ಸಿಜೆಪಿ ಹೋರಾಟದ ಗೆಲುವನ್ನು Gen-Z ಶೈಲಿಯಲ್ಲಿ ಆಚರಿಸಿದ ನೆಟ್ಟಿಗರು! CJP Protest (ಚಿತ್ರ X)
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆದಾಗ್ಯೂ, ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಧರಣಿ, ಸರಣಿ ವೀಡಿಯೋಗಳು ಹಾಗೂ ಪ್ರತಿಭಟನೆಯ (CJP Protest) ಅಪ್‌ಡೇಟ್‌ಗಳು ತಕ್ಷಣವೇ ತಮಾಷೆಯ ಮೀಮ್ಸ್ ಆಗಿ ಪರಿವರ್ತನೆಗೊಂಡಿವೆ.
ಈ ರಾಜೀನಾಮೆ ಸುದ್ದಿ ಹೊರಬಿದ್ದ ಬೆನ್ನಲ್ಲೇ 'X' (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್‌ಗಳು ಮೀಮ್ಸ್‌ಗಳಿಂದ ತುಂಬಿಹೋದವು. ಬಾಲಿವುಡ್‌ನ ಜನಪ್ರಿಯ ಹಾಸ್ಯ ಸಿನಿಮಾಗಳಾದ ‘ಹೇರಾ ಫೇರಿ’, ‘ವೆಲ್ಕಮ್’, ‘ಗೋಲ್‌ಮಾಲ್’ ಹಾಗೂ ‘ಫಿರ್ ಹೇರಾ ಫೇರಿ’ ಚಿತ್ರಗಳ ತಮಾಷೆಯ ಸನ್ನಿವೇಶಗಳನ್ನು ಬಳಸಿಕೊಂಡು ರಾಜೀನಾಮೆಗೆ ಸಂಯೋಜಿಸಿ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದರು. ಹಲವರು ನೃತ್ಯ ಮಾಡುತ್ತಿರುವ ಹಾಗೂ ಸಂಭ್ರಮಿಸುತ್ತಿರುವ ಜಿಎಫ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಮತ್ತೊಂದೆಡೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸುತ್ತಿರುವ ವೀಡಿಯೋಗಳು, ಮಿಷನ್ ಕಂಪ್ಲೀಟೆಡ್ ಎಂಬ ಸಾಲುಗಳೊಂದಿಗೆ ವೈರಲ್ ಆದವು. ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ಯುವಜನರು ಸುದೀರ್ಘ ಹೋರಾಟ ನಡೆಸಿದ್ದರು. ಈ ಹೋರಾಟದ ಪ್ರಮುಖ ಬೇಡಿಕೆಗಳಲ್ಲೊಂದಾದ ಶಿಕ್ಷಣ ಸಚಿವರ ರಾಜೀನಾಮೆ ಈಡೇರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮುದಾಯ ಇದನ್ನು ತಮ್ಮ ಸತತ ಶ್ರಮಕ್ಕೆ ಸಿಕ್ಕ ದೊಡ್ಡ ಜಯವೆಂದು ಬಣ್ಣಿಸಿದೆ.
'X' ನಲ್ಲಂತೂ ಇತ್ತೀಚೆಗೆ ವೈರಲ್ ಆಗಿದ್ದ ಸಲ್ಮಾನ್ ಖಾನ್ ಅವರ "Sonam, it's done bro" ಎಂಬ ಡೈಲಾಗ್ ಭಾರೀ ಟ್ರೆಂಡ್ ಆಯಿತು. ಯುವ ಹೋರಾಟಗಾರರು ತಮ್ಮ ಬಹುದಿನಗಳ ಹೋರಾಟ ಕೊನೆಗೂ ಯಶಸ್ವಿಯಾಗಿದೆ ಎಂಬುದನ್ನು ಸೂಚಿಸಲು ಹಾಸ್ಯಾಸ್ಪದ ಸಾಲನ್ನು ಬಳಸಿಕೊಂಡರು. ಇಡೀ CJP ಚಳವಳಿಯುದ್ದಕ್ಕೂ ಗಂಭೀರ ಪ್ರತಿಭಟನೆಯ ಜೊತೆಗೆ ರೀಲ್ಸ್, ಡ್ಯಾನ್ಸ್ ಮತ್ತು ಮೀಮ್ಸ್ಗಳ ಮೂಲಕ ಇಂಟರ್ನೆಟ್ ಸಂಸ್ಕೃತಿಯನ್ನು ಬೆರೆಸಿದ್ದು, ಈ ಹೋರಾಟದ ವಿಶೇಷತೆಯಾಗಿತ್ತು.
ಇದೇ ವೇಳೆ, ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಜನರನ್ನೂ, Gen-Z ಶೈಲಿಯ ಸಂವಹನವನ್ನೂ ತಲುಪುವ ನಿಟ್ಟಿನಲ್ಲಿ ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಸಾಂಪ್ರದಾಯಿಕ ರಾಜಕೀಯ ಭಾಷಣದ ಬದಲು, ಇಂದಿನ ಯುವ ಪೀಳಿಗೆಗೆ ಹತ್ತಿರವಾಗುವಂತಹ ಆಡುಭಾಷೆ ಮತ್ತು ಡಿಜಿಟಲ್ ಸಂಸ್ಕೃತಿಯ ಉಲ್ಲೇಖಗಳನ್ನು ಅವರು ಬಳಸಿದ್ದು ಹೈಲೈಟ್ ಆಗಿತ್ತು (ಏಜೆನ್ಸೀಸ್).