- ಲಿಯೋನಲ್ ಮೆಸ್ಸಿ ಕೋಲ್ಕತ ಎಂಟ್ರಿ ಮಾಡಿತು ದೊಡ್ಡ ಮೆಸ್!
- ಫುಟ್ಬಾಲ್ ದಂತಕಥೆ ದಿಢೀರ್ ಓಟಕ್ಕೆ ಫ್ಯಾನ್ಸ್ ಆಕ್ರೋಶ
- ಕೋಲ್ಕತ ಘಟನೆ ಬೆನ್ನಲ್ಲೇ ಹೈದರಾಬಾದ್ ಖಾಕಿ ಕಟ್ಟೆಚ್ಚರ
ಕೋಲ್ಕತ: ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಫುಟ್ಬಾಲ್ ದಂತಕಥೆ ಮೆಸ್ಸಿ, GOAT ಇಂಡಿಯಾ ಟೂರ್-2025ರ ಭಾಗವಾಗಿ 3 ದಿನಗಳ ಭಾರತ ಪ್ರವಾಸಕ್ಕಾಗಿ ಇಂದು (ಡಿ.13) ಮುಂಜಾನೆ 1.30ರ ಸುಮಾರಿಗೆ ಕೋಲ್ಕತಾಗೆ ಬಂದಿಳಿದರು. ಈ ಸಂದರ್ಭದಲ್ಲಿ, ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟ ಅವರು, ಹೆಚ್ಚು ಸಮಯ ಇರದ ಹಿನ್ನೆಲೆ ಮೈದಾನಕ್ಕೆ ಆಗಮಿಸಿದ್ದ ಜನರು ಕುಪಿತಗೊಂಡರು. ಬಾಟಲಿ ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಕೋಪದಿಂದ ಎಸೆದು, ಮೆಸ್ಸಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಈ ಘಟನೆ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಹೈಅಲರ್ಟ್ ಆಗಿದ್ದು, ಮೆಸ್ಸಿ ಭೇಟಿ ಕೊಡಲಿರುವ ಎರಡನೇ ಸ್ಥಳವಾದ ಉಪ್ಪಾಳ್ ಕ್ರೀಡಾಂಗಣದ ಬಳಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋಲ್ಕತ ಸ್ಟೇಡಿಯಂನಲ್ಲಿ ಉಂಟಾದ ಗದ್ದಲ, ಕುರ್ಚಿಗಳು ಮತ್ತು ನೀರಿನ ಬಾಟಲಿಗಳ ಎಸೆತದಂತಹ ಘಟನೆಗಳು ಇಲ್ಲಿ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
3,000ಕ್ಕೂ ಅಧಿಕ ಜನರಿಗೆ ಬಿಗಿ ಭದ್ರತಾ ವ್ಯವಸ್ಥೆ
ಮೆಸ್ಸಿ ಮತ್ತು ತೆಲಂಗಾಣ ಸಿಎಂ ರೇವಂತ್ ಅವರ ಸ್ನೇಹಪರ ಫುಟ್ಬಾಲ್ ಪಂದ್ಯವು ಇಂದು ಸಂಜೆ 7 ಗಂಟೆಗೆ ಉಪ್ಪಾಳ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ 3,000ಕ್ಕೂ ಅಧಿಕ ಜನರಿಗೆ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಟಿಕೆಟ್ ಇಲ್ಲದೆ ಜನರು ಸ್ಟೇಡಿಯಂ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಪೊಲೀಸರು ಟೈಟ್ ಸೆಕ್ಯೂರಿಟಿಗೆ ಕರೆ ನೀಡಿದ್ದಾರೆ.
3,500 ಪೊಲೀಸ್ ಸಿಬ್ಬಂದಿ ಕರ್ತವ್ಯ
ಸುಮಾರು 3,500 ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದು, 450 ಕ್ಯಾಮೆರಾಗಳೊಂದಿಗೆ ಸ್ಟೇಡಿಯಂ ಸುತ್ತ ಹದ್ದಿನ ಕಣ್ಣು ಇಡಲಾಗಿದೆ. ಡ್ರೋನ್ ಕ್ಯಾಮೆರಾಗಳನ್ನು ಸಹ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸರು ಮಫ್ತಿಯಲ್ಲಿ ಸಂಚರಿಸಲಿದ್ದಾರೆ. ಒಟ್ಟು 25,000 ಜನರು ಪಂದ್ಯವನ್ನು ವೀಕ್ಷಿಸಲು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).