ದೆಹಲಿ: ನಾಲ್ಕು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ದೆಹಲಿಯಲ್ಲಿ ಸಿಕ್ಕ ಸ್ವಾಗತ ಅದ್ಭುತವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಶಿಷ್ಟಾಚಾರವನ್ನು ಬದಿಗಿಟ್ಟು ಪುಟಿನ್ರನ್ನು ಸ್ವಾಗತಿಸಿದ್ದು, ಇದಾದ ನಂತರದ ಉಭಯ ನಾಯಕರ ಖಾಸಗಿ ಭೋಜನಕೂಟಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಎಲ್ಲವೂ ವಿಶೇಷವಾಗಿತ್ತು.
ಈ ನಡುವೆ ಪ್ರಧಾನಿ ಮೋದಿ ತಾವೂ ಸಾಮಾನ್ಯವಾಗಿ ಬಳಸುವ ರೇಂಜ್ ರೋವರ್ ಬದಲಿಗೆ, ಬಿಳಿ ಬಣ್ಣದ ಟೊಯೋಟಾ ಫಾರ್ಚೂನರ್ ಆಯ್ಕೆ ಮಾಡಿಕೊಂಡಿದ್ದು ಸದ್ಯ ದೇಶ್ಯಾದ್ಯಂತ ಚರ್ಚೆಯ ವಿಷಯವಾಗಿದೆ.
ಟೊಯೋಟಾ ಫಾರ್ಚೂನರ್ ಕಾರ್ನ್ನು ಆಯ್ಕೆ ಮಾಡಿಕೊಳ್ಳಲು ಏನಾದರೂ ನಿರ್ದಿಷ್ಟ ಕಾರಣವಿದೆಯೇ..? ಅಥವಾ ಬೇರೆ ಯಾವ ಕಾರಣವಿಲ್ಲದೇ ಸಾಮಾನ್ಯವಾಗಿ ಅದರಲ್ಲಿ ಪ್ರಯಾಣಿಸಿದರೇ ಎನ್ನುವುದು ಈಗ ಚರ್ಚೆಯ ವಿಷಯ. ಇಡೀ ಜಗತ್ತು ಪುಟಿನ್ರ ಈ ಭೇಟಿಯನ್ನು ಗಂಭೀರವಾಗಿ ಗಮಸಿಸುತ್ತಿದ್ದ ಸಂದರ್ಭದಲ್ಲಿ ಜಪಾನೀಸ್ ಬ್ರಾಂಡ್ ಕಾರ್ ಆಯ್ಕೆ ಮಾಡಿರುವುದರ ಹಿಂದೆ ಏನಾದರು ಬಲವಾದ ಕಾರಣ ಇರಬಹುದೇ ಎಂಬುದರ ಕುರಿತು ಹಲವಾರು ತಜ್ಞರು ತಮ್ಮದೇ ಆದ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕುತೂಹಲಕಾರಿ ಎಂಬಂತೆ ಇತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ರಷ್ಯಾದ ಸಚಿವ ಆಂಡ್ರೇ ಬೆಲೌಸೊವ್ ಅವರೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದಾಗ ಬಿಳಿ ಫಾರ್ಚೂನರ್ ಕಾರ್ ಬಳಸಿರುವುದೇ ಈಗ ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ಫಾರ್ಚೂನರ್ ಮೂವ್‌ನ ಬಳಕೆಯ ಹಿಂದೆ ಏನಿರಬಹುದು ಕಾರಣ..?
ಯುರೋಪಿಯನ್ ಬ್ರಾಂಡ್‌ಗಿಂತ ಜಪಾನಿನ ವಾಹನ ತಯಾರಕ ಟೊಯೋಟಾ ತಯಾರಿಸಿದ ಫಾರ್ಚೂನರ್ನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಅಧಿಕೃತ ವಾಹನಗಳಲ್ಲಿ ರೇಂಜ್ ರೋವರ್ ಮತ್ತು ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಸೇರಿವೆ. ಟಾಟಾ ಮೋಟಾರ್ಸ್ ಒಡೆತನದ ರೇಂಜ್ ರೋವರ್ನ್ನು ಯುಕೆಯಲ್ಲಿ ತಯಾರಿಸಲಾಗುತ್ತದೆ. ಇತ್ತ ಮರ್ಸಿಡಿಸ್ ಬೆನ್ಜ್ ಜರ್ಮನ್ ಆಟೋಮೋಟಿವ್ ಬ್ರಾಂಡ್ ಆಗಿದೆ. ಯುಕೆ ಮತ್ತು ಜರ್ಮನಿ ಎರಡೂ ಉಕ್ರೇನ್ ಯುದ್ಧದ ಮೇಲೆ ರಷ್ಯಾ ವಿರುದ್ಧ ವ್ಯಾಪಕ ನಿರ್ಬಂಧಗಳನ್ನು ವಿಧಿಸಿವೆ.
ಈ ರೀತಿಯ ಸನ್ನಿವೇಶದಲ್ಲಿ ಪುಟಿನ್ ಯಾವುದೇ ಯುರೋಪಿಯನ್ ಬ್ರಾಂಡ್ ವಾಹನದಲ್ಲಿ ಪ್ರಯಾಣಿಸುವುದು ಬೇರೆ ರೀತಿಯ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಇಬ್ಬರು ನಾಯಕರು ಟೊಯೋಟಾ ಫಾರ್ಚೂನರ್‌ನಲ್ಲಿ ಪ್ರಧಾನಿಯವರ ನಿವಾಸಕ್ಕೆ ತೆರಳಿದ್ದು, ಮೋದಿ ಅವರ ರೇಂಜ್ ರೋವರ್ ಮತ್ತು ಪುಟಿನ್ ಅವರ ಔರಸ್ ಸೆನಾಟ್ ಈ ಬಿಳಿ ಫಾರ್ಚೂನರ್ನ್ನು ಹಿಂಬಾಲಿಸಿದವು ಎನ್ನಲಾಗಿದೆ.
ಫಾರ್ಚೂನರ್ ಆಯ್ಕೆ ಮಾಡಲು ಅದರ ಆಸನ ವ್ಯವಸ್ಥೆ ಕಾರಣ ಎಂದು ಮೂಲಗಳು ತಿಳಿಸಿದ್ದು, ಪ್ರಧಾನ ಮಂತ್ರಿಗಳ ರೇಂಜ್ ರೋವರ್ ಕಾರ್ನಲ್ಲಿ ಮೂರನೇ ಸಾಲು ಇಲ್ಲದಿರುವುದರಿಂದ, ಇಬ್ಬರು ನಾಯಕರೊಂದಿಗೆ ಇಂಟರ್ಪ್ರಿಟರ್‌ಗಳು ಪ್ರಯಾಣಿಸಲು ಸಾಧ್ಯವಿರದ ಕಾರಣ ಇದು ಅನಿವಾರ್ಯವಾಗಿತ್ತು ಎನ್ನಲಾಗಿದೆ. ಟೊಯೋಟಾ ಫಾರ್ಚೂನರ್ ಹೆಚ್ಚುವರಿ ಸಾಲನ್ನು ಹೊಂದಿರುವುದರಿಂದ. ಪ್ರಧಾನಿ ಮೋದಿ ಮತ್ತು ಪುಟಿನ್ ಹತ್ತುವ ಮೊದಲೇ ಇಂಟರ್ಪ್ರಿಟರ್‌ಗಳು ವಾಹನದಲ್ಲಿ ಕುಳಿತಿದ್ದರು ಮತ್ತು ಎರಡೂ ದೇಶಗಳ ಭದ್ರತಾ ತಂಡಗಳು ಕಾರಿನ ಆಯ್ಕೆಯನ್ನು ಅನುಮೋದಿಸಿದವು ಎಂದು ಮೂಲಗಳು ತಿಳಿಸಿವೆ.
ಪಾಶ್ಚಿಮಾತ್ಯ ದೇಶಕ್ಕೆ ಸಂದೇಶ...?
ಈ ನಡುವೆ ಕಾರ್ ಬದಲಾವಣೆಯನ್ನು ಬಳಸಿಕೊಂಡಿರುವ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮತ್ತು ಅನೇಕ ವಿಶ್ಲೇಷಕರು ಫಾರ್ಚೂನರ್ ರಾಜತಾಂತ್ರಿಕತೆ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ರಕ್ಷಣಾ ವಿಶ್ಲೇಷಕ ಕರ್ನಲ್ ರೋಹಿತ್ ದೇವ್ "ಪಶ್ಚಿಮಕ್ಕೆ ಒಂದು ಸಂದೇಶ" ಎಂದು ಟ್ವೀಟ್ ಮಾಡಿದ್ದಾರೆ(ಏಜೆನ್ಸೀಸ್).