್, ನಕಲಿ ಒಪ್ಪಿಗೆ ಪತ್ರಗಳು ಮತ್ತು ಸುಳ್ಳು ರಕ್ತ ಪರೀಕ್ಷಾ ವರದಿಗಳನ್ನು ಸೃಷ್ಟಿಸಲಾಗುತ್ತಿತ್ತು. ಪ್ರತಿ ಬಾರಿ ಬೇರೆ ಬೇರೆ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ ಮಹಿಳೆಯರನ್ನು ಹೊಸ ದಾನಿಗಳಂತೆ ಬಿಂಬಿಸಲಾಗುತ್ತಿತ್ತು. ಈ ಕೃತ್ಯದಲ್ಲಿ ಕೆಲವು ಖಾಸಗಿ ಐವಿಎಫ್ ಕೇಂದ್ರಗಳು ಮತ್ತು ಎಆರ್‌ಟಿ (ART) ಬ್ಯಾಂಕ್‌ಗಳ ವೈದ್ಯರು ನೇರವಾಗಿ ಶಾಮೀಲಾಗಿದ್ದು, ಸ್ಥಳೀಯ ದಲ್ಲಾಳಿಗಳಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡುತ್ತಿದ್ದರು ಎಂಬುದು ಬಯಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಅಂಡಾಣು ಕೊಟ್ಟ ಮಹಿಳೆಯೊಬ್ಬಳಿಗೆ ಮಧ್ಯವರ್ತಿಗಳು ಮಾತುಕೊಟ್ಟ ಹಣವನ್ನು ಪೂರ್ತಿಯಾಗಿ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ ನೇರವಾಗಿ ಆರೋಗ್ಯ ಇಲಾಖೆಗೆ ದೂರು ನೀಡಿದ್ದೇ ಈ ರಾಕೆಟ್ ಬಯಲಾಗಲು ಕಾರಣವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬದ್ಲಾಪುರದ ಸುಲಕ್ಷಣಾ ಗಡೇಕರ್ ಮನೆ ಮೇಲೆ ದಾಳಿ ನಡೆಸಿದಾಗ ಸುಮಾರು 4 ಲಕ್ಷ ರೂ. ಮೌಲ್ಯದ ಹಾರ್ಮೋನ್ ಇಂಜೆಕ್ಷನ್‌ಗಳು ಮತ್ತು ಸಿರಿಂಜ್‌ಗಳು ಪತ್ತೆಯಾಗಿದ್ದವು.

ಐವರು ವೈದ್ಯರು ಸೇರಿ 15 ಆರೋಪಿಗಳು!

ಈ ಜಾಲದ ಬೆನ್ನುಬಿದ್ದ ಪೊಲೀಸರು ಬರೋಬ್ಬರಿ 5,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ 5 ಮಂದಿ ಐವಿಎಫ್ ಸ್ಪೆಷಲಿಸ್ಟ್ ವೈದ್ಯರು ಸೇರಿದಂತೆ 15 ಮಂದಿಯ ಹೆಸರಿದೆ. ಈಗಾಗಲೇ 8 ಆರೋಪಿಗಳು ಜೈಲುಪಾಲಾಗಿದ್ದಾರೆ. ಅಂಡಾಣು ನೀಡಿ ಹಣ ಪಡೆದಿದ್ದ ಮಹಿಳೆಯೇ ನಂತರ ಇತರ ಮಹಿಳೆಯರನ್ನು ಬಲೆಗೆ ಕೆಡವುವ ಏಜೆಂಟ್ ಆಗಿ ಬದಲಾಗಿದ್ದ ಕರಾಳ ಸತ್ಯವೂ ಹೊರಬಿದ್ದಿದೆ.

ಸದ್ಯ ಪ್ರಕರಣದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ (ED), ಅಕ್ರಮವಾಗಿ ಹರಿದಾಡಿದ ಕೋಟ್ಯಂತರ ರೂಪಾಯಿ ಹವಾಲಾ ಮತ್ತು ಕಪ್ಪುಹಣದ ಮೂಲವನ್ನು ಕೆದಕುತ್ತಿದೆ. ವೈದ್ಯರ ಪಾಲಿಗೆ ದೇವರಂತಿರಬೇಕಾದ ಆಸ್ಪತ್ರೆಗಳೇ ಬಡ ಹೆಣ್ಣುಮಕ್ಕಳ ಹೊಟ್ಟೆಯ ಮೇಲೆ ಹೊಡೆದು ಹಣ ಲೂಟಿ ಮಾಡುತ್ತಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ, (ಏಜೆನ್ಸೀಸ್​).