Uttar Pradesh Election: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೈತ್ರಿಕೂಟದ ಪಾಲುದಾರರ ನಡುವಿನ ಒಗ್ಗಟ್ಟಿನ ಮಹತ್ವವನ್ನು ಒತ್ತಿಹೇಳಿದ್ದು, ಪ್ರತಿಯೊಂದು ಪಕ್ಷಕ್ಕೆ ಸಿಗುವ ಸ್ಥಾನಗಳ ಸಂಖ್ಯೆಗಿಂತ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಎಲ್ಲರು ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, ಸೀಟು ಹಂಚಿಕೆ ಕುರಿತಾದ ಚರ್ಚೆಗಳು ಮೈತ್ರಿಕೂಟದ ನೈಜ ಉದ್ದೇಶವನ್ನು ಮರೆಮಾಚಬಾರದು, ಎಲ್ಲಾ ಮಿತ್ರಪಕ್ಷಗಳು ಗೆಲುವಿಗಾಗಿ ಒಟ್ಟಾಗಿ ಕೆಲಸ ಮಾಡುವುದು ನಮ್ಮ ಪ್ರಮುಖ ಗುರಿ ಎಂದು ಹೇಳಿದರು.
ಮಕ್ಸದ್ ಜಬ್ ಸಾಫ್ ಹೋ ತೊ ಹಾತ್-ಮೇನ್-ಹಾತ್ ಹೋತಾ ಹೈ, ನಿಗಾಹ್ ಮಂಜಿಲ್ ಪರ್ ಹೋ ತೊ ಸಫರ್ ಆಸಾನ್ ಹೋತಾ ಹೈ!(ಉದ್ದೇಶವು ಸ್ಪಷ್ಟವಾಗಿದ್ದಾಗ ಕೈಯಲ್ಲಿ ಕೈ ಇರುತ್ತದೆ, ಗುರಿಯ ಮೇಲಿದ್ದಾಗ ಪ್ರಯಾಣ ಸುಲಭವಾಗುತ್ತದೆ!) ಮೈತ್ರಿಕೂಟವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಅಥವಾ ಯಾವ ಸ್ಥಾನವು ಯಾವ ಪಕ್ಷಕ್ಕೆ ಹೋಗುತ್ತದೆ ಎಂಬುದು ಮುಖ್ಯವಾದ ವಿಷಯವಲ್ಲ ಎಂದು ಅಖಿಲೇಶ್ ಯಾದವ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಯಾದವ್ ತಮ್ಮ ಅದೇ ಪೋಸ್ಟ್‌ನಲ್ಲಿ ತಮ್ಮ ಸಂದೇಶವನ್ನು ಪುನರುಚ್ಚರಿಸುತ್ತಾ, ಫಿರ್ ದೋಹ್ರಾತೇ ಹೈಂ: ಬಾತ್ ಸೀಟ್ ಕಿ ನಹಿ ಜೀತ್ ಕಿ ಹೈ. (ಮತ್ತೊಮ್ಮೆ ಪುನರಾವರ್ತಿಸುತ್ತೇವೆ: ಇದು ಸೀಟುಗಳ ಬಗ್ಗೆ ಅಲ್ಲ, ಗೆಲುವಿನ ಬಗ್ಗೆ.) ಈ ಗೆಲುವು ನಮ್ಮ ಮೈತ್ರಿಕೂಟದಲ್ಲಿರುವ ಪಕ್ಷಗಳಿಗಿಂತ ದೊಡ್ಡದಾಗಿರುತ್ತದೆ; ಇದು ನಮ್ಮೆಲ್ಲರ ಗೆಲುವಾಗಿರುತ್ತದೆ, ಕೋಮುವಾದವು ಎಂದಿಗೂ ತಲೆ ಎತ್ತದಂತೆ ಹೋರಾಟದಲ್ಲಿ ಮುಂದುವರಿಯುವ ಆ ಏಕೀಕೃತ ಪ್ರಯತ್ನದ ಫಲವಾಗಿರುತ್ತದೆ ಎಂದು ಅವರು ಹೇಳಿದರು.
ಮೈತ್ರಿಕೂಟದ ಜಂಟಿ ಹೋರಾಟವು ಸಂಪ್ರದಾಯಿಕತಾ ಫಿರ್ ಕಭಿ ಸಿರ್ ನಾ ಉಠಾ ಸಕೆ (ಕೋಮುವಾದವು ಎಂದಿಗೂ ತಲೆ ಎತ್ತಬಾರದು) ಎಂಬುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮೀಸಲಾತಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲು ಈ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ದೇಶದಲ್ಲಿ ಸೌಹಾರ್ದತೆಯನ್ನು ಮರುಸ್ಥಾಪಿಸುವ ಕುರಿತು ಮಾತನಾಡಿದ ಎಸ್ಪಿ ಅಧ್ಯಕ್ಷರು, ದೇಶ್ ಕಾ ಸೌಹಾರ್ಡ್ ಫಿರ್ ಸೇ ಖಿಲ್ಕಿಲಾಯೆ" (ದೇಶದ ಸೌಹಾರ್ದತೆಯು ಮತ್ತೆ ಮರುಕಳಿಸಲಿ) ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಪ್ರಯತ್ನವು ಸಹಾಯ ಮಾಡಬೇಕು ಎಂದು ಹೇಳಿದರು. ದೇಶದ ಪ್ರಗತಿ ಮತ್ತು ಸಮೃದ್ಧಿಯನ್ನು ಉಲ್ಲೇಖಿಸುವ ಮೂಲಕ ಯಾದವ್ ತಮ್ಮ ಪೋಸ್ಟನ್ನು ಕೊನೆಗೊಳಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಸಹ ಗೆಲ್ಲುತ್ತಿರಲಿಲ್ಲ, ಆ ಪಕ್ಷದ ದೊಡ್ಡ ನಾಯಕ ರಾಹುಲ್ ಗಾಂಧಿ ಅವರೇ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗುವ ಹಂತಕ್ಕೆ ತಲುಪಿದ್ದರು ಎಂದು ಎಸ್ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್ ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಪಟೇಲ್, ಲೋಕಸಭಾ ಚುನಾವಣೆಯಲ್ಲಿ ನಾವು 37 ಸ್ಥಾನಗಳನ್ನು ಗೆದ್ದಿದ್ದು, ರಾಜ್ಯದಲ್ಲಿ ಬಲಿಷ್ಠರಾಗಿದ್ದೇವೆ. ಆದ್ದರಿಂದ ಕೈ ನಾಯಕರು 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಕೇಳಬಾರದು ಮತ್ತು ಕೊಟ್ಟ ಕ್ಷೇತ್ರಗಳ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ನೀಡದೆ ಖುಷಿಯಾಗಿರಬೇಕು ಮತ್ತು ಸಹಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಂಸದ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ಥಿ, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ನಾಯಕರಿಗೆ ಸಮಾಜವಾದಿ ಪಕ್ಷವು ಕಡಿವಾಣ ಹಾಕಬೇಕು ಎಂದು ತಿಳಿಸಿದರು. ಇಂಡಿಯಾ ಮೈತ್ರಿಕೂಟದ ಬೆಂಬಲದಿಂದಲೇ ಅವರು ಸಂಸದರಾಗಿದ್ದಾರೆ. ಅವರು ತಮ್ಮ ಮಿತಿಗಳನ್ನು ಮೀರಿ ಮಾತನಾಡಬಾರದು ಮತ್ತು ಇಂತಹ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ತಪ್ಪಿಸಬೇಕು ಎಂದು ಅವಸ್ಥಿ ತಿರುಗೇಟು ನೀಡಿದರು(ಏಜೆನ್ಸೀಸ್).